Advertisement

ಬೆಂಗಳೂರು ಉತ್ತರ “ಕೈ’ಗಿಟ್ಟ ಜೆಡಿಎಸ್‌

12:22 PM Mar 26, 2019 | Lakshmi GovindaRaju |

ಬೆಂಗಳೂರು: ಜೆಡಿಎಸ್‌ ಮರಳಿ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅಂತಿಮವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ಅವರು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

Advertisement

ಅಭ್ಯರ್ಥಿ ಆಯ್ಕೆ ಸಂಬಂಧ ಸೋಮವಾರ ಇಡೀ ದಿನ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಸಾಕಷ್ಟು ಸರ್ಕಸ್‌ ನಡೆಸಲಾಯಿತು. ಸಂಜೆ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡೂ ಪಕ್ಷಗಳ ಶಾಸಕರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಎರಡೂ ಪಕ್ಷಗಳ ಶಾಸಕರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಅಂತಿಮವಾಗಿ ಕೃಷ್ಣ ಬೈರೇಗೌಡ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಲು ತೀರ್ಮಾನಿಸಿದರು.

ಮಂಗಳವಾರ ಕೃಷ್ಣ ಬೈರೇಗೌಡ ಬೆಂಗಳೂರು ಉತ್ತರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಬಿ.ಎಲ್‌. ಶಂಕರ್‌, ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್‌ಗೌಡ, ವಿಧಾನ ಪರಿಷತ್‌ ಸದಸ್ಯರಾದ ಎಂ. ನಾರಾಯಣಸ್ವಾಮಿ, ಕೆ. ಗೋವಿಂದರಾಜ್‌, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಜಿಲ್ಲಾಧ್ಯಕ್ಷ ರಾಜಕುಮಾರ್‌ ಹೆಸರುಗಳು ಕೇಳಿ ಬಂದಿದ್ದವು.

ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್‌ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಉತ್ತರ ಕ್ಷೇತ್ರದ ಜಿಲ್ಲಾಧ್ಯಕ್ಷ ಎಂ. ರಾಜಕುಮಾರ್‌ ಅವರಿಗೆ ಟಿಕೆಟ್‌ ನೀಡುವಂತೆ ರಾಜ್ಯದ 21 ಜಿಲ್ಲಾ ಘಟಕಗಳ ಅಧ್ಯಕ್ಷರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಬೆಂಗಳೂರಿನ ಜಾತಿ ಲೆಕ್ಕಾಚಾರದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿರುವ ರಿಜ್ವಾನ್‌ ಅರ್ಷದ್‌, ಬೆಂಗಳೂರು ದಕ್ಷಿಣದಲ್ಲಿ ಈಡಿಗ ಸಮುದಾಯದ ಬಿ.ಕೆ. ಹರಿಪ್ರಸಾದ್‌ ಅವರಿಗೆ ಟಿಕೆಟ್‌ ನೀಡಿರುವುದರಿಂದ ಉತ್ತರ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರಿಗೆ ನೀಡಬೇಕೆಂಬ ಬೇಡಿಕೆ ಹೆಚ್ಚಾದ್ದರಿಂದ ಕೃಷ್ಣ ಬೈರೇಗೌಡ ಅವರಿಗೆ ಅವಕಾಶ ದೊರೆಯುವಂತಾಯಿತು.

Advertisement

ಜಾತಿ ಲೆಕ್ಕಾಚಾರದಲ್ಲಿ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಬೆಂಗಳೂರು ಉತ್ತರ ತಮಗೆ ಅನುಕೂಲಕರ ಕ್ಷೇತ್ರ ಎಂದು ತೆಗೆದುಕೊಂಡಿದ್ದ ದೇವೇಗೌಡರು, ಕ್ಷೇತ್ರದಲ್ಲಿ ಮೈತಿ ಪಕ್ಷದ ಏಳು ಜನ ಶಾಸಕರಿದ್ದರೂ, ಕಾಂಗ್ರೆಸ್‌ನ ಐವರು ಶಾಸಕರು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಆಪ್ತರು ಎನ್ನುವ ಕಾರಣಕ್ಕೆ ತುಮಕೂರು ಆಯ್ಕೆ ಮಾಡಿಕೊಂಡಿದ್ದರು.

ಹೀಗಾಗಿ, ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದರು. ಬೆಂಗಳೂರು ಉತ್ತರ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಬೆಳಿಗ್ಗೆ ಬೆಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ಶಾಸಕರ ಸಭೆ ನಡೆಸಿ, ಅಭ್ಯರ್ಥಿ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಿದರು.

ಮನವೊಲಿಸಿದ ಪರಮೇಶ್ವರ್‌: ಹಾಲಿ ಸಂಸದ ಮುದ್ದಹನುಮೇಗೌಡರಿಗೆ ತುಮಕೂರು ಕ್ಷೇತ್ರದ ಟಿಕೆಟ್‌ ಕೈ ತಪ್ಪಿದ್ದರಿಂದ ಮುನಿಸಿಕೊಂಡು ಬಂಡಾಯ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದಾರೆ. ಆದರೆ, ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪ್ರಯತ್ನ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೂಡ ದೂರವಾಣಿ ಮೂಲಕ ಮುದ್ದಹನುಮೇಗೌಡರ ಮನವೊಲಿಸುವ ಯತ್ನ ನಡೆಸಿದರು.ಆದರೆ, ಮುದ್ದಹನುಮೇಗೌಡರು ನಾನು ಬೇರೆ ಕ್ಷೇತ್ರದಲ್ಲಿ ಹೋಗಿ ಸ್ಪರ್ಧೆ ಮಾಡುವಷ್ಟು ದೊಡ್ಡ ವ್ಯಕ್ತಿಯಲ್ಲ. ಬೇರೆ ಕ್ಷೇತ್ರಗಳಿಗೆ ವಲಸೆ ಹೋಗಿ ಸ್ಪರ್ಧೆ ಮಾಡಲು ದೊಡ್ಡ ವ್ಯಕ್ತಿಗಳಿದ್ದಾರೆ. ತಾವು ತುಮಕೂರಿನಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದರು.

ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ವಾಪಸ್‌ ಬಿಟ್ಟುಕೊಟ್ಟಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಇಬ್ಬರೂ ಸೇರಿ ಪ್ರಜಾಪ್ರಭುತ್ವವನ್ನು ಮರುಸ್ಥಾಪನೆ ಮಾಡುತ್ತೇನೆ.
-ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next