Advertisement

ಬದುಕು ಕಲಿಸುತ್ತಿರುವ ಬೆಂಗಳೂರು ಜೀವನ

05:14 PM Jul 01, 2017 | |

ಪಟ್ಟಣದ ಜೀವನವೇ ಗೊತ್ತಿಲ್ಲದೆ ಪುಟ್ಟ ಹಳ್ಳಿಯಲ್ಲಿ ಬೆಳೆದವನು ನಾನು. ಪ್ರಾಥಮಿಕ ಶಿಕ್ಷಣದಿಂದ ಡಿಗ್ರಿಯವರೆಗೂ ಅಲ್ಲೇ ಇದ್ದ ಶಿರಾಳಕೊಪ್ಪ ಕಾಲೇಜಿನಲ್ಲಿ ಓದಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮುಗಿಸಿದ ನಾನು 45 ದಿನಗಳ ಇಂಟರ್ನ್ಶಿಪ್‌ ಎಂಬ ಹೊಸದೊಂದು ಜಗತ್ತಿಗೆ ಬಂದಿರುವೆ. ಆದರೆ ಇಲ್ಲಿಗೆ ಬರುವ ಮೊದಲು ನನಗೆ ಬೆಂಗಳೂರಿನ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ. ನಾನು ಬೆಂಗಳೂರಿಗೆ ಮೊದಲ ದಿನ, ದಿಕ್ಕು ಕಾಣದ ಜಗತ್ತಿಗೆ ಬಂದಿದ್ದೇನೆ ಎಂದೆನಿಸಿಬಿಟ್ಟಿತು.

Advertisement

ಪರಿಚಯವೇ ಇಲ್ಲದ ಈ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುವುದು ಎಷ್ಟು ಕಷ್ಟ ಅಂತ ಗೊತ್ತಾಯಿತು. ಅಲ್ಲೋ ಇಲ್ಲೋ ಸುತ್ತಾಡಿಕೊಂಡು ಮುಂಜಾನೆ 9 ಗಂಟೆಯ ತನಕ ಮನೆಯಲ್ಲಿ ಮಲಗಿ ಅಪ್ಪ, ಅಮ್ಮ ಬೈದಾಗ ಎದ್ದು ಅದೇ ಹಾಳು ಮುಖದಲ್ಲಿ ಟೀ ಕುಡಿದು, ಸ್ನಾನ ಮಾಡಿ ಶಾಲೆಗೆ ಹೋಗುತ್ತಿದ್ದೆ. ಅದರ ಜೊತೆಗೆ ರಜೆ ಸಿಕ್ಕಾಗಲೆಲ್ಲ ಗದ್ದೆಯಲ್ಲಿ ಟ್ರ್ಯಾಕ್ಟರ್‌ ಓಡಿಸಿಕೊಂಡಿದ್ದವನು ನಾನು.

ಆದರೆ ಈ ಬೆಂಗಳೂರು ಜೀವನದಲ್ಲಿ ಬೆಳಗ್ಗೆ 6 ಗಂಟೆಗೇ ಎದ್ದು ನೀರು ಸಿಗುತ್ತದೆಯೋ ಇಲ್ಲವೋ ಎಂದು ಬೇಗನೆ ಸ್ನಾನ ಮಾಡಿ, ರೆಡಿಯಾಗಿ 8 ಗಂಟೆಗೇ ಕೆಲಸಕ್ಕೆ ಹೋಗುವ ಪದ್ದತಿ ನನ್ನ ಜೀವನದಲ್ಲಿ ಹೊಸದೊಂದು ಬದುಕಿನ ಶೈಲಿಯನ್ನು ಕಲಿಸುತ್ತಿದೆ. ಜೊತೆಗೆ ಹೊಟ್ಟೆ ತುಂಬದ ಪ್ಲೇಟ್‌ ಸಿಸ್ಟ್‌ಂ ಊಟದ ಜೀವನವನ್ನೂ ಇಲ್ಲಿ ಕಲಿಯುತ್ತಿದ್ದೇನೆ. ಇಲ್ಲಿನ ಜನರ ಜೀವನ ಶೈಲಿಯನ್ನು ನೋಡುತ್ತಿದ್ದೇನೆ.

