Advertisement

Bangalore Millets Mela: ಸಿರಿಧಾನ್ಯಗಳ ತಿನಿಸಿಗೆ ಆಧುನಿಕ ಟಚ್‌! 

11:53 AM Jan 06, 2024 | Team Udayavani |

ಬೆಂಗಳೂರು: ಸಿರಿಧಾನ್ಯಗಳೆಂದರೆ ಅದೊಂದು ಸಾಂಪ್ರದಾಯಿಕ ಶೈಲಿಯ ತಿಂಡಿ-ತಿನಿಸು ಎಂದು ಬಹುತೇಕರು ಮೂಗು ಮುರಿಯುತ್ತಾರೆ. ಯುವಪೀಳಿಗೆಗಳ ಬೇಡಿಕೆಗೆ ತಕ್ಕಂತೆ ತರಹೇವಾರಿ ತಿಂಡಿಗಳು ಅದರಲ್ಲಿ ಅಪರೂಪ ಎಂಬ ಅಪಸ್ವರವೂ ಇದೆ. ಆದರೆ, ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಿರಿಧಾನ್ಯ ಮತ್ತು ಸಾವಯವ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಆ “ಸಂಪ್ರದಾಯದ ಸೀಮೋಲ್ಲಂಘನೆ’ ಮಾಡಿದೆ.

Advertisement

ರಾಜ್ಯದ ನಾನಾ ಜಿಲ್ಲೆಗಳು, ದೇಶದ 16ಕ್ಕೂ ಹೆಚ್ಚು ರಾಜ್ಯಗಳು ಸಿರಿಧಾನ್ಯಗಳಲ್ಲಿ ತಯಾರಿಸಿದ ತರಹೇವಾರಿ ಖಾದ್ಯಗಳು, ಪಾನೀಯಗಳು, ಫಾಸ್ಟ್‌ಫ‌ುಡ್‌ ಮತ್ತಿತರ ಉತ್ಪನ್ನಗಳು ಅದಕ್ಕಿದ್ದ “ಸಾಂಪ್ರದಾಯಿಕ ಸ್ಪರ್ಶ’ ಕಳಚುವಂತೆ ಮಾಡಿವೆ. ಅದರಲ್ಲೂ ಒಂದೇ ಸಂಸ್ಥೆ ಈ ಸಿರಿಧಾನ್ಯಗಳಲ್ಲಿ ಹತ್ತು ಅಲ್ಲ; ಇಪ್ಪತ್ತು ಅಲ್ಲ. ನೂರಕ್ಕೂ ಅಧಿಕ ಉತ್ಪನ್ನಗಳನ್ನು ಪ್ರದರ್ಶಿಸುವ ಮೂಲಕ ಇಡೀ ಮೇಳದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ “ಸಿರಿಧಾನ್ಯಗಳ ಸಂಶೋಧನೆ ಮತ್ತು ಮೌಲ್ಯವರ್ಧನೆ ಪಾರ್ಕ್‌’ ಬಾಯಲ್ಲಿ ನೀರೂರಿಸುವ ನೂರಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದು, ಅವೆಲ್ಲವುಗಳನ್ನು ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದೆ. ಬರೀ ಸಿರಿಧಾನ್ಯಗಳಲ್ಲೇ ಇಷ್ಟೊಂದು ಖಾದ್ಯಗಳನ್ನು ತಯಾರಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಪ್ರಮುಖ ಸಿರಿ ಖಾದ್ಯಗಳು: ಪ್ರಸ್ತುತ ಹೆಚ್ಚು ಬೇಡಿಕೆ ಇರುವ ಅದರಲ್ಲೂ ವಿಶೇಷವಾಗಿ ಯುವಸಮೂಹವನ್ನು ಸೆಳೆಯುವ ಮೊಮೊಸ್‌, ಪಾಸ್ತಾ, ಪಿಜ್ಜಾ, ಬರ್ಗರ್‌, ಕೇಕ್‌, ಕೋಲ್ಡ್‌ ಕಾಫಿಯಂತಹ ನಾನಾ ಪ್ರಕಾರದ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಗಮನಸೆಳೆದಿದೆ. ಇವೆಲ್ಲವುಗಳನ್ನು ನವಣೆ, ರಾಗಿ, ಜೋಳ, ಸಜ್ಜೆ, ಬರಗುನಂತಹ ಸಿರಿಧಾನ್ಯಗಳಲ್ಲೇ ತಯಾರಿಸ ಲಾಗಿದೆ. ಬರೀ ತಾನು ತಯಾರಿಸುವುದಲ್ಲ; ಈ ಬಗ್ಗೆ ಆಸಕ್ತರಿಗೆ ತರಬೇತಿ ಕೂಡ ನೀಡುತ್ತದೆ.

