Advertisement

ಏಳು ಬಾಂಗ್ಲಾ ನುಸುಳುಕೋರರಿಗೆ ಆಧಾರವಾದ ಬೆಂಗಳೂರು!

11:51 AM Dec 19, 2017 | |

ಬೆಂಗಳೂರು: ಪಶ್ಚಿಮ ಬಂಗಾಳ ಮೂಲಕ ಭಾರತದೊಳಗೆ ಅಕ್ರಮವಾಗಿ ನುಸುಳಿ, ಎಲ್ಲರ ಕಣ್ತಪ್ಪಿಸಿ ಬೆಂಗಳೂರಿಗೂ ಬಂದಿರುವ ಬಾಂಗ್ಲಾ ನುಸುಳುಕೋರರು ಈಗ ಅಧಿಕೃತವಾಗಿ ಭಾರತೀಯ ಪ್ರಜೆಗಳು!

Advertisement

ಹೌದು. ನಗರದಲ್ಲಿ ಬಾಂಗ್ಲಾ ನುಸುಳುಕೋರರು ನಕಲಿ ದಾಖಲೆ ಕೊಟ್ಟು ಆಧಾರ್‌ ಕಾರ್ಡ್‌ ಪಡೆದುಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದು, ಏಳು ಮಂದಿ ನುಸುಳುಕೋರರು ಸೆರೆ ಸಿಕ್ಕಿದ್ದಾರೆ. ಮಧ್ಯವರ್ತಿಯೊಬ್ಬನ ಮೂಲಕ ನಕಲಿ ದಾಖಲೆ ಕೊಟ್ಟು ಆಧಾರ್‌ ಕಾರ್ಡ್‌ ಪಡೆದಿದ್ದ ಬಾಂಗ್ಲಾ ನುಸುಳುಕೋರರ ಪೈಕಿ ಕೆಲವರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಸರ್ಕಾರದ ಸವಲತ್ತು ಪಡೆಯಲು ಆಧಾರ್‌ ಕಾರ್ಡ್‌ ಬಳಕೆ ಮಾಡಿದ್ದರು ಎಂಬುದು ಬಯಲಾಗಿದೆ.

ಐದು ನೂರು ರೂ.ಗೆ ಬಾಂಗ್ಲಾ ನುಸುಳುಕೋರರಿಗೆ ಆಧಾರ್‌ ಕಾರ್ಡ್‌ ಮಾಡಿಸಿಕೊಡಲಾಗಿತ್ತು. ಅವರ ನಕಲಿ ದಾಖಲೆಗಳಿಗೆ ಅಧಿಕಾರಿಗಳು ಸಹಿ ಮಾಡಿ ದೃಢೀಕರಣ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರೂಬಿ, ರಹೀದ್‌ ಖಾನ್‌, ಮೊಹಮ್ಮದ್‌ ಕೋಕೋನ್‌, ವಹೀದ್‌ ವುಲ್ಲಾ, ನಹೀದ್‌, ಮೊಹಮ್ಮದ್‌ ಕಲಾಂ, ಜಾಕೀರ್‌ ಹುಸೇನ್‌ ಬಂಧಿತರಾಗಿದ್ದು, ಮಧ್ಯವರ್ತಿ ಬೆಳ್ಳಂದೂರು ನಿವಾಸಿ ಸೈಯದ್‌ ಸೈಫ‌ುಲ್ಲಾ ಎಂಬಾತನನ್ನು ಬಂಧಿಸಲಾಗಿದೆ.

