Advertisement
ಇದೇ ಮೊದಲ ಬಾರಿಗೆ ಡಿ.31ರ ತಡರಾತ್ರಿ 11 ಗಂಟೆಯಿಂದ ಜನವರಿ 1ರ ನಸುಕಿನ 2 ಗಂಟೆ ವರೆಗೂ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಬಂದ್ ಆಗಲಿದೆ. ಅಲ್ಲಿಂದ ಪ್ರವೇಶವೂ ಇಲ್ಲ, ನಿರ್ಗಮನ ವೂ ಇಲ್ಲ. ತಡರಾತ್ರಿ 1 ಗಂಟೆವರೆಗೆ ಮಾತ್ರ ನಗರ ದಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದೆ. ಈ ಕುರಿತು ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಾಹಿತಿ ನೀಡಿದರು.
Related Articles
Advertisement
11 ಗಂಟೆವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ : ತಡರಾತ್ರಿ 11 ಗಂಟೆವರೆಗೆ ಮಾತ್ರ ಮದ್ಯದ ಮಳಿಗೆಯಲ್ಲಿ ವ್ಯವಹಾರಕ್ಕೆ ಅವಕಾಶ ನೀಡಿದ್ದು, ಇನ್ನು ಸರ್ಕಾರದ ನಿಯಮದ ಪ್ರಕಾರ ತಡರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ಇದೆ. ಜತೆಗೆ ಕ್ಲಬ್, ಪಬ್ ಮತ್ತು ರೆಸ್ಟೋರೆಂಟ್ ಗಳು ಹೊಸ ವರ್ಷಾಚರಣೆ ನಿಮಿತ್ತ ಸದಸ್ಯರು ಹಾಗೂ ಅತಿಥಿಗಳಿಗೆ ಔತಣ ಕೂಟ-ಇವೆಂಟ್‌ಗಳಿಗೆ ಅನುಮತಿ ನೀಡುವಾಗ ಅಗತ್ಯಕ್ಕಿಂತ ಹೆಚ್ಚು ಪಾಸ್‌ಗೆ ಅವಕಾಶ ನೀಡದಂತೆ ಸೂಚಿಸಲಾಗಿದೆ. ಈ ಸ್ಥಳಗಳಿಗೆ ಬರುವ ಗ್ರಾಹಕರ ಗುರುತು ಪತ್ತೆ ಹಚ್ಚಲು, ಗ್ರಾಹಕರ ಮೊಬೈಲ್ ನಂಬರ್ ಅಥವಾ ಯಾವುದಾದರೂ ಗುರುತಿನ ಚೀಟಿ ಪಡೆಯಲು ನಿರ್ದೇಶಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ರೇವ್ ಪಾರ್ಟಿಗಳ ಮೇಲೆ ಖಾಕಿ ಹದ್ದಿನಕಣ್ಣು : ಹೊಸ ವರ್ಷಾಚರಣೆ ಸಂದರ್ಭದಲ್ಲಿ ಡ್ರಗ್ಸ್ ರೇವ್ ಪಾರ್ಟಿಗಳು ಆಗುವುದನ್ನು ನಿಯಂತ್ರಿಸಲಾಗುತ್ತದೆ. ನಗರದ ಎಲ್ಲಾ ಡಿಸಿಪಿಗಳು, ಸಿಸಿಬಿ ಅಧಿಕಾರಿಗಳು ಡ್ರಗ್ಸ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ಕಳೆದ 26 ದಿನಗಳಲ್ಲಿ ನಗರದಲ್ಲಿ 9 ಮಂದಿ ವಿದೇಶಿ ಪೆಡ್ಲರ್ ಸೇರಿ 56 ಮಂದಿ ಬಂಧಿಸಲಾಗಿದೆ. ಅವರಿಂದ 99.85 ಕೆ.ಜಿ. ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಅಕ್ರಮ ಮದ್ಯ ಸಂಗ್ರಹಿಸುವ ವ್ಯಕ್ತಿಗಳ ವಿರುದ್ಧ ಅಬಕಾರಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಭದ್ರತೆಗೆ ಕೆಎಸ್‌ಆರ್‌ಪಿ, ಸಿಎಆರ್ ತುಕಡಿ ನೇಮಕ : ನಗರಾದ್ಯಂತ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಒಬ್ಬರು ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 15 ಮಂದಿ ಡಿಸಿಪಿ, 45 ಎಸಿಪಿ, 160 ಇನ್‌ಸ್ಪೆಕ್ಟರ್, 600 ಪಿಎಸ್‌ಐ, 600 ಎಎಸ್‌ಐ, 1800 ಹೆಡ್ ಕಾನ್‌ಸ್ಟೇಬಲ್‌ಗಳು, 5200 ಕಾನ್‌ಸ್ಟೇಬಲ್‌ಗಳು, ಜತೆಗೆ ಕೆಎಸ್ ಆರ್‌ಪಿ, ಸಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರೊಂದಿಗೆ ಕೆಲ ಪೊಲೀ ಸರು ಮಫ್ತಿಯಲ್ಲಿ ಗಸ್ತು ತಿರುಗಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದರು.
