Advertisement

ಲೋಪವಾಗಿದೆ, ಭ್ರಷ್ಟಾಚಾರವಾಗಿಲ್ಲ: ಸಚಿವ ನಿತಿನ್‌ ಗಡ್ಕರಿ ಸ್ಪಷ್ಟನೆ

10:08 PM Sep 09, 2022 | Team Udayavani |

ಬೆಂಗಳೂರು: ಮಳೆಯಿಂದ ಇತ್ತೀಚೆಗೆ ಮುಳುಗಡೆಯಾಗಿದ್ದ ಬೆಂಗಳೂರು- ಮೈಸೂರು ಹೆದ್ದಾರಿ ಯೋಜನೆ ರೂಪಿಸುವಲ್ಲಿ ಲೋಪವಾಗಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಯೋಜನೆ ಅನುಷ್ಠಾನದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಕೇಂದ್ರ ಸಚಿವನಾಗಿ ಸುಮಾರು 8 ವರ್ಷ ಆಗಿದೆ. ಸುಮಾರು 50 ಲಕ್ಷ ಕೋಟಿ ರೂ. ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಇದರಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪ ಕೇಳಿಬಂದಿಲ್ಲ. ಸಚಿವರಾಗುವುದು ಹಣ ಮಾಡಲು ಅಲ್ಲ. ಹಣ ಮಾಡಲು ಬೇರೆ ಉದ್ಯೋಗಗಳಿವೆ. ನಮ್ಮ ಸಂಪುಟದಲ್ಲಿ ಆ ರೀತಿಯ ಭ್ರಷ್ಟಾಚಾರದ ವ್ಯವಸ್ಥೆ ಇಲ್ಲ ಎಂದು ಹೇಳಿದರು.

ಇದೇ ವೇಳೆ, ಕರ್ನಾಟಕದ ಭ್ರಷ್ಟಾಚಾರದ ಕುರಿತು ಕೇಳಿದ ಪ್ರಶ್ನೆಗೆ “ಕರ್ನಾಟಕದ ಬಗ್ಗೆ ಮಾಹಿತಿ ಇಲ್ಲ’ ಎಂದರು. ಬೆಂಗಳೂರು - ಮೈಸೂರು ರಸ್ತೆ ಡ್ರೈನೇಜ್‌ ವ್ಯವಸ್ಥೆಯಲ್ಲಿ ಲೋಪ ಇರುವುದನ್ನು ಒಪ್ಪುತ್ತೇನೆ. ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು. ಆದರೆ, ಮಳೆಯ ಪ್ರಮಾಣವೂ 75 ವರ್ಷದಲ್ಲಿಯೇ ಅತಿ ಹೆಚ್ಚಾಗಿದೆ ಎಂದರು. ಈಗಾಗಲೇ ಹೆದ್ದಾರಿಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಲಾಗಿದೆ. ಶೀಘ್ರವೇ ಉದ್ಘಾಟನೆ ಮಾಡಲಾಗುವುದು ಎಂದೂ ಹೇಳಿದರು.

ಹೆದ್ದಾರಿ ಆಡಿಟ್‌:
ಬೆಂಗಳೂರು ಮೈಸೂರು ಹೆದ್ದಾರಿ ಚರಂಡಿ ವ್ಯವಸ್ಥೆ ಸೇರಿ ಸಂಪೂರ್ಣವಾಗಿ ಆಡಿಟ್‌ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕೇಂದ್ರ ಸಚಿವ ಗಡ್ಕರಿ ಜತೆ ಚರ್ಚಿಸಿದ ನಂತರ ಮಾತನಾಡಿದ ಅವರು, ಎಲ್ಲೆಲ್ಲಿ ಒಳಚರಂಡಿ ದೊಡ್ಡದು ಮಾಡಬೇಕು, ಗ್ರೇಡಿಯಂಟ್‌ ಹೆಚ್ಚಿಸಬೇಕು, ಅಡಚಣೆಗಳು ಎಲ್ಲವೂ ಆಡಿಟ್‌ನಲ್ಲಿ ತಿಳಿದು ಬರುತ್ತದೆ ಎಂದರು. ಹೊಸ ರಾಷ್ಟ್ರೀಯ ಹೆದ್ದಾರಿ ಶಿರಡಿ ರಸ್ತೆಯನ್ನು ವೇಗವಾಗಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಹೊಸ ರಾಷ್ಟ್ರೀಯ ಹೆದ್ದಾರಿ ಬಗ್ಗೆ ಪ್ರಸ್ತಾವನೆಗಳನ್ನು ಕೇಂದ್ರ ರಸ್ತೆ ನಿಧಿಯಡಿ ತರಲಾಗುತ್ತಿದೆ ಎಂದರು.

