ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣಾ ವರ್ಷ ಸಮೀಪಿಸುತ್ತಿದ್ದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಬದಲಾವಣೆಯಾಗಿದ್ದು, ಎನ್.ಎಸ್. ಮೇಘರಿಕ್ ಜಾಗಕ್ಕೆ ಪ್ರವೀಣ್ ಸೂದ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ನೂತನ ಆಯುಕ್ತರು ಹೊಸ ವರ್ಷದ ಮೊದಲ ದಿನ ಅಧಿಕಾರ ಸ್ವೀಕರಿಸಿದ್ದಾರೆ.ಮೇಘರಿಕ್ ಅವರು ಸೂದ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಇಲಾಖೆಯಲ್ಲಿ ಹೊರಗಿನವರ ಹಸ್ತಕ್ಷೇಪ ಮತ್ತು ಶಿಫಾರಸುಗಳಿಗೆ ಮನ್ನಣೆ ಕೊಡದೆ ಖಡಕ್ ಆಗಿದ್ದ ಮೇಘರಿಕ್ ಅವರು ಚುನಾವಣಾ ವರ್ಷದಲ್ಲಿ ಆಡಳಿತಾರೂಢ ಪಕ್ಷಕ್ಕೂ ಅಪಥ್ಯ ಎಂಬ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದು, ಈ ಅಂಶವೇ ಪ್ರವೀಣ್ ಸೂದ್ ಪಾಲಿಗೆ ಸವಾಲಿನ ವಿಷಯವಾಗಿದೆ.
1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಅವರು ಈ ಹಿಂದೆ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಹಾಗೂ 2004ರಿಂದ 2007ರವರೆಗೆ ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಅನುಭವ ಹೊಂದಿದ್ದಾರೆ. ಸಮರ್ಥ ಹಾಗೂ ದಕ್ಷ ಅಧಿಕಾರಿ ಎಂದೇ ಇಲಾಖೆಯಲ್ಲಿ ಹೆಸರು ಪಡೆದಿರುವ ಇವರು ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ತರುವುದರ ಜತೆಗೆ ಪೊಲೀಸ್ ಇಲಾಖೆಯಲ್ಲಿ ಸುಧಾರಣೆಗಳನ್ನು ತರುವಲ್ಲೂ ಮುಂಚೂಣಿಯಲ್ಲಿದ್ದರು. ಕಂಪ್ಯೂಟರ್ ವಿಭಾಗದ ಎಡಿಜಿಪಿಯಾಗಿದ್ದ ಸೂದ್ ಅವರು ಪ್ರಸ್ತುತ ಆಡಳಿತ ವಿಭಾಗದ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಒಂದೆಡೆ ಚುನಾವಣೆ ವರ್ಷ, ಇನ್ನೊಂದೆಡೆ ಚುನಾವಣೆ ಸಮೀಪಿಸುತ್ತಿದ್ದಂತೆ ಗರಿಕೆದರುವ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸುವುದರ ಜತೆಗೆ ಇಲಾಖೆಯ ದಿನನಿತ್ಯದ ವ್ಯವಹಾರಗಳನ್ನೂ ನೋಡಿಕೊಳ್ಳುವ ಸವಾಲು ನೂತನ ಪೊಲೀಸ್ ಆಯುಕ್ತರ ಮುಂದಿದ್ದು, ಅದನ್ನು ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕು. ಹಿಮಾಚಲ ಪ್ರದೇಶದವರು: ಮೂಲತಃ ಹಿಮಾಚಲ ಪ್ರದೇಶದ ಪ್ರವೀಣ್ ಸೂದ್ ಅವರು 1964ರಲ್ಲಿ ಜನಿಸಿದ್ದು, ಐಐಟಿ ದೆಹಲಿ ಮತ್ತು ಬೆಂಗಳೂರಿನ ಐಎಎಂಬಿನಲ್ಲಿಲ್ಲಿ ಪದವಿ ಪಡೆದಿದ್ದು, 1986 ಬ್ಯಾಚ್‌ನಲ್ಲಿ ಐಪಿಎಸ್ ತೇರ್ಗಡೆಯಾಗಿದ್ದರು. 1989ರಲ್ಲಿ ಮೈಸೂರು ಎಸ್ಪಿಯಾಗುವ ಮೂಲಕ ತಮ್ಮ ಸೇವಾವಧಿ ಆರಂಭಿಸಿದರು.
ರಾಯಚೂರು, ಬಳ್ಳಾರಿ, ಮೈಸೂರು ಎಸ್ಪಿಯಾಗಿದ್ದ ಸೂದ್ ಅವರು ಬೆಂಗಳೂರು ನಗರ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. 1999ರಲ್ಲಿ ಮಾರಿಷಸ್ ದೇಶದ ಸರ್ಕಾರಕ್ಕೆ ಪೊಲೀಸ್ ಸಲಹೆಗಾರರಾಗಿ ಮೂರು ವರ್ಷ ಸೇವೆ. ಅತ್ಯುತ್ತಮ ಸೇವೆಗಾಗಿ 1996ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ, ಶ್ಲಾಘನೀಯ ಸೇವೆಗಾಗಿ 2002ರಲ್ಲಿ ರಾಷ್ಟ್ರಪತಿ ಪೊಲೀಸ್ ಪದಕ, ಗೌರವಾನ್ವಿತ ಸೇವೆಗಾಗಿ 2011ರಲ್ಲಿ ರಾಷ್ಟ್ರಪತಿ ಪದಕ, 2006ರಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿರ್ವಹಣೆಗೆ ಸಲ್ಲಿಸಿದ ಸೇವೆಗಾಗಿ ಪ್ರಿನ್ಸ್ ಮೈಕೆಲ್ ಇಂಟರ್ ನ್ಯಾಷನಲ್ ಪ್ರಶಸ್ತಿ ಅವರಿಗೆ ಲಭಿಸಿದೆ. ಸಂಚಾರ ನಿರ್ವಹಣೆಗೆ ತಂತ್ರಜ್ಞಾನವನ್ನ ವ್ಯವಸ್ಥಿತವಾಗಿ ಬಳಕೆ ಮಾಡಿದ್ದಕ್ಕೆ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಮೇಲೆ ನಿರೀಕ್ಷೆ ಇಟ್ಟು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನಗರ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಬೆಂಗಳೂರು ಜನತೆಯ ಸೇವೆ ಮಾಡಲು ಅವಕಾಶ ನೀಡಿದ್ದು ಸಂತಸ ತಂದಿದ್ದು, ಅವರ ನಂಬಿಕೆಗೆ ತಕ್ಕಂತೆ ಕೆಲಸ ನಿರ್ವಹಿಸುತ್ತೇನೆ.
ಪ್ರವೀಣ್ ಸೂದ್, ನೂತನ ನಗರ ಪೊಲೀಸ್ ಆಯುಕ್ತ