Advertisement

ಬೆಂಗಳೂರಲ್ಲಿ ಈಶಾನ್ಯದವನ ಮೇಲೆ ಜನಾಂಗೀಯ ಹಲ್ಲೆ?

03:45 AM Jan 11, 2017 | Team Udayavani |

ಬೆಂಗಳೂರು: ಮೂರು ದಿನಗಳ ಹಿಂದೆ ಕೋರಮಂಗಲ ಸಮೀಪ ಈಶಾನ್ಯ ಭಾರತೀಯ ಯುವಕನೊಬ್ಬ ಅನುಮಾನಾಸ್ಪದವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ಈ ಘಟನೆಯೂ ಜನಾಂಗೀಯ ಹಲ್ಲೆ ಎಂಬ ವಿವಾದಕ್ಕೆ ಕಾರಣವಾಗಿದೆ. ಈಶಾನ್ಯರ ಬಗ್ಗೆ ದೇಶದ ಇತರ ಭಾಗಗಳಲ್ಲಿ ತಾತ್ಸಾರ ಭಾವನೆ ಇದೆ ಎಂಬ ಆಪಾದನೆಗಳ ನಡುವೆಯೇ ಈ
ಘಟನೆ ನಡೆದಿದೆ.

Advertisement

ಯುವಕನ ಮೇಲೆ ಜನಾಂಗೀಯ ಹಲ್ಲೆ ನಡೆದಿದೆ ಎಂದು ಈಶಾನ್ಯ ಭಾರತೀಯ ಮೂಲದ ವಿದ್ಯಾರ್ಥಿ ಒಕ್ಕೂಟ ಮತ್ತು ಅರುಣಾಚಲ ಪ್ರದೇಶ ಶಾಸಕರೊಬ್ಬರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಪೊಲೀಸರು, ಯುವಕನ ಮೇಲೆ ಹಲ್ಲೆ ನಡೆ 
ದಿರುವ ಬಗ್ಗೆ ಸ್ಪಷ್ಟವಾಗಿಲ್ಲ. ರಸ್ತೆ ಅಪಘಾತದಲ್ಲಿ ಆತ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ. ಗಾಯಾಳು ಕೌದುನ್‌ ಖಂಗ್‌ ಅವರು ಮೂಲತಃ ಆರುಣಾಚಲ ಪ್ರದೇಶ ರಾಜ್ಯದವರಾಗಿದ್ದು, ನಿಮ್ಹಾನ್ಸ್‌ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಚೇತರಿಸಿಕೊಂಡು ಘಟನೆ ಕುರಿತು ಹೇಳಿಕೆ ನೀಡಿದ ಬಳಿಕವಷ್ಟೆ ಹಲ್ಲೆಯೋ ಅಥವಾ ಅಪಘಾತವೋ ಎಂಬುದು ಖಚಿತವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ, ಎಸಿಪಿ ಮಟ್ಟದ ತನಿಖೆಗೆ ನಗರ ಪೊಲೀಸ್‌ ಆಯುಕ್ತ
ಪ್ರವೀಣ್‌ ಸೂದ್‌ ಆದೇಶಿಸಿದ್ದಾರೆ.

