ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಬೆಂಗಳೂರು ಜಲಮಂಡಳಿಯು ಚೆನ್ನೈ ನೀರು ಸರಬರಾಜು ಮಂಡಳಿ ಮೊರೆ ಹೋಗಿದ್ದು, ಅಲ್ಲಿನ ತಂತ್ರಜ್ಞಾನ ಅಳವಡಿಸಿಕೊಂಡು ಬೆಂಗಳೂರಿನ ಕೆರೆಗಳಿಗೂ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಿದೆ. ಸಂಸ್ಕರಿಸಿದ ನೀರನ್ನು ಬಳಸಿ ಅಂತರ್ಜಲ ಮಟ್ಟ ಹೆಚ್ಚಿಸಿರುವ ಮಾದರಿ ಅಧ್ಯಯನ ನಡೆಸಲೆಂದೇ ಜಲಮಂಡಳಿಯ ಇಬ್ಬರು ಎಂಜಿಯರ್‌ಗಳನ್ನು ಚೆನ್ನೈಗೆ ಕಳುಹಿಸಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೆ ಹಾಹಾಕಾರ ಒಂದೊದಗಿದ್ದು, ನೀರು ಪೂರೈಸುವುದು ಜಲಮಂಡಳಿಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಜಲಮಂಡಳಿ ಅಧಿಕಾರಿಗಳು ಪರಿಹಾರ ಹುಡುಕುತ್ತಾ ಹೋದಾಗ ಅಂತರ್ಜಲ ಮಟ್ಟ ಕುಸಿದು ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿರುವುದರಿಂದ ನೀರಿನ ಸಮಸ್ಯೆ ಉಲ್ಬಣಿಸಿರುವುದು ಪತ್ತೆಯಾಗಿತ್ತು.
ಇದೇ ಸಮಸ್ಯೆ ಎದುರಿಸುತ್ತಿದ್ದ ಚೆನ್ನೈನ ನೀರು ಸರಬರಾಜು ಮಂಡಳಿಯು ಸಂಸ್ಕರಿಸಿದ ನೀರನ್ನು ಕೆಲವು ತಂತ್ರಜ್ಞಾನ ಹಾಗೂ ಪ್ರಕ್ರಿಯೆಗಳ ಮೂಲಕ ಕೆರೆಗಳಿಗೆ ತುಂಬಿಸಿ ಅಲ್ಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು. ಈ ಸಂಗತಿ ಜಲಮಂಡಳಿ ಅಧಿಕಾರಿಗಳ ಕಿವಿಗೆ ಬಿದ್ದಿತ್ತು. ಇದರ ಬೆನ್ನಲ್ಲೇ ಚೆನ್ನೈ ನೀರು ಸರಬರಾಜು ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಿದ, ಜಲಮಂಡಳಿ ಎಂಜಿನಿಯರ್‌ಗಳ ತಂಡವು ಈ ಬಗ್ಗೆ ಕೆಲವು ಮಾಹಿತಿ ಕಲೆ ಹಾಕಿ ದೃಢಪಡಿಸಿಕೊಂಡಿತ್ತು.
