Advertisement

ತ್ಯಾಜ್ಯ ವಿಂಗಡಣೆಗೆ ದೇಶಕ್ಕೆ ಬೆಂಗಳೂರೇ ಮಾದರಿ!

12:06 PM Apr 21, 2017 | Team Udayavani |

ಬೆಂಗಳೂರು: ಮೂಲದಲ್ಲೇ ತ್ಯಾಜ್ಯ ವಿಂಗಡಣೆಯಲ್ಲಿ ಶೇ.50ರಷ್ಟು ಸಾಧಿಸಿದ ದೇಶದ ಮೊದಲ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದ್ದು, ತ್ಯಾಜ್ಯ ವಿಂಗಡಣೆಯಲ್ಲಿ ಬಿಬಿಎಂಪಿ ಕ್ರಮಗಳನ್ನು ದೇಶಾದ್ಯಂತ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

Advertisement

ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಏ.5ರಂದು ದೇಶದ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದಿದ್ದು, ದೇಶಾದ್ಯಂತ ಎಲ್ಲ ನಗರಗಳಲ್ಲೂ ಘನ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವೈಜ್ಞಾನಿಕ ವಿಲೇವಾರಿಯಿಂದ ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ದೇಶದಲ್ಲಿನ 4,041 ನಗರಗಳಲ್ಲಿ ಮೂಲದಲ್ಲಿಯೇ ತ್ಯಾಜ್ಯ ವಿಂಗಡಿಸಿ ಪ್ರತ್ಯೇಕವಾಗಿ ಸಂಗ್ರಹಿಸಬೇಕು ಮತ್ತು ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆದೇಶ ನೀಡಿದ್ದಾರೆ. 

ಕೇಂದ್ರ ಸರ್ಕಾರ 2014ರ ಅಕ್ಟೋಬರ್‌ನಲ್ಲಿ  ಸ್ವತ್ಛ ಭಾರತ್‌ ಅಭಿಯಾನ ಆರಂಭಿ ಸಿದ್ದು, ದೇಶದ 4,041 ನಗರಗಳಲ್ಲಿ 2019ರ ಅ.2ರ ವೇಳೆಗೆ ಶೇ.100ರಷ್ಟು ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಅನುಷ್ಠಾ ನಗೊಳಿಸುವ ಗುರಿ ಹೊಂದಲಾಗಿದೆ. ಮೂಲ ದಲ್ಲೇ ಹಸಿ, ಒಣ ಹಾಗೂ ಅಪಾಯಕಾರಿ ತ್ಯಾಜ್ಯ ಪ್ರತ್ಯೇಕಿಸಿ ಸಂಗ್ರಹಿಸಬೇಕು. ಇದರಿಂದ ತ್ಯಾಜ್ಯ ಮರು ಬಳಕೆ, ವೈಜ್ಞಾನಿಕ ವಿಲೇವಾರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ನಗರಾಭಿವೃದ್ಧಿ ಇಲಾಖೆಯಿಂದ ಜೂ.5ರಂದು ದೇಶದ ಎಲ್ಲ ಸ್ಥಳೀಯ ಸಂಸ್ಥೆಗಳನ್ನು ಸೇರಿಸಿಕೊಂಡು ವಿಶ್ವ ಪರಿಸರ ದಿನಾಚರಣೆ ಆಚರಿಸಲಿದೆ. ಈ ವೇಳೆಗೆ 4,041 ನಗರಗಳು ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಆರಂಭಿಸಬೇಕಿದೆ. 2017ರ ಅ.2ರ ವೇಳೆಗೆ ಎಲ್ಲ ಸ್ಥಳೀಯ ಸಂಸ್ಥೆಗಳು ಶೇ.100ರಷ್ಟು ಮೂಲದಲ್ಲಿಯೇ ಕಸ ವಿಂಗಡಣೆ ಗುರಿ ಸಾಧಿಸಬೇಕು ಎಂದಿರುವ ಅವರು, ತ್ಯಾಜ್ಯ ವಿಲೇವಾರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೇ.35ರಷ್ಟು ಅನುದಾನ ನೀಡಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತಿ ಮನೆಯಲ್ಲೂ ಮೂಲದಲ್ಲಿಯೇ ಕಸ ವಿಂಗಡಿಸಬೇಕು. ಅಕ್ಟೋಬರ್‌ 2ರ ವೇಳೆಗೆ ಶೇ.100 ರಷ್ಟು ಕಸ ವಿಂಗಡಣೆ ಸಾಧಿಸಬೇಕು ಎಂದಿದ್ದಾರೆ. ಕೇಂದ್ರ ಸೂಚಿಸಿರುವ ದಿನಾಂಕಕ್ಕೂ ಮೊದಲೇ ಆ ಸಾಧನೆ ಮಾಡಲಿದ್ದು, ತ್ಯಾಜ್ಯ ವಿಂಗಡಣೆಯಲ್ಲಿ ಬಿಬಿಎಂಪಿ ದೇಶಕ್ಕೆ ಮಾದರಿಯಾಗಲಿದೆ. 
-ಎನ್‌. ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತರು

Advertisement
Advertisement

Udayavani is now on Telegram. Click here to join our channel and stay updated with the latest news.

Next