Advertisement

ಬೆಂಗಳೂರು ಕೆಂಪೇಗೌಡರ ಕನಸು

01:51 PM Jul 03, 2018 | Team Udayavani |

ರಾಯಚೂರು: ವಿಶ್ವವಿಖ್ಯಾತ, ಸುಂದರ ಬೆಂಗಳೂರು ನಗರ ನಿರ್ಮಾಣದ ಹಿಂದೆ ನಾಡಪ್ರಭು ಕೆಂಪೇಗೌಡರ ಅಪಾರ ಶ್ರಮ ಅಡಗಿದೆ ಎಂದು ಪೊಲೀಸ್‌ ಕಾಲೋನಿ ಶಾಲೆಯ ಮುಖ್ಯಶಿಕ್ಷಕ ದಂಡಪ್ಪ ಬಿರಾದಾರ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಂಪೇಗೌಡರು ಕೆಂಪನಂಜೇಗೌಡ ಲಿಂಗಮಾಂಬೆ ಎಂಬ ದಂಪತಿ ಮಗನಾಗಿ 1510ರಲ್ಲಿ ಜನಿಸಿದರು. ಮಾಧವ ಗುರುಗಳಿಂದ ಆಡಳಿತ, ರಾಜನೀತಿ ಮುಂತಾದ ವಿಷಯಗಳಲ್ಲಿ ಪರಿಣಿತಿ ಸಾಧಿಸುವುದರ ಜತೆಗೆ ಕತ್ತಿ ವರಸೆ, ಮಲ್ಲಯುದ್ಧ, ಕುದುರೆ ಸವಾರಿಯಂಥ ವಿದ್ಯೆಗಳಲ್ಲೂ ನೈಪುಣ್ಯತೆ ಸಾಧಿಸುವ ಮೂಲಕ ಪರಿಪೂರ್ಣ ರಾಜನಾಗಿ ಬೆಳೆದರು ಎಂದರು.

ಕೆಂಪೇಗೌಡರು ಒಮ್ಮೆ ವಿಜಯನಗರಕ್ಕೆ ಭೇಟಿ ನೀಡಿದಾಗ ಅಲ್ಲಿನ ವೈಭವಕ್ಕೆ ಬೆರಗಾಗಿ ಭವ್ಯತೆಯಿಂದ ಕಂಗೊಳಿಸುತ್ತಿದ್ದ ವಿಜಯನಗರವನ್ನು ಕಂಡು ಇಂಥ ನಗರವನ್ನು ತಾವೂ ನಿರ್ಮಿಸುವ ಕನಸನ್ನು ಕಂಡಿದ್ದರು. ಅದರ ಪ್ರತಿಫಲವಾಗಿಯೇ ಬೆಂಗಳೂರು ಹುಟ್ಟಿಗೆ ಕಾರಣವಾಯಿತು. ಕೆಂಪೇಗೌಡರು ತಿರುಮಲ ಎಂಬ ಕುಸ್ತಿಪಟುವನ್ನು ಸೋಲಿಸಿ ಶ್ರೀಕೃಷ್ಣದೇವರಾಯನ ಪ್ರೀತಿಗೆ ಪಾತ್ರರಾಗಿ ನಂತರ ವಿಜಯನಗರದ ಸಾಮಂತ ದೊರೆಯಾಗಿ ಮುಂದುವರಿದಿದ್ದರು ಎಂದರು.

ನಗರ ನಿರ್ಮಿಸಲು ನಾಲ್ಕು ದಿಕ್ಕುಗಳಿಗೆ ನಾಲ್ಕು ದ್ವಾರಗಳನ್ನು ನಿರ್ಮಿಸಿ ಅವುಗಳನ್ನು ಹಲಸೂರು, ಕೆಂಗೇರಿ, ಯಶವಂತಪುರ ಮತ್ತು ಯಲಹಂಕ ಹೆಬ್ಟಾಗಿಲುಗಳೆಂದು ಹೆಸರಿಟ್ಟರು. ಆನಂತರ ಹಂತ ಹಂತವಾಗಿ ಬೆಂಗಳೂರು ನಗರ ಬೆಳೆದು, ಉದ್ಯಾನ ನಗರಿ, ಮಾಹಿತಿ ತಂತ್ರಜ್ಞಾನ ನಗರ, ಸಿಲಿಕಾನ್‌ ಸಿಟಿ ಎಂಬ ನಾನಾ ಹೆಸರುಗಳಿಂದ ಜಗದ್ವಿಖ್ಯಾತಿ ಹೊಂದುತ್ತಿದೆ ಎಂದು ವಿವರಿಸಿದರು.

Advertisement

ಕೆಂಪೇಗೌಡರು ಮಾಡಿರುವ ಸಾಧನೆಗಳನ್ನು ಗುರುತಿಸಿದ ಸರ್ಕಾರ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೇ ಹೆಸರಿಟ್ಟಿದೆ. ಬೆಂಗಳೂರು ಹೈದಯ ಭಾಗದಲ್ಲಿರುವ ವೃತ್ತಕ್ಕೆ ಇವರ ಹೆಸರಿಡುವ ಮೂಲಕ ನಾಡಪ್ರಭುಗಗೆ ಗೌರವ ಸಲ್ಲಿಸಿದೆ ಎಂದರು.

ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ.ಪಾಟೀಲ ಸೇರಿ ಇತರೆ ಗಣ್ಯರು ಮಾಲಾರ್ಪಣೆ ಮತ್ತು ಪುಷ್ಪ ನಮನ ಸಲ್ಲಿಸಿದರು.

ಇದೇ ವೇಳೆ ನಾಡಪ್ರಭು ಕೆಂಪೇಗೌಡರ ಜೀವನ ಹಾಗೂ ಸಾಧನೆ ಕುರಿತ ಕಿರುಪುಸ್ತಕವನ್ನು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ.ಪಾಟೀಲ ಬಿಡುಗಡೆಗೊಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ, ಸಮಾಜದ ಮುಖಂಡರಾದ ಮುದುಕಪ್ಪ ಮಿಲಿ, ಪಿ.ಚಂದ್ರಶೇಖರ ಪಾಟೀಲ, ಮಂಜುನಾಥ ಗೌಡ, ಶಿವಶರಣ ಗೌಡ, ಮಲ್ಲಿಕಾರ್ಜುನ ಬಾವಿಕಟ್ಟಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next