Advertisement
2023ರಲ್ಲಿ ಆಗಸ್ಟ್ ತಿಂಗಳವರೆಗೆ 147 ಮಂದಿ ಎಕ್ಸ್ ಪ್ರಸ್ ವೇನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಈ ವರ್ಷ ಆಗಸ್ಟ್ ಅಂತ್ಯದವರೆಗೆ 50 ಮಂದಿ ಸಾವಿಗೀಡಾಗಿದ್ದಾರೆ. ಈ ಅಂಕಿ ಅಂಶ ಬಿಡುಗಡೆ ಮಾಡಿರುವ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್, ಈ ವರ್ಷದಲ್ಲಿ 97 ಮಂದಿ ಅಮೂಲ್ಯ ಜೀವ ಉಳಿದಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.
Related Articles
Advertisement
ಈ ಹಿನ್ನೆಲೆ ಎನ್‌ಎಚ್‌ಎಐ ಮತ್ತು ರಾಜ್ಯ ಪೊಲೀಸ್ ಇಲಾಖೆ ಹೆದ್ದಾರಿ ಸುರಕ್ಷತೆ ಬಗ್ಗೆ ಸಾಕಷ್ಟು ಗಮನಹರಿಸಿತ್ತು. ಪರಿಣಾಮ ಜುಲೈನಲ್ಲಿ ಎನ್‌ಎಚ್ ಎಐ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ 3 ಮಂದಿ ತಜ್ಞರ ಸಮಿತಿ ರಚಿಸಿ ಹೆದ್ದಾರಿಯಲ್ಲಿ ಸಮೀಕ್ಷೆ ನಡೆಸಿತ್ತು. ಇನ್ನು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಸಹ 2 ಬಾರಿ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ವೀಕ್ಷಣೆ ಮಾಡಿದ್ದರು. ಇದೆಲ್ಲರದ ಪರಿಣಾಮ ಹೆದ್ದಾರಿಯಲ್ಲಿ ಇದೀಗ ಸಾವಿನ ಪ್ರಮಾಣ ತಗ್ಗಿದೆ.
ವೇಗ ನಿಯಂತ್ರಣವೂ ಸಹಕಾರಿ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ನಿಯಂತ್ರಣಕ್ಕೆ ವೇಗಕ್ಕೆ ಕಡಿವಾಣ ಹಾಕಿದ್ದು ಪ್ರಮುಖ ಕಾರಣವಾಗಿದೆ. ಎಕ್ಸ್‌ಪ್ರೆಸ್ ವೇನದಲ್ಲಿ 48 ಕಡೆ ಎಐ ತಂತ್ರಜ್ಞಾನ ಹೊಂದಿರುವ ಎಎನ್‌ಆರ್‌ಪಿ ಕ್ಯಾಮರಾ ಅಳವಡಿಸಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಣ್ಗಾವಲು ಇರಿಸಲಾಗಿದೆ. 100 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ಪ್ರಯಾಣಿಕರ ವಿರುದ್ಧ ದಂಡ ವಿಧಿಸಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ 1.20 ಲಕ್ಷ ಪ್ರಕರಣ ದಾಖಲಿಸಲಾಗಿದೆ. ಇನ್ನು ವೇಗದ ಮಿತಿ 130 ಕಿ.ಮೀ. ದಾಟಿದರೆ ಎಫ್‌ಐಆರ್ ದಾಖಲಿಸ ಲಾಗುತ್ತದೆ. ವೇಗಕ್ಕೆ ಕಡಿವಾಣ ಹಾಕಿರುವುದು ಅಪಘಾತ ತಗ್ಗಲು ಕಾರಣವಾಗಿದೆ ಎನ್ನುತ್ತಿದ್ದಾರೆ ಪೊಲೀಸ್ ಮೂಲಗಳು.
ಪ್ರಯಾಣದ ಸಮಯ 15 ನಿಮಿಷ ಹೆಚ್ಚಿಸಿದರೆ ಅಮೂಲ್ಯ ಜೀವ ಉಳಿಯುತ್ತದೆ. ಈ ವರ್ಷ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡಿರುವ ಪರಿಣಾಮ 97 ಅಮೂಲ್ಯ ಜೀವಉಳಿದಿವೆ. – ಅಲೋಕ್ ಕುಮಾರ್, ಎಡಿಜಿಪಿ, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗ
– ಸು.ನಾ.ನಂದಕುಮಾರ್