ಬಾಂಗ್ಲಾದೇಶ ಪ್ರಜೆಗಳ ನಕಲಿ ದಾಖಲೆಗಳಿಗೆ ಸಹಿ ಮಾಡಿದ ದೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಚ್‌.ಸಿ.ಲೋಕೇಶ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ. ಪಶ್ಚಿಮ ಬಂಗಾಳ ಮೂಲಕ ಅಕ್ರಮವಾಗಿ ದೇಶದೊಳಗೆ ನುಸುಳಿರುವ ಬಾಂಗ್ಲಾ ಪ್ರಜೆಗಳ ಪೈಕಿ, 70 ಮಂದಿ ಬೆಂಗಳೂರಿಗೆ ಬಂದಿದ್ದು, ಕಟ್ಟಡಗಳಲ್ಲಿ ಕಸಗುಡಿಸುವ ಹಾಗೂ ರಸ್ತೆ ಬದಿ ಚಿಂದಿ ಆಯುವ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಈ ಪೈಕಿ ಅಕ್ರಮವಾಗಿ ಆಧಾರ್‌ ಕಾರ್ಡ್‌ ಪಡೆದುಕೊಂಡು ಮಾರತ್‌ಹಳ್ಳಿ ಮತ್ತು ಇಬ್ಬಲೂರಿನಲ್ಲಿ ನೆಲೆಸಿದ್ದ 7 ಮಂದಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ. ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ, ತಮ್ಮೊಂದಿಗೆ ಒಟ್ಟು 70 ಮಂದಿ ನಗರಕ್ಕೆ ಬಂದಿದ್ದು, ಚಾಮರಾಜಪೇಟೆ, ಕತ್ರಿಗುಪ್ಪೆ ಸೇರಿದಂತೆ ಹಲವು ಬಡಾವಾಣೆಗಳಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನುಳಿದ ನುಸುಳುಕೋರರನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

“ಆಧಾರ’ಕ್ಕೆ ಬೇಕಿರುವುದು ಬರೀ 500 ರೂ.!: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಆಧಾರ್‌ ಕಾರ್ಡ್‌ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ಇದಕ್ಕಾಗಿ ಮಧ್ಯವರ್ತಿ ಸೈಯದ್‌ ಸೈಫ‌ುಲ್ಲಾ ಬಾಂಗ್ಲಾದೇಶಿಗರನ್ನು ಸಂಪರ್ಕಿಸಿ ಕೇವಲ 500 ರೂ. ಕೊಟ್ಟರೆ ಆಧಾರ್‌ ಕಾರ್ಡ್‌ ಕೊಡಿಸುತ್ತೇನೆ.

ಇದರಿಂದ ಭಾರತ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯಬಹುದು ಎಂದು ಆಸೆ ಹುಟ್ಟಿಸಿದ್ದ. ಅದರಂತೆ ದೊಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಚ್‌.ಸಿ.ಲೋಕೇಶ್‌ ಮೂಲಕ ಬಾಂಗ್ಲಾದೇಶಿಗರ ನಕಲಿ ದಾಖಲೆಗಳಿಗೆ ಸಹಿ ಹಾಕಿಸಿಕೊಂಡು ಆಧಾರ್‌ ಕಾರ್ಡ್‌ ಕೊಡಿಸಿದ್ದಾನೆ.

ನಂತರ ವಿಶೇಷ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಸಿಬ್ಬಂದಿ ದಾಖಲೆ ಪರಿಶೀಲಿಸುವಾಗ ಏಳು ಮಂದಿ ನಕಲಿ ದಾಖಲೆ ನೀಡಿರುವುದು ಪತ್ತೆಯಾಗಿದೆ. ಈ ಸಂಬಂಧ ಯುಐಡಿಎಐ ಉಪ ನಿರ್ದೇಶಕ ಅಶೋಕ್‌ ಲೆನಿಲ್‌, ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವರು ನಕಲಿ ದಾಖಲೆ ನೀಡಿ ಆಧಾರ್‌ ಪಡೆದಿರುವ ಬಗ್ಗೆ ಅಧಿಕಾರಿಗಳು ದೂರು ನೀಡಿದ್ದರು. ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದಿದ್ದಾರೆ. ಬಾಂಗ್ಲಾ ನುಸುಳುಕೋರರಿಗೆ ಸಹಾಯ ಮಾಡಿದ ಮಧ್ಯವರ್ತಿ ಸೈಫ‌ುಲ್ಲಾನನ್ನು ಬಂಧಿಸಿದ್ದು, ನಕಲಿ ದಾಖಲೆಗಳಿಗೆ ಸಹಿ ಮಾಡಿದ ವೈದ್ಯಾಧಿಕಾರಿಯ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು.
-ಅಬ್ದುಲ್‌ ಅಹ್ಮದ್‌, ಡಿಸಿಪಿ ವೈಟ್‌ಫೀಲ್ಡ್‌ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next