Advertisement

ಬೆಂಗಳೂರಿಗೂ ಸ್ಕೈಬಸ್‌
ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು, ಬೆಂಗಳೂರಿನಲ್ಲಿ ಸ್ಕೈಬಸ್‌ ಯೋಜನೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದಿದ್ದಾರೆ. ಟ್ರಾಫಿಕ್‌ ನಿಯಂತ್ರಣಕ್ಕೆ ಇದೇ ಪರ್ಯಾಯ ವ್ಯವಸ್ಥೆ ಎಂದೂ ಹೇಳಿದ್ದಾರೆ. ಸದ್ಯ ಭಾರತದಲ್ಲಿ ಎಲ್ಲಿಯೂ ಈ ವ್ಯವಸ್ಥೆ ಇಲ್ಲ. ಈಗಾಗಲೇ ವಾರಣಾಸಿಯಲ್ಲಿ ಶುರು ಮಾಡುವ ಬಗ್ಗೆ ತಯಾರಿ ನಡೆಸಲಾಗುತ್ತಿದೆ. 2004ರಲ್ಲೇ ಗೋವಾದ ಮಾರ್ಗೋದಲ್ಲಿ ಪರೀಕ್ಷೆಗಾಗಿ ಒಂದೂವರೆ ಕಿ.ಮೀ. ಮಾರ್ಗ ರಚಿಸಲಾಗಿತ್ತು. ಆದರೆ, ಅಪಘಾತವೊಂದು ಸಂಭವಿಸಿ ಕೈಬಿಡಲಾಗಿತ್ತು.

ಏನಿದು ಸ್ಕೈಬಸ್‌?
ಇದು ಒಂದು ರೀತಿ ಮೆಟ್ರೋ ಸೌಲಭ್ಯವಿದ್ದ ಹಾಗೆಯೇ. ಅಂದರೆ, ಮೆಟ್ರೋ ರೈಲುಗಳು ಫ್ಲೈಓವರ್‌ನ ಮೇಲೆ ಓಡಿದರೆ, ಸ್ಕೈಬಸ್‌ಗಳು ಫ್ಲೈಓವರ್‌ನ ಕೆಳಭಾಗಕ್ಕೆ ಅಂಟಿಕೊಂಡಂತೆ ಸಾಗುತ್ತವೆ. ಗಂಟೆಗೆ 100 ಕಿ.ಮೀ.ವೇಗದಲ್ಲಿ ಇವು ಸಂಚರಿಸಬಲ್ಲವು. ಈಗಾಗಲೇ ಜರ್ಮನಿಯಲ್ಲಿ ಇಂಥ ವ್ಯವಸ್ಥೆ ಇದೆ. ಸಂಪೂರ್ಣವಾಗಿ ವಿದ್ಯುತ್‌ ಚಾಲಿತ ವ್ಯವಸ್ಥೆಯಾಗಿದೆ. ಈ ಸ್ಕೈಬಸ್‌ ವ್ಯವಸ್ಥೆಯನ್ನು ಭಾರತೀಯ ತಾಂತ್ರಿಕ ತಜ್ಞ ಬಿ.ರಾಜಾರಾಮ್‌ ರೂಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next