ಏನಿದು ಘಟನೆ?: ನಾಲ್ಕು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಖಂಗಮ್‌  ಅವರು, ಈಜೀಪುರ ಸಮೀಪದ ಶ್ರೀನಿವಾಗಿಲು ಬಳಿ ನೆಲೆಸಿದ್ದಾರೆ. ಕೋರಮಂಗಲದ ಪಬ್‌ವೊಂದರಲ್ಲಿ ಕೆಲಸ ಮಾಡುವ ಅವರು, ಜ.6 ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ
ನಡೆದುಕೊಂಡು ತೆರಳುವಾಗ ಈ ಘಟನೆ ನಡೆದಿದೆ. ಅಂದು ರಾತ್ರಿ 1.30ರ ಸುಮಾರಿಗೆ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆ ವೇಳೆ ಗಸ್ತು ಪೊಲೀಸರು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. “ಅಂದು ಗಾಯಾಳುವಿನ ಮೊಬೈಲ್‌ ಗೆ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಸ್ನೇಹಿತನಿಂದ ಕರೆ ಬಂದಿತು. ನಾವೇ ಕರೆ ಸ್ವೀಕರಿಸಿ ಮಾತನಾಡಿದ್ದೆವು. ಆಗ ಯಾವುದೋ ವಾಹನ ಗುದ್ದಿಕೊಂಡು
ಹೋಗಿರಬಹುದು ಎಂದು ಹೇಳಿದ್ದೆವು. ನಂತರ ನಗರದಲ್ಲಿ ನೆಲೆಸಿರುವ ತಮ್ಮ ರಾಜ್ಯದ ಕೆಲವರ ಜತೆ ಆಸ್ಪತ್ರೆಗೆ ಬಂದು ಗಾಯಾಳು ಯೋಗಕ್ಷೇಮ ವಿಚಾರಿಸಿದ್ದರು. ಈಗ ಜನಾಂಗೀಯ ಹಲ್ಲೆ ಆರೋಪ ಮಾಡುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಅರುಣಾಚಲ ಶಾಸಕರಿಂದ ತನಿಖೆಗೆ ಒತ್ತಾಯ: ಈ ಘಟನೆ ಬಗ್ಗೆ ಮಾಹಿತಿ ಪಡೆದ ಅರುಣಾಚಲ ಪ್ರದೇಶದ ಸ್ಥಳೀಯ ಶಾಸಕ ಗೇಬ್ರಿಯಲ್‌ ದೇವಾಂಗ್‌ ಅವರು, ಬೆಂಗಳೂರಿನಲ್ಲಿ ಖಂಗಮ್‌ ಮೇಲೆ ಜನಾಂಗೀಯ ಹಲ್ಲೆ ನಡೆದಿದೆ ಎಂದು ಸೋಮವಾರ
ಆರೋಪಿಸಿದ್ದಾರೆ. ಅಲ್ಲದೆ ಘಟನೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ಅವರು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಜತೆ ಸಹ ಮಾತನಾಡಿರುವ ಅರುಣಾಚಲ ಪ್ರದೇಶದ ಪೊಲೀಸರು, ಘಟನೆ ಕುರಿತು ತನಿಖೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಂಬಂಧ ಎಸಿಪಿ ಮಟ್ಟದ ತನಿಖೆಗೆ ಆಯುಕ್ತರು
ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದಿಂದ ಗಾಯವಲ್ಲ- ವೈದ್ಯರು: ಖಂಗಮ್‌ಗೆ ಚಿಕಿತ್ಸೆ ನೀಡಿದ ವೈದ್ಯರು, ಆತನಿಗೆ ಅಪಘಾತದಿಂದ ಗಾಯವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಶಾನ್ಯ ಭಾರತೀಯ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ
ಬಂದಿದೆ. ಇನ್ನು ಚಲಿಸುವ ಕಾರಿನಿಂದ ಆತನನ್ನು ಕೆಳಗೆ ದೂಡುತ್ತಿರುವ ಸಿಸಿಟೀವಿ ಕ್ಯಾಮೆರಾ ದೃಶ್ಯಾವಳಿಗಳು ಸೆರೆಯಾಗಿವೆ ಎಂಬ ಮಾತುಗಳು ಕೇಳಿ ಬಂದಿವೆ. ಗಾಯಾಳು ತಲೆಗೆ ಬಲವಾದ ಪೆಟ್ಟಾಗಿದ್ದರಿಂದ ಅಪಘಾತದಿಂದ ಗಾಯವಾಗಿರಬಹುದು. ಆದರೆ ಈಗ
ಆರೋಪಗಳ ಬಂದ ಹಿನ್ನೆಲೆಯಲ್ಲಿ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರುಣಾಚಲ ಪ್ರದೇಶ ಮೂಲದ ಕೌದುನ್‌ ಖಂಗಮ್‌ ಅವರು ನಿಗೂಢವಾಗಿ ಗಾಯಗೊಂಡಿರುವ ಸಂಬಂಧ ಗಂಭೀರ ಸ್ವರೂಪದ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಈ ಬಗ್ಗೆ ಪಬ್‌ ನೌಕರರು ಹಾಗೂ ಅವರ ಸ್ನೇಹಿತರ ವಿಚಾರಣೆ ನಡೆಸಲಾಗಿದೆ. ಘಟನಾ ಸ್ಥಳದ ಸಿಸಿಟೀವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ. ಆದರೆ ಈವರೆಗಿನ ತನಿಖೆಯಲ್ಲಿ ಹಲ್ಲೆ ನಡೆದ ಬಗ್ಗೆ ಸ್ಪಷ್ಟವಾಗಿಲ್ಲ 

Advertisement

ಡಾ| ಬೋರಲಿಂಗಯ್ಯ ಡಿಸಿಪಿ, ಆಗ್ನೇಯ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next