ಕುಣಿಗಲ್: ಆಮದು ಮತ್ತು ರಫ್ತು ಉತ್ತೇಜನ ಮತ್ತು ದೇಶೀಯ ಸರಕು ಸಾಗಣೆ ವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತ ಮಾಲಾ ಯೋಜನೆಗೆ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಆಯ್ಕೆ ಮಾಡಿಕೊಂಡಿದೆ.
ಭಾರತ ಮಾಲಾ ಯೋಜನೆಯಡಿ ಬೆಂಗಳೂರು- ಮಂಗಳೂರು, ಲೂಧಿಯಾನ- ಕಾಂಡ್ಲಾ, ಮುಂಬೈ-ಕೋಲ್ಕತ್ತಾ ಮತ್ತು ಗುಜರಾತಿನ ಪೋರಬಂದರ್‌ನಿಂದ ಪೋಲ್ಚಾರ್ ವರೆಗೆ ಹೈಸ್ಪೀಡ್ ರಸ್ತೆಗಳನ್ನು 3.80ಲಕ್ಷ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು, 351 ಕಿಮೀ ಇರುವ ಬೆಂಗಳೂರು ಮಂಗಳೂರು ಹೆದ್ದಾರಿಯನ್ನು 1.20 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಹೈಸ್ಪೀಡ್ ಅಷ್ಟಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಡಿಎ) ಇಲ್ಲವೇ ಕೇಂದ್ರ ಹೆದ್ದಾರಿ ಸಂಶೋಧನಾ ಸಂಸ್ಥೆಯು ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಈ ಯೋಜನೆ ಇನ್ನು 3ರಿಂದ 4 ತಿಂಗಳಲ್ಲಿ ಆರಂಭವಾಗಲಿದ್ದು, ಡಿಪಿಆರ್ ತಯಾರಿಕೆ ಮತ್ತು ಪ್ರಾಥಮಿಕ ಸರ್ವೆ ನಡೆಯುತ್ತಿದೆ.
ಈ ಯೋಜನೆಯಡಿ ನಿರ್ಮಾಣವಾಗುವ ರಸ್ತೆಗಳಲ್ಲಿ ಹನಗಳು 100ರಿಂದ 120 ಕಿಮೀ ವೇಗದಲ್ಲಿ ಸಾಗುವುದಕ್ಕೆ ಅನುಕೂಲಕರವಾಗಿರ ಬೇಕಿರುವುದರಿಂದ ರಸ್ತೆಗಳಲ್ಲಿ ಉಬ್ಬು, ತಗ್ಗು, ತಿರುವುಗಳು ಇರುವುದಿಲ್ಲ. ಆ್ಯಂಬುಲೆನ್ಸ್, ಬಸ್, ಕಾರುಗಳು ಮತ್ತು ಸರಕು ಸಾಗಣೆ ವಾಹನಗಳು ಸಂಚರಿಸಲು ಪ್ರತ್ಯೇಕ ಮಾರ್ಗಗಳಿರುತ್ತದೆ. ಹಾಗಾಗಿ ಈಗ ಬೆಂಗಳೂರಿನಿಂದ ಮಂಗಳೂರು ತಲುಪಲು 7ರಿಂದ 10 ಗಂಟೆ ತೆಗೆದುಕೊಳ್ಳುವ ಸಮಯ ಕೇವಲ ನಾಲ್ಕೂವರೆ ಗಂಟೆಗಿಳಿಯಲಿದೆ. ಇದರಿಂದ ಕರಾವಳಿ ಮತ್ತು ಒಳನಾಡುಗಳ ಸಂಚಾರ, ಸಾಗಾಣಿಕೆ ಸುಲಭ ಮತ್ತು ಕಡಿಮೆ ಅವಧಿಯಲ್ಲಿ ಮುಗಿಯಲಿದೆ.
ನೇರ ರಸ್ತೆ, ಎರಡೇ ಟೋಲ್: ಭಾರತ ಮಾಲಾ ಹೈಸ್ಪೀಡ್ ರಸ್ತೆಯು ಈಗಿರುವ ಬಿ-ಎಂ ರಸ್ತೆ ಮಾರ್ಗವಾಗಿಯೇ ಇರಲಿದ್ದು, ಈಗಿರುವ ತಿರುವು, ಉಬ್ಬು, ತಗ್ಗುಗಳು ಇರದೆ ಸಮತಟ್ಟಾದ ನೇರ ರಸ್ತೆಯಾಗಲಿದೆ. ಹಾಗಾಗಿ ರಸ್ತೆ ಉದ್ದವೂ ಕಡಿಮೆಯಾಗಲಿದೆ. ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿರುವ ಈ ರಸ್ತೆಯ ಎರಡೇ ಟೋಲ್‌ಗಳಿರುತ್ತವೆ. ಒಮ್ಮೆ ಮಂಗಳೂರಿನಲ್ಲಿ ಟೋಲ್ ಪಾವತಿಸಿದರೆ ಕೊನೆಯಲ್ಲಿ ಬೆಂಗಳೂರಿ ನಲ್ಲಿ ಮಾತ್ರ ಟೋಲ್ ಪಾವತಿಸಬಹುದು. ಜೊತೆಗೆ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಮೂಲಕ ಟೋಲ್ ಪಾವತಿಯಾಗುವುದರಿಂದ ಸರದಿಯಲ್ಲಿ ನಿಲ್ಲಬೇಕಾದ ಅವಶ್ಯಕತೆಯೂ ಇರುವುದಿಲ್ಲ.
