Advertisement

ಪಡೀಲ್‌ ಮಾರ್ಗವಾಗಿ ಬೆಂಗಳೂರು ರಾತ್ರಿ ರೈಲು; ಮನವಿಗೆ ರೈಲ್ವೇ ಸಚಿವ ಅಂಗಡಿ ಸ್ಪಂದನೆ

11:37 PM Jan 03, 2020 | Sriram |

ಕುಂದಾಪುರ: ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ರೈಲಿನಲ್ಲಿ ಪ್ರಯಾಣಿಸು ವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಈಗಿರುವ ರೈಲಿನ ಜತೆಗೆ ಪಡೀಲ್‌ ಮಾರ್ಗವಾಗಿ ಬೆಂಗಳೂರು – ಕಾರವಾರ ನಡುವೆ ರಾತ್ರಿ ವೇಳೆ ಹೆಚ್ಚುವರಿ ರೈಲನ್ನು ಆರಂಭಿಸಬೇಕು ಎನ್ನುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದೆ ಶೋಭಾ ಮನವಿಗೆ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಸ್ಪಂದಿಸಿದ್ದಾರೆ. ಈ ಕುರಿತಂತೆ ಪ್ರಸ್ತಾವನೆ ಸಿದ್ಧಪಡಿಸುವಂತೆ ನೈಋತ್ಯ ರೈಲ್ವೇಗೆ ಸೂಚನೆ ನೀಡಿದ್ದಾರೆ.

Advertisement

ಪಡೀಲ್‌ ಮಾರ್ಗವಾಗಿ ಬೆಂಗಳೂರು – ಕಾರವಾರ ರೈಲನ್ನು ಆರಂಭಿಸಬೇಕು ಎನ್ನುವುದಾಗಿ ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿಯ ಮನವಿಯನ್ನು ಸಂಸದೆ ಶೋಭಾ ಕರಂದ್ಲಾಜೆ ರೈಲ್ವೇ ಸಚಿವರ ಗಮನಕ್ಕೆ ತಂದಿದ್ದರು. ಇದನ್ನು ಪುರಸ್ಕರಿಸಿದ ಸಚಿವರು ಹೊಸ ರೈಲು ಆರಂಭಿಸುವ ಸಂಬಂಧ ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಸಂಬಂಧ ಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದಕ್ಕೂ ಮುನ್ನ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೂ ಸಮಿತಿಯು ಕೆಲವು ದಿನಗಳ ಹಿಂದೆ ಪಡೀಲ್‌ ಮಾರ್ಗವಾಗಿ ಕಾರವಾರ – ಬೆಂಗಳೂರು ರೈಲನ್ನು ಆರಂಭಿಸಬೇಕೆನ್ನುವ ಮನವಿ ಸಲ್ಲಿಸಿತ್ತು. ಸಚಿವ ಕೋಟ ಅವರು ದೂರವಾಣಿ ಮೂಲಕ ರೈಲ್ವೇ ಸಚಿವ ಸುರೇಶ್‌ ಅಂಗಡಿ ಅವರನ್ನು ಸಂಪರ್ಕಿಸಿ ಕಾರವಾರ-ಬೆಂಗಳೂರು ನಡುವೆ ರಾತ್ರಿ ವೇಳೆ ಪಡೀಲು ಮಾರ್ಗವಾಗಿ ಹೆಚ್ಚುವರಿ ರೈಲು ಅನುಷ್ಠಾನಗೊಳಿಸಲು ಒತ್ತಾಯಿಸಿದ್ದರು.

ಉಡುಪಿಯವರಿಗೆ ಅನುಕೂಲ
ಬೆಂಗಳೂರು – ಕಾರವಾರ ರೈಲಿನ ಅನಗತ್ಯ ವಿಳಂಬ ತಪ್ಪಿಸುವುದಕ್ಕಾಗಿ ಪಡೀಲು ಮಾರ್ಗವಾಗಿ ನೂತನ ರೈಲು ಸಂಚಾರ ಆರಂಭಿಸುವಂತೆ ಸಮಿತಿಯು ಮನವಿ ಸಲ್ಲಿಸಿತ್ತು. ಈ ರಾತ್ರಿ ರೈಲಿನಿಂದ ಮಂಗಳೂರು ಉತ್ತರ ಭಾಗ, ಉಡುಪಿ ಮತ್ತು ಕುಂದಾಪುರ ಭಾಗದವರಿಗೆ 3 ಗಂಟೆ ಸಮಯ ಉಳಿಯುವಂತಾಗಿ ತುಂಬಾ ಪ್ರಯೋಜನವಾಗಲಿದೆ. ಈ ಬಗ್ಗೆ ಜ.6ಕ್ಕೆ ಕುಂದಾಪುರ ಸಮಿತಿ ಮತ್ತು ಉ. ಕನ್ನಡ ಸಮಿತಿಯು ರೈಲ್ವೇ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಗಮನಕ್ಕೆ ತರಲಾಗುವುದು ಎನ್ನುವುದಾಗಿ ಕುಂದಾಪುರ ರೈಲ್ವೇ ಹಿತರಕ್ಷಣ ಸಮಿತಿ ಅಧ್ಯಕ್ಷ ಗಣೇಶ್‌ ಪುತ್ರನ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ವೇಳಾಪಟ್ಟಿ ಹೇಗೆ?
ರೈಲ್ವೇ ಸಚಿವರ ಸೂಚನೆಯಂತೆ ಎಲ್ಲ ಪ್ರಕ್ರಿಯೆ ಮುಗಿದು ಹೊಸ ರೈಲು ಆರಂಭವಾದಲ್ಲಿ ಪ್ರತಿ ದಿನ ರಾತ್ರಿ 7 ಗಂಟೆಗೆ ಬೆಂಗಳೂರಿನಿಂದ ಹೊರಡಲಿದ್ದು, ಬೆಳಗಿನ ಜಾವ 3.40ಕ್ಕೆ ಪಡೀಲ್‌ಗೆ ತಲುಪಲಿದ್ದು,4 ಗಂಟೆಗೆ ಸುರತ್ಕಲ್‌, 4.30ಕ್ಕೆ ಉಡುಪಿ, 5.15ಕ್ಕೆ ಕುಂದಾಪುರ ಮತ್ತು 8.40ಕ್ಕೆ ಕಾರವಾರ ಮುಟ್ಟಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next