ಪುಣೆ: ಹೊರನಾಡಿನಲ್ಲಿದ್ದುಕೊಂಡು ಪುಣೆಯಲ್ಲಿರುವ ಕನ್ನಡಿಗರ ವೇದಿಕೆಯಾಗಿ ಸಂಘವೊಂದನ್ನು ಸ್ಥಾಪಿಸಿ ಶತಮಾನವೋತ್ಸವವನ್ನು ಪೂರ್ತಿಗೊಳಿಸಿ ಸಾಗುತ್ತಿರುವ ಪುಣೆಯ ಕರ್ನಾಟಕ ಸಂಘದ ಕಾರ್ಯವೈಖರಿ ಅಭಿನಂದನಾರ್ಹವಾಗಿದೆ. ವರ್ಷವಿಡೀ ಹತ್ತು ಹಲವು ಕಾರ್ಯಕ್ರಮಗಳನ್ನಾಚರಿಸುವುದರ ಮೂಲಕ ಗಮನ ಸೆಳೆಯುವ ಸಂಘದ ಮುಖಾಂತರ ಸಮಾಜದಲ್ಲಿ ಮಹಿಳೆಯರ ಸಶಕ್ತೀಕರಣ ಮತ್ತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಒತ್ತುಕೊಟ್ಟು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಮುಖ್ಯವಾಗಿ ಸಮಾಜದಲ್ಲಿ ಮಹಿಳೆಯರನ್ನು ಅವರ ಅಗತ್ಯತೆಗಳನ್ನು ಮನಗಂಡು ಅರ್ಥಮಾಡಿಕೊಂಡು ಪರಸ್ಪರ ಗೌರವಿಸುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಸಾಗಲು ಪ್ರೇರೇಪಿಸಿದಾಗ ಮಾತ್ರ ಮಹಿಳಾ ಸಬಲೀಕರಣ ಅರ್ಥಪೂರ್ಣವಾಗಲು ಸಾಧ್ಯವಿದೆ ಎಂದು ಪುಣೆಯ ಎಂಐಟಿ ಕಾಲೇಜಿನ ನಿರ್ದೇಶಕಿ ಹಾಗೂ ಅರ್ಥಶಾಸ್ತ್ರಜ್ಞೆ ಡಾ| ಶೈಲಶ್ರೀ ಹರಿದಾಸ್ ಅಭಿಪ್ರಾಯಪಟ್ಟರು.
ಮಾ. 19 ರಂದು ಗರ್ವಾರೆ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಸಂಘ ಪುಣೆ ಇದರ ವತಿಯಿಂದ ಹಮ್ಮಿಕೊಂಡ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪುಣೆಯ ಕರ್ನಾಟಕ ಸಂಘ ಭವಿಷ್ಯದಲ್ಲಿ ಇನ್ನೂ ಉತ್ತಮ ಕಾರ್ಯಗಳ ಮೂಲಕ ಆದರ್ಶ ಸಂಘವಾಗಿ ರೂಪುಗೊಳ್ಳಲಿ ಎಂದರು.
ಸಂಘದ ಅಧ್ಯಕ್ಷೆ ರಮಾ ಹರಿಹರ್ ಮಾತನಾಡಿ, ಇಂದು ಮಹಿಳೆಯರು ಸಾಮಾಜಿಕ, ಶಿಕ್ಷಣ, ರಾಜಕೀಯ, ಕ್ರೀಡೆ, ವೈದ್ಯಕೀಯ ಮುಂತಾದ ಎಲ್ಲಾ ಕ್ಷೇತ್ರಗಳ ಗುರುತಿಸಿಕೊಂಡು ಉತ್ತಮ ಸಾಧನೆಗಳನ್ನು ಮಾಡುತ್ತಿರುವುದು ಅಭಿಮಾನದ ವಿಷಯವಾಗಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಕುಸ್ತಿಯಂತಹ ಕ್ರೀಡೆಯಲ್ಲೂ ಅಸಾಮಾನ್ಯ ಸಾಧನೆ ತೋರಿ ಪ್ರಶಸ್ತಿಗಿಟ್ಟಿಸಿರುವ ಸಾಕ್ಷಿ ಶಿವಾನಂದ್ ಬಗ್ಗೆ ವಿಶೇಷವಾದ ಹೆಮ್ಮೆಯೆನಿಸುತ್ತಿದೆ. ಮಹಿಳೆಯರ ಬಗ್ಗೆ ವಿಶೇಷ ಗೌರವದಿಂದಾಗಿಯೇ ಇಂದು ನಮ್ಮ ಸಂಘ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಂಡಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೀತಾ ಛಪ್ಪರ್ ನಿರ್ದೇಶನದಲ್ಲಿ ಅಭಿವ್ಯಕ್ತ ತಂಡ ಧಾರವಾಡ ಇವರಿಂದ ಮೋಹಿನಿ ಭಸ್ಮಾಸುರ ನೃತ್ಯರೂಪಕ ಪ್ರದರ್ಶನಗೊಂಡು ಸೇರಿದ್ದ ಸದಸ್ಯರನ್ನು ರಂಜಿಸಿತು. ಮೊದಲಿಗೆ ಅಧ್ಯಕ್ಷೆ ರಮಾ ಹರಿಹರ್ ಸ್ವಾಗತಿಸಿದರು. ಸ್ವಾತಿ ಡೋಳೆ ಅತಿಥಿಯವರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸುಮಾ ಮಗಲ್ ವಂದಿಸಿದರು. ಜತೆ ಕಾರ್ಯದರ್ಶಿ ಶ್ರೀಮತಿ ಮಿರ್ಜಿ ಕಲಾ ತಂಡದ ಕಲಾವಿದರನ್ನು ಪರಿಚಯಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಮದಾಪುರ್ ಮತ್ತು ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಚಿತ್ರ -ವರದಿ : ಕಿರಣ್ ಬಿ. ರೈ ಕರ್ನೂರು