ಇದೆಲ್ಲದರ ಜೊತೆ ಜೊತೆಗೆ ನನ್ನ ಹಳ್ಳಿಯ ನೆನಪು ಪ್ರತಿ ದಿನವೂ ಕಾಡುತ್ತದೆ. ಮನೆಯಲ್ಲಿ ಹೊಟ್ಟೆ ತುಂಬಾ ಊಟ ಮಾಡಿ, ನಾಯಿ, ಬೆಕ್ಕು, ಆಕಳುಗಳ ಜೊತೆ ಬೆರೆಯುತ್ತಿದ್ದವನು ಈಗ ಹೊಸದೊಂದು ಬದುಕಿಗೆ ತೆರೆದುಕೊಳ್ಳುತ್ತಿದ್ದೇನೆ. ನಗರದಲ್ಲಿ ವಾಸಿಸುವ ರೀತಿ ನೀತಿಗಳ ಜೊತೆಗೇ ಹಳ್ಳಿಯ ಮಹತ್ವವನ್ನೂ ಗೊತ್ತು ಮಾಡಿಸುತ್ತಿದೆ. ಹಳ್ಳಿಯಲ್ಲಿದ್ದಾಗ ಅಲ್ಲಿನ ಬದುಕಿನ ಮೌಲ್ಯ ಅವೆಲ್ಲಾ ಗೊತ್ತಾಗುತ್ತಲೇ ಇರಲಿಲ್ಲ. ಬದುಕಿನಲ್ಲಿ ಇಂತಹ ಪಾಠಗಳು ಬಂದಾಗಲೇ ನಮ್ಮ ಹಿಂದಿನ ಜೀವನದ ಸುಖ ದುಃಖಗಳ ದಿನಗಳು ಗೊತ್ತಾಗುತ್ತದೆ. ಏನೇ ಆದರೂ ನಮ್ಮ ಹಳ್ಳಿ ಜೀವನವೇ ಲೇಸು. ಈ ಪಟ್ಟಣದ ಬದುಕು ತುಂಬಾ ನಾಜೂಕು. ಅಲ್ಲದೆ ಅಲ್ಲಿನ ಸುಂದರ ವಾತಾವರಣ, ಶುದ್ಧ ಗಾಳಿ, ಇವೆಲ್ಲವೂ ಹಳ್ಳಿಯಲ್ಲಿ ಮಾತ್ರ ಕಾಣಲು ಸಾಧ್ಯ. ಇಂಥ ವಾತಾವರಣದಲ್ಲಿ ಬೆಳೆದ ನನಗೆ ಈ ಬೆಂಗಳೂರಿನ ಟ್ರಾಫಿಕ್‌ ಜಂಜಾಟ, ವಾಹನಗಳ ಶಬ್ದ ಇವೆಲ್ಲವನ್ನೂ ಸಹಿಸಿಕೊಳ್ಳಬೇಕಾಗಿ ಬಂದಿದೆ. ಇವೆಲ್ಲದರ ಹೊರತಾಗಿಯೂ ಬೆಂಗಳೂರು ಉಸಿರಾಡುತ್ತಿದೆ. ಬದುಕನ್ನು ಸೆಳೆದು ಹಿಡಿದಿಡುವಂಥದ್ದೇನೋ ಇಲ್ಲಿದೆ. ಅದನ್ನು ನಾನು ನಿಧಾನವಾಗಿ ಕಂಡುಕೊಳ್ಳುತ್ತಿದ್ದೇನೆ.

 -ಭೀಮಾನಾಯ್ಕ ಎಸ್‌. ಶೀರಳ್ಳಿ, ಶಿವಮೊಗ್ಗ

Advertisement
Advertisement

Udayavani is now on Telegram. Click here to join our channel and stay updated with the latest news.

Next