ಇಬ್ಬರು ಎಂಜಿನಿಯರ್‌ಗಳಿಂದ ಚೆನ್ನೈಗೆ: ಚೆನ್ನೈ ನೀರು ಸರಬರಾಜು ಮಂಡಳಿಯಲ್ಲಿ ಡಬ್ಲೂéಟಿಪಿ ಮೂಲಕ ಕೆರೆಗಳ ನೀರಿನ ಸಂಸ್ಕರಣೆಯ ಪ್ರಕ್ರಿಯೆ ಅಧ್ಯಯನ ಮಾಡಲು ಬೆಂಗಳೂರು ಜಲಮಂಡಳಿಯ ಮುಖ್ಯ ಎಂಜಿನಿಯರ್ (ಪ್ರಾಜೆಕ್ಟ್) ಕೆ.ಎನ್.ರಾಜೀವ್, ಹೆಚ್ಚುವರಿ ಮುಖ್ಯ ಎಂಜಿನಿಯರ್ (ಪ್ರಾಜೆಕ್ಟ್)-1 ಸಿ.ನಾರಾಯಣಸ್ವಾಮಿ ಅವರನ್ನು ನಾಮನಿರ್ದೇ ಶನಗೊಳಿಸಿ ಜಲಮಂಡಳಿಯ ಮುಖ್ಯ ಆಡಳಿತ ಅಧಿಕಾರಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಏ.5ರಂದು ಚೆನ್ನೈ ನೀರು ಸರಬರಾಜು ಮಂಡಳಿಗೆ ಭೇಟಿ ನೀಡಿ ಅಲ್ಲಿ ಕೆರೆಗೆ ನೀರನ್ನು ಸಂಸ್ಕರಿಸಲು ಅಳವಡಿಸಲಾಗಿರುವ ತಂತ್ರಜ್ಞಾನ ಮತ್ತು ಪ್ರಕ್ರಿಯೆಯನ್ನು ವಿವರವಾಗಿ ಅಧ್ಯಯನ ಮಾಡಬೇಕು. ನಂತರ ಬೆಂಗಳೂರಿನ ಹೊರಭಾಗ ದಲ್ಲಿರುವ ಕೆರೆಗಳಲ್ಲಿ ಮತ್ತು ತಾಂತ್ರಿಕವಾಗಿ ಕಾರ್ಯಸಾಧ್ಯವಾಗಿರುವ ಕೆರೆಗಳಲ್ಲಿ ಸೂಕ್ತ ಸಾಮರ್ಥ್ಯವಿರುವ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಏ.10 ರೊಳಗೆ ವರದಿ ಸಲ್ಲಿಸಲು ನಾಮನಿರ್ದೇಶಿತ ಎಂಜಿನಿಯರ್‌ಗಳಿಗೆ ಜಲಮಂಡಳಿಯು ನಿರ್ದೇಶಿಸಿದೆ.
ಅಂತರ್ಜಲ ಕುಸಿತಗೊಂಡಿರುವುದು ಏಕೆ?: ಬೆಂಗಳೂರಿನಲ್ಲಿ ಸಮರ್ಪಕ ಮಳೆ ನೀರು ಮರು ಪೂರಣ (ಮಳೆ ನೀರು ಕೊಯ್ಲು)ವ್ಯವಸ್ಥೆ ಮಾಡದೇ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಒಳಚರಂಡಿಗೆ ಹರಿದಿರುವುದು ಕಂಡು ಬಂದಿದೆ. ಹೀಗಾಗಿ ಅಂತರ್ಜಲ ಮಟ್ಟ ಕುಸಿದಿದೆ. ಇನ್ನು ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ನಾಯಂಡಹಳ್ಳಿ ಕೆರೆ ಸೇರಿ 14 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಚೆನ್ನೈ ನೀರು ಸರಬರಾಜು ಮಂಡಳಿ ಮಾದರಿಯಲ್ಲಿ ನಗರದ ಹೆಚ್ಚಿನ ಕೆರೆಗಳಿಗೆ ನೀರನ್ನು ತುಂಬಿಸಲು ಚಿಂತಿಸಲಾಗಿದೆ. ವೃಷಭಾವತಿ ವ್ಯಾಲಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ, ನಾಯಂಡಹಳ್ಳಿ ಕೆರೆ, ಕೆಂಗೇರಿ ಎಸ್.ಟಿ.ಪಿ, ಮಂಡಳಿ ವತಿಯಿಂದ ಸಂಸ್ಕರಿಸಿದ ನೀರನ್ನು ಕೆಂಗೇರಿ ಕೆರೆಗೆ ತುಂಬಿಸಲು ಕಾಮಗಾರಿಯು ಭರದಿಂದ ಸಾಗಿದೆ. ಜಲಮಂಡಳಿಯು ಸಂಸ್ಕರಿಸಿದ ನೀರನ್ನು ದುಬಾಸಿಪಾಳ್ಯ, ಹೊಸಹಳ್ಳಿಕೆರೆ ಹಾಗೂ ಅಲಗೆವಡೆರಹಳ್ಳಿ ಕೆರೆಗಳಿಗೂ ತುಂಬಿಸುತ್ತಿದೆ.
– ಅವಿನಾಶ್ ಮೂಡಂಬಿಕಾನ