31ರ ರಾತ್ರಿ 11ಗಂಟೆಯಿಂದ 2ರವರೆಗೆ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಬಂದ್ : ಕಳೆದ ವರ್ಷಾಚರಣೆ ಸಂದರ್ಭದಲ್ಲಿ ಉಂಟಾದ ಸಮಸ್ಯೆಯಿಂದ ಈ ವರ್ಷ ಸಾರ್ವಜನಿಕರ ಸುರಕ್ಷತೆಗಾಗಿ ಡಿ.31ರ ತಡರಾತ್ರಿ 11 ಗಂಟೆಯಿಂದ ಜ.1ರ ನಸುಕಿನ 2 ಗಂಟೆವರೆಗೆ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣದ ಮೂಲಕ ಪ್ರಯಾಣಿಕರು ನಿರ್ಗಮಿಸಲು ಅವಕಾಶ ಇಲ್ಲ. ಹೊಸ ವರ್ಷಾಚರಣೆ ಮುಗಿದ ಬಳಿಕ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಬದಲಿಗೆ ಟ್ರಿನಿಟಿ ಸರ್ಕಲ್ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಮೂಲಕ ನಿರ್ಗಮಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಮಹಿಳೆಯರ ಸುರಕ್ಷತೆಗಾಗಿ ಬಿ.ದಯಾನಂದ ಹೇಳಿದರು.
ಜನಸಂದಣಿ ಸ್ಥಳಗಳಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ :
ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಲವು ಮುಂಜಾಗ್ರತೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಗೃಹ ಸಚಿವ ಜಿ.ಪರಮೇಶ್ವರ್ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದು, ಹೆಚ್ಚಿನ ಜನರು ಸೇರುವ ಸ್ಥಳಗಳಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪಿಸುವುದರ ಜೊತೆಗೆ ಲಭ್ಯವಿರುವ ಆ್ಯಂಬುಲೆನ್ಸ್‌ಗಳನ್ನೂ ಸನ್ನದ್ಧ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ಪಾಲಿಕೆ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಗಳು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.
ಹೆಚ್ಚಿನ ಸಂಖ್ಯೆಯ ಜನರು ಸಂಚರಿಸುವ ಮಾರ್ಗ ಗಳು, ಸ್ಥಳಗಳಲ್ಲಿರುವ ಬೀದಿ ದೀಪಗಳನ್ನು ಸುಸ್ಥಿತಿಯಲ್ಲಿಡಲಾಗುವುದು. ಹೆಚ್ಚುವರಿಯಾಗಿ ಫೆಡ್‌ಲೈಟ್‌ಗಳನ್ನು ಅಳವಡಿಸಲಾ ಗುವುದು. ರಸ್ತೆ ರಿಪೇರಿ ಕಾಮಗಾರಿಯ ನಡೆಯುತ್ತಿ ರುವ ಸ್ಥಳಗಳಲ್ಲಿ ಸೂಕ್ತ ರೀತಿಯಲ್ಲಿ ಬ್ಯಾರಿಕೇಡ್ ವ್ಯವಸ್ಥೆ, ರಿಫ್ಲೆಕ್ಟಿಂಗ್ ಸ್ಟಿಕ್ಕರ್ಸ್, ಸೂಚನಾ ಫಲಕಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಜತೆಗೆ ರಸ್ತೆ ಗುಂಡಿಗಳನ್ನು ಮುಚ್ಚುವುದು, ರಸ್ತೆ ಉಬ್ಬುಗಳು ಸ್ಪಷ್ಟವಾಗಿ ವಾಹನ ಚಾಲಕರಿಗೆ ಕಾಣುವಂತೆ ಅಗತ್ಯ ಕ್ರಮ ವಹಿಸಲಾಗುವುದು. ಎಂ.ಜಿ.ರಸ್ತೆ, ಬ್ರಿಗೈಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ ಸರ್ಕಲ್, ಹಲಸೂರು ಕೆರೆ, ಫೀನಿಕ್ಸ್ ಮಾಲ್, ಕೋರಮಂಗಲ, ಸ್ಟಾರ್ ಹೋಟೆಲ್‌ಗಳು, ಕ್ಲಬ್ ಇತರೆ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರಲಿದ್ದು, ಜನರ ನಿಯಂತ್ರಣಕ್ಕಾಗಿ ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.