ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲೇ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ವು “ಸ್ಮಾರ್ಟ್’ ಶಾಕ್ ನೀಡಿದೆ.
ಸ್ಮಾರ್ಟ್ ಮೊಬಿಲಿಟಿ ಕಾರ್ಡ್ ಬಳಕೆದಾರರಿಗೆ ಈಗಿರುವ ರಿಯಾಯ್ತಿ ದರದ ಪ್ರಮಾಣವನ್ನು ಶೇ. 15ರಿಂದ ಏಕಾಏಕಿ ಶೇ. 5ಕ್ಕೆ ಇಳಿಕೆ ಮಾಡಲು ನಿರ್ಧರಿಸಿರುವ ನಿಗಮವು ಈ ಸಂಬಂಧ ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸಲಿದೆ. ಈ ಪರಿಷ್ಕೃತ ರಿಯಾಯ್ತಿ ದರವು ಜ. 20ರಿಂದ ಅನ್ವಯವಾಗುವ ಸಾಧ್ಯತೆ ಇದೆ.
ನಿತ್ಯ ಸುಮಾರು 4.20 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಈ ಪೈಕಿ ಶೇ. 68ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಹೊಂದಿದ್ದಾರೆ. ಅವರೆಲ್ಲರಿಗೂ ಇದರ ಬಿಸಿ ತಟ್ಟಲಿದೆ. ರಿಯಾಯ್ತಿಗೆ ಶೇ. 10ರಷ್ಟು ಕತ್ತರಿ ಹಾಕಿದರೆ, ಕಾರ್ಯಾಚರಣೆಯಿಂದ ಪ್ರತಿ ದಿನ 7ರಿಂದ 8 ಲಕ್ಷ ರೂ. ಹೆಚ್ಚುವರಿ ಆದಾಯವನ್ನು ನಿಗಮ ನಿರೀಕ್ಷಿಸಿದ್ದು, ಮಾಸಿಕ ಇದು 2 ಕೋಟಿ ರೂ. ಆಗಲಿದೆ. ಪ್ರಯಾಣಿಕರನ್ನು ಸ್ಮಾರ್ಟ್ ಕಾರ್ಡ್‌ನತ್ತ ಸೆಳೆಯಲು ವಾಣಿಜ್ಯ ಸೇವೆ ಆರಂಭಗೊಂಡ ದಿನದಿಂದ ಅಂದರೆ 2011ರ ಸೆಪ್ಟೆಂಬರ್‌ನಿಂದಲೇ ಕಾರ್ಡ್ ಹೊಂದಿದವರಿಗೆ ಶೇ. 15ರಷ್ಟು ರಿಯಾಯ್ತಿ ಕಲ್ಪಿಸಿತ್ತು. ಈಗ ಬಹುತೇಕರು ಈ ಕಾರ್ಡ್ ಬಳಕೆ ಮಾಡುವುದರ ಜತೆಗೆ ಮೆಟ್ರೋ ಸೇವೆಗೆ ಹೊಂದಿಕೊಂಡಿದ್ದರಿಂದ ಕತ್ತರಿ ಹಾಕಲು ಉದ್ದೇಶಿಸಲಾಗಿದೆ.
ವಿರೋಧದ ನಡುವೆಯೇ ನಿಗಮವು ಕೆಲ ತಿಂಗಳ ಹಿಂದೆ ಸ್ಮಾರ್ಟ್ ಕಾರ್ಡ್‌ನಲ್ಲಿ ಕನಿಷ್ಠ 50 ರೂ. ಠೇವಣಿ ಇಡುವುದನ್ನು ಕಡ್ಡಾಯಗೊಳಿಸಿತ್ತು. ಇದರಿಂದ ಕೋಟ್ಯಂತರ ರೂ. ಹರಿದುಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.