2021ರಲ್ಲಿ ರಾಯಚೂರಿನಲ್ಲಿ 10 ಎಕರೆಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ತಲೆಯೆತ್ತಿದ ಈ ಪಾರ್ಕ್‌ನಲ್ಲಿ ಸಿರಿಧಾನ್ಯಗಳ ಬೀಜೋತ್ಪಾದನೆಯಿಂದ ಹಿಡಿದು ಅದರ ಬಿತ್ತನೆ, ಹೊಸ ತಳಿಗಳ ಅಭಿವೃದ್ಧಿ, ಕೊಯ್ಲು, ಮೌಲ್ಯವರ್ಧನೆ, ತರಬೇತಿ ಹೀಗೆ ಒಂದೇ ಸೂರಿನಡಿ ಎಲ್ಲವನ್ನೂ ಒಳಗೊಂಡಿದೆ. ಇದುವರೆಗೆ ಇಲ್ಲಿ 50 ಜನ ತರಬೇತಿ ಪಡೆದಿದ್ದು, ಅದರಲ್ಲಿ 20 ಜನ ಬೇರೆ ಬೇರೆ ಕಡೆ ಘಟಕಗಳನ್ನು ತೆರೆದು ಆದಾಯ ಗಳಿಸುತ್ತಿದ್ದಾರೆ ಎಂದು ಸಹಾಯಕ ಪ್ರಾಧ್ಯಾಪಕಿ ಸುಧಾದೇವಿ “ಉದಯವಾಣಿ’ಗೆ ಮಾಹಿತಿ ನೀಡಿದರು. “ಸಿರಿಧಾನ್ಯಗಳಲ್ಲಿ ನಾನಾ ಪ್ರಕಾರದ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿವೆ. ಕೆಲವರು ಚಾಕೋಲೇಟ್‌, ಬಿಸ್ಕತ್ತು, ಹಪ್ಪಳ ಹೀಗೆ ವಿವಿಧ ಖಾದ್ಯಗಳನ್ನು ಪರಿಚಯಿಸಿದ್ದಾರೆ. ಆದರೆ, ನೂರಕ್ಕೂ ಹೆಚ್ಚು ಉತ್ಪನ್ನಗಳು ಒಂದೇ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಿರುವುದು ರಾಯಚೂರಿನ ಸಿರಿಧಾನ್ಯಗಳ ಸಂಶೋಧನೆ ಮತ್ತು ಮೌಲ್ಯವರ್ಧನೆ ಪಾರ್ಕ್‌ ಮಾತ್ರ. ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಯುವಪೀಳಿಗೆಗೆ ಅಚ್ಚು-ಮೆಚ್ಚು ಅನಿಸುವ ತಿಂಡಿ-ತಿನಿಸುಗಳನ್ನು ಅಭಿವೃದ್ಧಿಪಡಿಸಿ ಪ್ರದರ್ಶಿಸಲಾಗಿದೆ. ಇದರಲ್ಲಿ ಕೆಲವು ಉತ್ಪನ್ನಗಳು ಸಂಪೂರ್ಣ ಸಿರಿಧಾನ್ಯಗಳಿಂದ ತಯಾರಿಸಿದ್ದರೆ, ಇನ್ನು ಹಲವು ಶೇ. 40ರಿಂದ 50ರಷ್ಟು ಸಿರಿಧಾನ್ಯಗಳನ್ನು ಒಳಗೊಂಡಿವೆ’ ಎಂದು ಅವರು ಹೇಳಿದರು.

Advertisement

ನೂರಕ್ಕೂ ಹೆಚ್ಚು ಸಿರಿಧಾನ್ಯ ಖಾದ್ಯ :

ರಾಯಚೂರಿನ ಕೃಷಿ ವಿಜ್ಞಾನಗಳ ವಿವಿ ಅಭಿವೃದ್ಧಿಪಡಿಸಿರುವ ನೂರಕ್ಕೂ ಅಧಿಕ ಸಿರಿಧಾನ್ಯ ಉತ್ಪನ್ನಗಳ ಪೈಕಿ ಪ್ರಮುಖವಾದವು ಇಲ್ಲಿವೆ. ಪಿಜ್ಜಾ, ಪಾಸ್ತಾ, ಪಾನಿಪುರಿ, ಮೊಮೊಸ್‌, ಬರ್ಗರ್‌, ಸಾಮೆ ಮತ್ತು ನವಣೆ ಅಕ್ಕಿಯ ಅನಾಲಾಗ್ಸ್‌, ಕೋಲ್ಡ್‌ ಕಾಫಿ, ಕುರ್‌ಕುರೆ, ಶಾವಿಗೆ, ನೂಡಲ್ಸ್‌, ರಾಗಿ ಮತ್ತು ಸಜ್ಜೆಯ ಅವಲಕ್ಕಿ, ಚಾಕೋಲೇಟ್‌, ರಸ್ಕ್, ಬಿಸ್ಕತ್ತುಗಳು, ಬೇಯಿಸಿದ ಚಕ್ಕುಲಿ, ಮಫಿನ್‌.

ಸಿರಿಧಾನ್ಯಗಳ ಉತ್ಪನ್ನಗಳನ್ನು ಮಾತ್ರವಲ್ಲ; ಹೊಸ ತಳಿಗಳನ್ನು ಕೂಡ ಅಭಿವೃದ್ಧಿಪಡಿಸ ಲಾಗಿದೆ. ರಾಗಿ, ಜೋಳ, ನವಣೆ, ಸಾಮೆ, ಕೊರಲೆ, ಬರಗು, ಆರ್ಕನಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ತಳಿಗಳನ್ನು ಪರಿಚಯಿಸಲಾಗಿದೆ. ಈ ಪೈಕಿ ಕೊರಲೆ (ಎಚ್‌ಬಿಆರ್‌-2), ಹಗರಿ ಬರಗು (ಎಚ್‌ಬಿ-1), ಸಾಮೆ (ಎಲ್‌ಎಂ-8437-17), ರಾಗಿ (ಎಚ್‌ಆರ್‌-13), ಜೋಳ (ಟಿಆರ್‌ಜೆಪಿ1-5) ಬಿಡುಗಡೆಯಾಗಿವೆ. ಈಗಾಗಲೇ ರೈತರ ಜಮೀನುಗಳಲ್ಲಿ ಯಶಸ್ವಿ ಪ್ರಯೋಗ ಕೂಡ ಮಾಡಲಾಗಿದೆ.-ಉಮೇಶ್‌ ಹಿರೇಮಠ, ಸಹಾಯಕ ಪ್ರಾಧ್ಯಾಪಕ, ರಾಯಚೂರು ವಿವಿ.

Advertisement

Udayavani is now on Telegram. Click here to join our channel and stay updated with the latest news.

Next