ಶಿರಾಢಿಯಲ್ಲಿ ಕೋಲ್ಡ್ ರಸ್ತೆ: ಪ್ರತಿ ಮಳೆಗಾಲದಲ್ಲೂ ಡಾಂಬರು ಕಿತ್ತು ಹೋಗಿ ಸಂಚಾರ ದುಸ್ತರವಾಗುತ್ತಿದ್ದ ಶಿರಾಢಿ ಘಾಟ್‌ನಲ್ಲಿ ಮಿಕ್ಸರ್ ತಂತ್ರಜ್ಞಾನದ ರಬ್ಬರ್ ಮಿಶ್ರಿತ ಕೋಲ್ಡ್ ರಸ್ತೆ ನಿರ್ಮಾಣವಾಗಲಿದೆ. ಸದ್ಯಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದ್ದು, ಅಗಲವಾಗುವ ರಸ್ತೆಯಲ್ಲಿ ರಬ್ಬರ್ ಮಿಶ್ರಿತ ರಸ್ತೆ ನಿರ್ಮಾಣವಾಗಲಿದೆ. ಅತಿ ಹೆಚ್ಚು ಮಳೆ ಬೀಳುವ ಮತ್ತು ಹೆಚ್ಚು ಇಳಿಜಾರು ಇರುವ ಚೀನಾದಲ್ಲಿ ಮತ್ತು ಕೇರಳ, ಅಸ್ಸಾಂನಲ್ಲಿ ಕೋಲ್ಡ್ ಮಿಕ್ಸ್ ತಂತ್ರಜಾnನದಡಿ ರಬ್ಬರ್ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಬಾಳಿಕೆ ಬಂದಿವೆ. ಹಾಗಾಗಿ ದೇಶದಲ್ಲಿ ಹೆಚ್ಚು ಮಳೆ ಬೀಳುವ ಎಲ್ಲಾ ಕಡೆ ಇದೇ ರೀತಿಯ ಕೋಲ್ಡ್ ಮಿಕ್ಸ್ ತಂತ್ರಜಾnನದಡಿ ರಬ್ಬರ್ ರಸ್ತೆಗಳನ್ನು ನಿರ್ಮಿಸಲಾಗುತ್ತದೆ.
ಏನಿದು ಕೋಲ್ಡ್ ಮಿಕ್ಸರ್ ತಂತ್ರಜ್ಞಾನ?
ಸದ್ಯ ಡಾಂಬರು ರಸ್ತೆ ಮಾಡುವಾಗ ಡಾಂಬರನ್ನು ಕಾಯಿಸಿ ಅದಕ್ಕೆ ಮರಳನ್ನು ಮಿಶ್ರ ಮಾಡಿ ಒತ್ತಡ ಹೇರಿ ರಸ್ತೆ ನಿರ್ಮಿಸಲಾಗುತ್ತಿದೆ. ಇದರಿಂದ ಬೇಸಿಗೆಯಲ್ಲಿ ರಸ್ತೆ ಬಿಸಿಯಾಗಿ ಬಿರುಕು ಬಿಡುತ್ತದೆ. ಮಳೆಗಾಲದಲ್ಲಿ ಆ ಬಿರುಕಿನಲ್ಲಿ ನೀರು ಸೇರುವುದರಿಂದ ರಸ್ತೆ ಕಿತ್ತುಬರುತ್ತದೆ. ಇದಕ್ಕೆ
ಪರ್ಯಾಯವಾಗಿ ಸಿಮೆಂಟ್ ರಸ್ತೆ ನಿರ್ಮಿಸುತ್ತಿದ್ದರೂ ಇದು ದುಬಾರಿ ಹಾಗೂ ಪರಿಸರ ಹಾನಿಕಾರಕ. ಕೋಲ್ಡ್ ಮಿಕ್ಸರ್ ತಂತ್ರಜ್ಞಾನದಡಿ ಡಾಂಬರಿನ ಜೊತೆಗೆ ರಬ್ಬರ್, ಕಚ್ಚಾ ಪೆಟ್ರೋಲಿಯಂ ತ್ಯಾಜ್ಯಗಳನ್ನು ಶೂನ್ಯ ತಾಪಮಾನದಲ್ಲಿ ರಾಸಾಯನಿಕ ಕ್ರಿಯೆಗೊಳಪಡಿಸಿದಾಗ ಲಭ್ಯವಾಗುವ ಮಿಶ್ರಣವನ್ನು ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇದು ಸರ್ವಋತುವಿಗೂ ಹೊಂದಿಕೊಳ್ಳುವುದರಿಂದ ಹೆಚ್ಚು ಬಾಳಿಕೆ ಬರುತ್ತದೆ.
ಕೋಲ್ಡ್ ಮಿಕ್ಸರ್ ತಂತ್ರಜ್ಞಾನ ಬಳಸಿ
ರಸ್ತೆ ಮಾಡುವುದರಿಂದ ಜನರಿಗೆ ಅನುಕೂಲವಾಗಲಿದೆ. ಇಂತಹ ರಸ್ತೆ ಗಳನ್ನು ಚೀನಾ ಮತ್ತು ಅಸ್ಸಾಂ ರಾಜ್ಯದಲ್ಲಿ ಮಾಡಲಾಗಿದೆ. ಇಳಿಜಾರಾದ ಮಳೆ ಬೀಳುವ ಪ್ರದೇಶದಲ್ಲಿ ಹಾಟ್ ಮಿಕ್ಸರ್ ಬಳಸಿ ರಸ್ತೆ ಮಾಡುವುದು ಕಷ್ಟದ ಕೆಲಸ.
ಲಕ್ಷ್ಮೀ ಪ್ರಸನ್ನ, ಸಹಾಯಕ ಕಾರ್ಯಪಾಲಕ ಅಭಿಯಂತರ