ರಾಯಚೂರು: ವಿಧಾನ ಪರಿಷತ್ ಸದಸ್ಯತ್ವ ಅವಧಿ ಮುಗಿಯುತ್ತ ಬಂದಿದ್ದು, ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧನಿದ್ದೇನೆ. ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೂ ಮನವಿ ಮಾಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಸಾಮಾನ್ಯ ಸದಸ್ಯನಿಂದ ಎಐಸಿಸಿವರೆಗೂ ನಿಷ್ಠಾವಂತ ಕಾರ್ಯಕರ್ತನಾಗಿ ಶ್ರಮಿಸಿದ್ದೇನೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂ ಧಿ ಅವರ ಸೂಚನೆ ಮೇರೆಗೆ ನನ್ನದಲ್ಲದ ಕ್ಷೇತ್ರವಾಗಿದ್ದ ರಾಮನಗರದಿಂದ ಸ್ಪ ರ್ಧಿಸಿದ್ದೆ. ಸಕ್ರಿಯ ರಾಜಕಾರಣದಲ್ಲಿರುವ ಉದ್ದೇಶದಿಂದ ಲೋಕಸಭೆ ಚುನಾವಣೆಗೆ ಟಿಕೆಟ್ ಕೇಳಿದ್ದೇನೆ ಎಂದರು.
ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಟಿಕೆಟ್ ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ. ಬಿಜೆಪಿಯನ್ನು ಅ ಧಿಕಾರದಿಂದ ದೂರವಿಡಲೆಂದೇ ಕಾಂಗ್ರೆಸ್, ಜೆಡಿಎಸ್ ಒಂದಾಗಿವೆ. ಎರಡೂ ಪಕ್ಷಗಳ ವರಿಷ್ಠರು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದು, ಲೋಕಸಭೆ ಚುನಾವಣೆಯನ್ನು ಜಂಟಿಯಾಗಿ ಎದುರಿಸುವುದಾಗಿ ತಿಳಿಸಿದರು.
ಬಿಜೆಪಿಯವರು ಎಂದಿಗೂ ಮೀಸಲಾತಿ ಪರವಾಗಿಲ್ಲ. ಈಗ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೇಲ್ಜಾತಿಗೆ ಶೇ.10 ಮೀಸಲಾತಿ ನೀಡಲು ಮುಂದಾಗಿದ್ದಾರೆ. ಆದರೆ, ಈ ವಿಚಾರದಲ್ಲಿ ಜನ ಜಾಗೃತರಾಗಬೇಕು. ಬಿಜೆಪಿಯನ್ನು ಸೋಲಿಸಬೇಕು.
– ಎಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ.