Advertisement

Bangalore-Mysore Expressway: ಬದಲಾಗಲಿದೆ ಹೈವೇ ಎಂಟ್ರಿ-ಎಕ್ಸಿಟ್‌ ಸ್ವರೂಪ

11:12 AM Oct 05, 2023 | Team Udayavani |

ರಾಮನಗರ: ಸದ್ಯದಲ್ಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಎಂಟ್ರಿ ಮತ್ತು ಎಕ್ಸಿಟ್‌ಗಳು ಬದಲಾಗಲಿವೆ. ಹಾಲಿ ಇರುವ ಎಂಟ್ರಿ ಮತ್ತು ಎಕ್ಸಿಟ್‌ಗಳು ಅವೈಜ್ಞಾನಿ ಎಂಬ ಕೂಗು ಕೇಳಿಬಂದ ಹಿನ್ನೆಲೆ, ಹೆದ್ದಾರಿ ಪ್ರಾಧಿಕಾರ ಎಂಟ್ರಿ ಮತ್ತುಎಕ್ಸಿಟ್‌ಗಳ ಸ್ವರೂಪವನ್ನು ಬದಲಿಸಲು ಮುಂದಾಗಿದೆ. ಇನ್ನು ಮುಂದೆ ಎಂಟ್ರಿ ಮತ್ತು ಎಕ್ಸಿಟ್‌ ಪಡೆಯುವ ಪಾಯಿಂಟ್‌ಗಳು ಪ್ರತ್ಯೇಕವಾಗಲಿವೆ.

Advertisement

ಹೌದು.., ಎಂಟ್ರಿ-ಎಕ್ಸಿಟ್‌ಗಳು ಅವೈಜ್ಞಾನಿಕ ವಾಗಿದ್ದು, ಅಪಘಾತಗಳಿಗೆ ಎಂಟ್ರಿ ಮತ್ತು ಎಕ್ಸಿಟ್‌ ಜಾಗ ಕಾರಣವಾಗಿದೆ. ಹಾಗೂ ಸರ್ವಿಸ್‌ ರಸ್ತೆಯಲ್ಲಿ ಪ್ರಯಾಣಿಕರಿಗೆ ಅನಗತ್ಯ ಗೊಂದಲವಾಗಲು ಈ ಎಂಟ್ರಿ ಮತ್ತು ಎಕ್ಸಿಟ್‌ ಕಾರಣ ಎಂಬ ಅಭಿಪ್ರಾಯ ಕೇಳಿಬಂದ ಹಿನ್ನೆಲೆ ಸಂಸದ ಪ್ರತಾಪ್‌ ಸಿಂಹ ಮತ್ತು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ರಾಹುಲ್‌ ಗುಪ್ತಾ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಅವೈಜ್ಞಾನಿಕ ಎಂಟ್ರಿ ಮತ್ತು ಎಕ್ಸಿಟ್‌ ಬದಲಾವಣೆ ಮಾಡಲು ಸೂಚನೆ ನೀಡಿದ್ದಾರೆ.

ಇನ್ನು ಎಂಟ್ರಿ ಅಥವಾ ಎಕ್ಸಿಟ್‌ ಇರಲಿದೆ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಪ್ರಸ್ತುತ ಎಂಟ್ರಿ ಮತ್ತು ಎಕ್ಸಿಟ್‌ ಅನ್ನು ಒಂದೇ ಕಡೆ ಕೊಡಲಾಗಿದೆ. ಒಂದೇ ಸ್ಥಳದಲ್ಲಿ ಎಂಟ್ರಿ ಮತ್ತು ಎಕ್ಸಿಟ್‌ ಇರುವ ಕಾರಣ ಪ್ರಯಾಣಿಕರು ಹೆದ್ದಾರಿಯಿಂದ ನಿರ್ಗಮಿಸಲು ಮತ್ತು ಪ್ರವೇಶ ಪಡೆಯಲು ಇದೇ ಜಾಗವನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ವಾಹನ ಸವಾರರು ಗಲಿಬಿಲಿಗೊಳ್ಳುತ್ತಾರೆ. ಕೆಲವೊಮ್ಮೆ ಎಂಟ್ರಿ ಜಾಗದಲ್ಲಿ ಎಕ್ಸಿಟ್‌ ಪಡೆಯುವ, ಎಕ್ಸಿಟ್‌ ಜಾಗದಲ್ಲಿ ಎಂಟ್ರಿ ಪಡೆಯುವ ಮೂಲಕ ಸಮಸ್ಯೆಯಾಗುತ್ತಿದೆ.

ಈ ಗೊಂದಲವನ್ನು ಪರಿಹರಿಸಲು ಮುಂದಾಗಿರುವ ಎನ್‌ಎಚ್‌ಎಐ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಹಾಲಿ ಇರುವ ಎಂಟ್ರಿ ಎಕ್ಸಿಟ್‌ಗಳ ಸ್ವರೂಪವನ್ನು ಬದಲಿಸಿ ಒಂದು ಬದಿಗೆ ಒಂದೇ ಒಂದು ಎಂಟ್ರಿ ಹಾಗೂ ಎಕ್ಸಿಟ್‌ ನೀಡಲು ಮುಂದಾಗಿದ್ದಾರೆ. ಎಂಟ್ರಿ ಪಡೆಯುವ ಸ್ಥಳದಲ್ಲಿ ಎಕ್ಸಿಟ್‌ ಬಂದ್‌ ಮಾಡಲಾಗುತ್ತದೆ. ಎಕ್ಸಿಟ್‌ ನೀಡುವ ಜಾಗದಲ್ಲಿ ಎಂಟ್ರಿ ಬಂದ್‌ ಮಾಡಲಿದ್ದಾರೆ.

ಒಂದು ಕಡೆ ಎಂಟ್ರಿ ಮತ್ತೂಂದು ಕಡೆ ಎಕ್ಸಿಟ್‌: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಮೂಲಕ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಸ್ಥಳಗಳಲ್ಲಿ ಮಾತ್ರ ಒಂದು ಬದಿ ಎಂಟ್ರಿ ಮತ್ತೂಂದು ಬದಿ ಎಕ್ಸಿಟ್‌ ನೀಡಲಾಗುತ್ತದೆ. ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಪ್ರಯಾಣಿಸುವಾಗ ನಗರಗಳಿಗೆ ಪ್ರವೇಶಿಸುವ ಜಾಗದಲ್ಲಿ ಎಕ್ಸಿಟ್‌ ನೀಡಿ, ಅದಕ್ಕೆ ವಿರುದ್ಧ ದಿಕ್ಕಿನ ರಸ್ತೆಯಲ್ಲಿ ಎಂಟ್ರಿಗೆ ಅವಕಾಶ ನೀಡಲಾಗುತ್ತದೆ. ಹಾಲಿ ಎರಡೂ ಬದಿಯಲ್ಲಿ ಎಂಟ್ರಿ-ಎಕ್ಸಿಟ್‌ ನೀಡಿದ್ದು, ಇದನ್ನು ಎಂಟ್ರಿಯನ್ನು ಬಂದ್‌  ಮಾಡಲಾಗುತ್ತದೆ. ನಗರದ ಎರಡೂ ಕಡೆ ಸಂಪರ್ಕ ಎಂಟ್ರಿ-ಎಕ್ಸಿಟ್‌ಗಳಲ್ಲೂ ಇದೇ ಕ್ರಮವನ್ನು ಅನುಸರಿಸಲಾಗುವುದು.

Advertisement

ಎಕ್ಸ್‌ಪ್ರೆಸ್‌ವೇ ಹೊಸ ಎಂಟ್ರಿ-ಎಕ್ಸಿಟ್‌ ಹೇಗಿದೆ:

ಪ್ರಸ್ತುತ ಎಂಟ್ರಿ ಮತ್ತು ಎಕ್ಸಿಟ್‌ ಒಂದೇ ಜಾಗದಲ್ಲಿದ್ದು, ಇದು ಗೊಂದಲಕ್ಕೆ ಕಾರಣವಾಗಿದೆ. ಇದನ್ನು ವೈಜ್ಞಾನಿಕವಾಗಿ ಪರಿವರ್ತನೆ ಮಾಡುತ್ತಿದ್ದು, ಬಿಡದಿಗೆ ವಂಡರ್‌ಲಾ ಗೇಟ್‌ ಬಳಿ ಎಂಟ್ರಿ ಪಡೆಯಲು ಇರುವ ಎಂಟ್ರಿ ಮತ್ತು ಎಕ್ಸಿಟ್‌ನಲ್ಲಿ ಎಂಟ್ರಿ ಬಂದ್‌ ಮಾಡಿ ಎಕ್ಸಿಟ್‌ ಮಾತ್ರ ನೀಡಲಾಗುವುದು. ಇನ್ನು ಬಿಡದಿ ಕೈಗಾರಿಕಾ ಪ್ರದೇಶದ ಸಮೀಪ ಇರುವ ಎಂಟ್ರಿ ಮತ್ತು ಎಕ್ಸಿಟ್‌ ಸ್ಥಳದಲ್ಲಿ ಬೆಂಗಳೂರಿನಿಂದ ಬರುವ ಕಡೆ ಎಕ್ಸಿಟ್‌ ನೀಡಿದರೆ, ಬೆಂಗಳೂರಿಗೆ ಹೋಗುವ ಕಡೆಗೆ ಎಂಟ್ರಿ ನೀಡಲಾಗುವುದು. ಮೈಸೂರಿನಿಂದ ಬರುವವರು ಬಿಡದಿ ಸಿಗುವುಕ್ಕೆ ಮುನ್ನಾ ಇರುವ ಜಾಗದಲ್ಲಿ ಎಕ್ಸಿಟ್‌ ಪಡೆಯಬೇಕಿದ್ದು, ಬಿಡದಿಯಿಂದ ಮೈಸೂರು ಕಡೆಗೆ ಹೋಗುವವರು ಬಿಡದಿ ಮುಗಿದ ಬಳಿಕ ಎಂಟ್ರಿ ಪಡೆಯಬಹುದಾಗಿದೆ. ಇದೇ ರೀತಿ ನಿಡಘಟ್ಟ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಎಂಟ್ರಿ-ಎಕ್ಸಿಟ್‌ ರೂಪಿಸಲಾಗುವುದು. ಇದರಿಂದ ಎಂಟ್ರಿ ಮತ್ತು ಎಕ್ಸಿಟ್‌ ಒಂದೇ ಜಾಗದಲ್ಲಿ ನೀಡುವುದರಿಂದ ವಾಹನ ಸವಾರರು ಗಲಿ  ಬಿಲಿಗೊಂಡು ಸಮಸ್ಯೆ ಎದುರಾಗುವುದು ತಪ್ಪಲಿದೆ.

ಬಿಡದಿ ಟೋಲ್‌ ಬಳಿ ಶೌಚಾಲಯ, ಪೆಟ್ರೋಲ್‌ ಬಂಕ್‌:

ಬಿಡದಿ ಟೋಲ್‌ ಬೂತ್‌ ಬಳಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿ ಕೊಡುವ ಉದ್ದೇಶದಿಂದ ಶೌಚಾಲಯ ಮತ್ತು ಪೆಟ್ರೋಲ್‌ ಬಂಕ್‌ ನಿರ್ಮಾಣ ಮಾಡಲಾಗುವುದೆಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ. ಪ್ರಯಾಣಿಕರಿಗೆ ಶೌಚಕ್ಕೆ ಜಾಗವಿಲ್ಲದಿರುವುದು ಹಾಗೂ ಎಕ್ಸ್‌ಪ್ರೆಸ್‌ ವೇನಿಂದ ಹೊರ ಬಂದು ಪೆಟ್ರೋಲ್‌, ಡೀಸೆಲ್‌ ಹಾಕಿಸಿಕೊಳ್ಳುವುದು ಸಮಸ್ಯೆಯಾಗಿರುವ ಕಾರಣ ಈ ಎರಡೂ ಸೌಲಭ್ಯವನ್ನು ಕಲ್ಪಿಸಲು ಎನ್‌ಎಚ್‌ಎಐ ಮುಂದಾಗಿದೆ ಎಂದವರು ಪರಿಶೀಲನೆ ವೇಳೆ ಮಾಹಿತಿ ನೀಡಿದರು.

ಪ್ರಯಾಣಿಕರು ಟೋಲ್‌ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ:

ಇನ್ನು ಎಂಟ್ರಿ-ಎಕ್ಸಿಟ್‌ಗಳ ಪರೀಕ್ಷರಣೆಗೆ ಮುಂದಾಗಿರುವ ಎನ್‌ಎಚ್‌ಎಐ, ಪ್ರಸ್ತುತ ಪ್ರಯಾಣಿಕರು ಬಿಡದಿ ಮತ್ತು ಗಣಂಗೂರು ಬಳಿ ಇರುವ ಟೋಲ್‌ ಪ್ಲಾಜಾಗಳನ್ನು ತಪ್ಪಿಸಲು ಸರ್ವೀಸ್‌ ರಸ್ತೆಗೆ ಎಕ್ಸಿಟ್‌ ಪಡೆದು ಸ್ವಲ್ಪ ದೂರು ಪ್ರಯಾಣಿಸಿ ಮತ್ತೆ ಎಕ್ಸ್‌ಪ್ರೆಸ್‌ ವೇಗೆ ಪ್ರವೇಶ ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳು ಕ್ರಮ ಕೈಗೊಂಡು ಟೋಲ್‌ ತಪ್ಪಿಸಿ ಕೊಳ್ಳುವುದನ್ನು ನಿಯಂತ್ರಿಸಲಿದ್ದಾರೆ ಎಂದು ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

ಒಂದೇ ಜಾಗದಲ್ಲಿ ಎಂಟ್ರಿ ಮತ್ತು ಎಕ್ಸಿಟ್‌ ನೀಡಿರುವುದು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸಲು ಒಂದು ಬದಿಯಲ್ಲಿ ಎಂಟ್ರಿ ಅಥವಾ ಎಕ್ಸಿಟ್‌ ಮಾತ್ರ ನೀಡಲಾಗುವುದು. ಎಕ್ಸ್‌ಪ್ರೆಸ್‌ವೇನಲ್ಲಿ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲು ಎನ್‌ಎಚ್‌ಎಐ ಹಂತ-ಹಂತವಾಗಿ ಕ್ರಮ ಕೈಗೊಳ್ಳುತ್ತಿದೆ.-ಪ್ರತಾಪ್‌ ಸಿಂಹ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next