Advertisement
2011ರ ಸಮೀಕ್ಷೆ ಪ್ರಕಾರ ಸ್ಲಂ ನಿವಾಸಿಗಳ ಸಂಖ್ಯೆ 33 ಲಕ್ಷ ಇತ್ತು. ಕಳೆದ 6 ವರ್ಷಗಳಲ್ಲಿ 8 ಲಕ್ಷ ಹೆಚ್ಚಾಗಿದ್ದು, ಸದ್ಯ 40.50 ಲಕ್ಷ ಸ್ಲಂ ನಿವಾಸಿಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ನಿಖರ ಸಮೀಕ್ಷೆ ನಡೆದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಸ್ಲಂ ಜನಸಂಖ್ಯೆ ಬೆಳೆಯುತ್ತಿರುವ ಈಗಿನ ಗತಿ ಗಮನಿಸಿದರೆ ಒಂದೆರಡು ವರ್ಷಗಳಲ್ಲಿ ಸ್ಲಂ ನಿವಾಸಿಗಳ ಸಂಖ್ಯೆ ಅರ್ಧ ಕೋಟಿ ದಾಟಲಿದೆ.
Related Articles
Advertisement
ಅದೇ ರೀತಿ ಗುತ್ತಿಗೆದಾರರು ನಿರ್ಮಾಣ ಕಾಮಗಾರಿಗಳಿಗೆಂದು ಜನರನ್ನು ಕರೆತಂದು ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿಕೊಡುತ್ತಾರೆ. ಅದೂ ಸಹ ಒಂದು ರೀತಿಯ ಅಘೋಷಿತ ಸ್ಲಂ ಆಗಿ ಬಿಡುತ್ತದೆ. ಹೀಗೆ ಸರ್ಕಾರ ಒಂದು ಕಡೆ ಸ್ಲಂಗಳ ತೆರವು, ಅಭಿವೃದ್ಧಿ ಮಾಡುತ್ತಿದ್ದರೆ, ಇನ್ನೊಂದು ಕಡೆ ಸ್ಲಂಗಳು ಹುಟ್ಟಿಕೊಳ್ಳುತ್ತಲ್ಲೇ ಇರುತ್ತವೆ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.
ಯೋಜನೆಗಳು ಆಮೆಗತಿ: 2022ಕ್ಕೆ ಕರ್ನಾಟಕವನ್ನು ಸ್ಲಂ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಅದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿವೆ. ಆದರೆ, ಅವುಗಳ ಅನುಷ್ಠಾನ ಆಮೆಗತಿಯಲ್ಲಿ ಸಾಗಿದೆ. ರಾಜೀವ್ ಆವಾಸ್ ಯೋಜನೆಯಡಿ 36 ಸಾವಿರ ಮನೆಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಆದರೆ, ಇಲ್ಲಿವರೆಗೆ 15 ಸಾವಿರ ಮನೆಗಳಷ್ಟೇ ನಿರ್ಮಾಣಗೊಂಡಿವೆ.
“ತಲೆಗೊಂದು ಸೂರು’ ಪರಿಕಲ್ಪನೆಯ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 85 ಸಾವಿರ ಮನೆಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಈ ಯೋಜನೆಯಡಿ ವರ್ಷಕ್ಕೆ ಒಂದು ಲಕ್ಷ ಮನೆ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ನಗರದಲ್ಲೇ ಹೆಚ್ಚು ಕೊಳೆಗೇರಿ: ರಾಜ್ಯದಲ್ಲಿ 2,397 ಘೋಷಿತ ಹಾಗೂ 407 ಅನಧೀಕೃತ ಸೇರಿ ಒಟ್ಟು 2,804 ಕೊಳೆಗೇರಿಗಳಿವೆ. ಘೋಷಿತ ಸ್ಲಂಗಳ ಈ ಪೈಕಿ ಅತಿಹೆಚ್ಚು 597 ಕೊಳೆಗೇರಿಗಳು ಬೆಂಗಳೂರಿನಲ್ಲಿವೆ. ಉಳಿದಂತೆ ಬಳ್ಳಾರಿ 202, ಶಿವಮೊಗ್ಗ 181, ಮೈಸೂರು 134, ಬೆಳಗಾವಿ 127 ಅತಿಹೆಚ್ಚು ಕೊಳೆಗೇರಿಗಳು ಹೊಂದಿದ ಜಿಲ್ಲೆಗಳು.
ಅದೇ ರೀತಿ ಕೊಡಗು 11, ದಕ್ಷಿಣ ಕನ್ನಡ 18, ಉಡುಪಿ 26, ಉತ್ತರ ಕನ್ನಡ 33, ಯಾದಗಿರಿ-ರಾಮನಗರ ತಲಾ 39 ಅತಿಕಡಿಮೆ ಕೊಳೆಗೇರಿಗಳು ಹೊಂದಿದ ಜಿಲ್ಲೆಗಳು. ಜತೆಗೆ ಬೆಂಗಳೂರು ನಗರ ಜಿಲ್ಲೆ 210, ಬಳ್ಳಾರಿ 50, ಮೈಸೂರು 30, ಧಾರವಾಡ-ಬೆಳಗಾವಿ ಜಿಲ್ಲೆಯಲ್ಲಿ ತಲಾ 28 ಅತಿ ಹೆಚ್ಚು ಅನಧಿಕೃತ ಕೊಳೆಗೇರಿಗಳಿವೆ.
* ರಫೀಕ್ ಅಹ್ಮದ್