Advertisement

ಬೆಂಗಳೂರಿಗೆ ಭರ್ಜರಿ ಜಯ

06:00 AM Oct 23, 2018 | Team Udayavani |

ಪುಣೆ: ಇಲ್ಲಿ ನಡೆದ ಇಂಡಿಯನ್‌ ಸೂಪರ್‌ ಲೀಗ್‌ ಫ‌ುಟ್‌ಬಾಲ್‌ ಪಂದ್ಯದಲ್ಲಿ ಲೀಲಾಜಾಲವಾಗಿ ಆಡಿದ ಬೆಂಗಳೂರು ಎಫ್ಸಿ ತಂಡ ಆತಿಥೇಯ ಎಫ್ಸಿ ಪುಣೆ ಸಿಟಿಯನ್ನು ಸುಲಭವಾಗಿ ಮಣಿಸಿತು. ನಿಗದಿತ 90 ನಿಮಿಷಗಳ ಆಟ ಮುಗಿಸಿ, ಹೆಚ್ಚುವರಿ 3 ನಿಮಿಷ ಕಳೆದರೂ ಎದುರಾಳಿಗೆ ಒಂದೂ ಗೋಲು ಬಾರಿಸಲು ಬೆಂಗಳೂರು ಅವಕಾಶ ಕೊಡಲಿಲ್ಲ. ಬೆಂಗಳೂರಿನ ಗೆಲುವಿನ ಅಂತರ 3-0. ಇಡೀ ಪಂದ್ಯದ ಮೇಲೆ ಬೆಂಗಳೂರು ಎಫ್ಸಿ ಸಂಪೂರ್ಣ ಹಿಡಿತ ಸಾಧಿಸಿತ್ತು. ಎದುರಾಳಿ ಪಾಳೆಯದ ಮೇಲೆ ಸತತವಾಗಿ ಎರಗುತ್ತಲೇ ಸಾಗಿತು. ಮತ್ತೂಂದು ಕಡೆ ಎದುರಾಳಿಯ ಗೋಲು ಬಾರಿಸುವ ಎಲ್ಲ ಯತ್ನಗಳನ್ನು ವಿಫ‌ಲಗೊಳಿಸಿತು.

Advertisement

ಬೆಂಗಳೂರಿನ ಅಬ್ಬರದಲ್ಲಿ ಮುಖ್ಯ ಪಾತ್ರವಹಿಸಿದ್ದು ಸುನೀಲ್‌ ಚೆಟ್ರಿ. ಅವರು 2 ಗೋಲು ಬಾರಿಸಿದರು. ಇನ್ನೊಂದು ಗೋಲನ್ನು ಮಿಕು ಬಾರಿಸಿದರು. ಸುನೀಲ್‌ ಚೆಟ್ರಿಯವರ ಅಬ್ಬರ ಹೇಗಿತ್ತೆಂದರೆ ಅವರ ಸತತ ದಾಳಿಯನ್ನು ತಡೆಯಲು ಪುಣೆ ತಂಡಕ್ಕೆ ಸಾಧ್ಯವಾಗಲೇ ಇಲ್ಲ. ಚೆಟ್ರಿ 41ನೇ ನಿಮಿಷದಲ್ಲಿ ಪಂದ್ಯದ ಮೊದಲ ಗೋಲು ಬಾರಿಸಿದರು. ಅಲ್ಲಿಗೆ ಸುಮ್ಮನಿರದ ಅವರು 43ನೇ ನಿಮಿಷದಲ್ಲಿ ಇನ್ನೊಂದು ಗೋಲು ಬಾರಿಸಿದರು. ಎದುರಾಳಿ ಆಟಗಾರರು ಮತ್ತು ಗೋಲ್‌ಕೀಪರ್‌ ವಿಶಾಲ್‌ ಕೈಥ್‌ ಅವರ ರಕ್ಷಣೆಯನ್ನು ಭೇದಿಸಿ ಅವರು ಮುನ್ನುಗ್ಗಿದ ಪರಿ ಅಚ್ಚರಿ ಮೂಡಿಸಿತು.

ಪಂದ್ಯದ 64ನೇ ನಿಮಿಷದಲ್ಲಿ ಬೆಂಗಳೂರು ಪರ ದಾಖಲಾದ ಮತ್ತೂಂದು ಗೋಲನ್ನು ಬಾರಿಸಿದ್ದು ಮಿಕು. ತಮಗೆ ಸಿಕ್ಕ ಪಾಸನ್ನು ಅದ್ಭುತ ರೀತಿಯಲ್ಲಿ ಉಪಯೋಗಿಸಿದ ಮಿಕು ಚೆಂಡನ್ನು ತಳ್ಳಿಕೊಂಡು ಹೋಗಿ ಗೋಲುಪೆಟ್ಟಿಗೆಯೊಳಗೆ ದಬ್ಬಿದರು. ಅಷ್ಟರಲ್ಲಿ ಬಹುತೇಕ ಪಂದ್ಯ ಪುಣೆ ಕೈತಪ್ಪಿಯಾಗಿತ್ತು. ಆ ಹಂತದಲ್ಲಿ ಬೆಂಗಳೂರಿನ ಸ್ಥಿತಿ ಬಲಿಷ್ಠವಾಗಿದ್ದರಿಂದ ಅದು ಮುಂದೆ ಎದುರಾಳಿ ಗೋಲು ಬಾರಿಸದಂತೆ ನೋಡಿಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡಿತು. 

ಪುಣೆ ಕಳಪೆಯಾಟ: ಇಡೀ ಪಂದ್ಯದಲ್ಲಿ ಪುಣೆ ಎಲ್ಲ ವಿಭಾಗದಲ್ಲಿ ವಿಫ‌ಲವಾಯಿತು. ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವುದು, ಗೋಲು ಹೊಡೆಯುವ ಯತ್ನ, ಪಾಸ್‌ಗಳನ್ನು ಸ್ವೀಕರಿಸುವ ರೀತಿ ಎಲ್ಲದರಲ್ಲೂ ಅದು ಕಳಪೆಯಾಟವಾಡಿತು. ಮತ್ತೂಂದು ಕಡೆ ಈ
ಎಲ್ಲ ವಿಭಾಗದಲ್ಲಿ ಬೆಂಗಳೂರು ಎಫ್ಸಿ ಮಿಂಚಿತು. ಆದ್ದರಿಂದ ತಂಡದ ಜಯಭೇರಿ ಸುಲಭವಾಯಿತು. ಒಟ್ಟು 411 ಪಾಸ್‌ಗಳನ್ನು ನೀಡಿದ ಪುಣೆ 266 ಪಾಸ್‌ಗಳನ್ನು ಯಶಸ್ವಿಯಾಗಿ ಸ್ವೀಕರಿಸಿತು. ಉಳಿದ ಪಾಸ್‌ಗಳು ವ್ಯರ್ಥವಾದವು. ಇದರ ವಿರುದ್ಧವೆಂಬಂತೆ ಬೆಂಗಳೂರು 398 ಪಾಸ್‌ ನೀಡಿ ಅದರಲ್ಲಿ 254ನ್ನು ಯಶಸ್ವಿಯಾಗಿ ಸ್ವೀಕರಿಸಿತು.

ಅಜೇಯ ಬೆಂಗಳೂರು: ಬೆಂಗಳೂರು ಎಫ್ಸಿ ಇದುವರೆಗೆ 3 ಪಂದ್ಯವಾಡಿದೆ. ಅದರಲ್ಲಿ ಎರಡು ಪಂದ್ಯ ಗೆದ್ದಿದ್ದರೆ, 1 ಪಂದ್ಯ
ಡ್ರಾಗೊಂಡಿದೆ. ಈ ಮೂಲಕ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಮತ್ತೂಂದು ಕಡೆ ಸರಿಯಾಗಿ ಮೂರೇ ಪಂದ್ಯ ಆಡಿರುವ ಎಫ್ಸಿ ಪುಣೆ ಸಿಟಿ 2 ಪಂದ್ಯ ಸೋತು, 1 ಡ್ರಾ ಮಾಡಿಕೊಂಡು ಅಂಕಪಟ್ಟಿಯಲ್ಲಿ ಕೊನೆಯಿಂದ 2ನೇ ಸ್ಥಾನದಲ್ಲಿದೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next