Advertisement

ಉತ್ತಮ ಗುಣಮಟ್ಟದ ಚಿತ್ರಗಳು ಮೂಡಿಬರಬೇಕಾಗಿದೆ : ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

11:14 AM Feb 27, 2020 | sudhir |

ಬೆಂಗಳೂರು: ಕನ್ನಡ ಸಿನಿಮಾರಂಗದಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಚಿತ್ರಗಳು ಮೂಡಿ ಬರಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಭಿಪ್ರಾಯ ಪಟ್ಟರು.

Advertisement

ಕರ್ನಾಟಕ ಚಲನಚಿತ್ರ ಅಕಾಡೆಮಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ “12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ಸುಮಾರು 450 ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಅವುಗಳ ಗುಣಮಟ್ಟ ಹೇಳಿಕೊಳ್ಳುವ ಹಾಗೇ ಇಲ್ಲ. ಆ ಹಿನ್ನೆಲೆಯಲ್ಲಿ ಚಿತ್ರಗಳ ಗುಣಮಟ್ಟ ಮತ್ತಷ್ಟು ಸುಧಾರಣೆ ಆಗುವ ಅಗತ್ಯವಿದೆ ಎಂದರು.

ಸರ್ಕಾರ ಕೂಡ ಕನ್ನಡ ಉತ್ತಮ ಸಿನಿಮಾಗಳಿಗೆ ಉತ್ತೇಜನ ನೀಡುತ್ತಿದೆ. ಮಕ್ಕಳ ಚಿತ್ರಗಳಿಗೂ ಪ್ರೋತ್ಸಾಹ ನೀಡುತ್ತಿದೆ. ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಭಾಜನವಾದಂತಹ ಸಿನಿಮಾಗಳಿಗೂ ಉತ್ತೇಜನ ನೀಡುತ್ತಿದೆ. ಆ ಹಿನ್ನೆಲೆಯಲ್ಲಿ ಕನ್ನಡ ಸಿನಿಮಾರಂಗ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಬಾಲಿವುಡ್‌ನ‌ ಹಿರಿಯ ನಿರ್ದೇಶಕ ಸತ್ಯಜಿತ್‌ ರೇ ಅವರು ಕನ್ನಡದಲ್ಲಿ ನಿರ್ಮಾಣವಾಗುತ್ತಿರುವಂತಹ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಮೂಡಿಬರಬೇಕು ಎಂದು ಕನ್ನಡ ಸಿನಿಮಾಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಆ ಹಿಂದಿನ ಗತವೈಭವ ಮತ್ತೆ ಮರಳುವ ನಿಟ್ಟಿನಲ್ಲಿ ಕೆಲಸ ಆಗಬೇಕಾಗಿದೆ. ಈಗಾಗಲೇ ಕನ್ನಡ ಚಲನಚಿತ್ರ ಅಕಾಡೆಮಿ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದು ಅವುಗಳ ಈಡೇರಿಕೆಗೆ ಪ್ರಯತ್ನಿಸುವುದಾಗಿ ನುಡಿದರು.

Advertisement

ಪಿಂಚಣಿ ಯೋಜನೆಗೆ ಮನವಿ: ಕನ್ನಡ ಚಲನ ಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಕಾಡೆಮಿಗೆ 5 ಕೋಟಿ ರೂ.ಅನುದಾನ ನೀಡಿದ್ದಾರೆ ಆ ಹಿನ್ನಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಹೇಳಿದರು. ಕನ್ನಡ ಚಿತ್ರರಂಗದಲ್ಲಿ ಹಲವು ಕಲಾವಿದರು ಆರ್ಥಿಕವಾಗಿ ಸದೃಢವಾಗಿಲ್ಲ. ಆ ಹಿನ್ನೆಲೆಯಲ್ಲಿ ಅವರ ಜೀವನಕ್ಕೆ ಅನುಕೂಲವಾಗಲು ಪಿಂಚಣಿ ಯೋಜನೆ ಮತ್ತು ವೈದ್ಯಕೀಯ ಸೌಲಭ್ಯಗಳ ನೆರವು ನೀಡಬೇಕು ಎಂದು ಮನವಿ ಮಾಡಿದರು.

ಹಂಪಿ, ಐಹೊಳ್ಳೆ, ಶಿವಮೊಗ್ಗ ಸೇರಿದಂತೆ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕನ್ನಡ ಸಿನಿಮಾರಂಗ ನಡೆದು ಬಂದ ಹಾದಿಯನ್ನು ತಿಳಿಹೇಳುವ ಸಂಬಧ ಮ್ಯೂಸಿಯಂ ಸ್ಥಾಪನೆ ಮಾಡುವ ಆಲೋಚನೆ ಅಕಾಡೆಮಿಗೆ ಇದೆ. ಸಿನಿಮಾಕ್ಕೆ ಸಂಬಂಧಿಸಿದ ಗ್ರಂಥಾಲಯಗಳನ್ನು ಜಿಲ್ಲಾ ಕೇಂದ್ರ ಸ್ಥಾಪಿಸುವ ಜತೆಗೆ ಸುಸಜ್ಜಿತ ಸ್ಟುಡಿಯೊ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದರು.

ಅನುದಾನಕ್ಕೆ ಮನವಿ:
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜಯರಾಜ್‌ ಮಾತನಾಡಿ, ಈ ವರ್ಷ ನಡೆಯಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬೆಳ್ಳಿಹಬ್ಬ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದರು. ಸರಕು ಸೇವಾ ತೆರಿಗೆ ಜಾರಿಯಿಂದ ನಿರ್ಮಾಪಕರಿಗೆ ಬಹಳಷ್ಟು ಹೊಡೆತ ಬಿದ್ದಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು. ಬಹುಭಾಷಾ ತಾರೆ ಜಯಪ್ರದ, ಹಿನ್ನೆಲೆಗಾಯಕ ಸೋನು ನಿಗಮ್‌, ಚಿತ್ರನಟ ಯಶ್‌, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಆಯುಕ್ತ ಎಸ್‌.ಎನ್‌.ಸಿದ್ದರಾಮಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ನೆಲದಲ್ಲಿ ಚಿತ್ರೀತವಾಗಿವೆ
ಬಾಲಿವುಡ್‌ ನಿರ್ಮಾಪಕ ಬೋನಿಕಪೂರ್‌ ಮಾತನಾಡಿ ನಾನು, ನಿರ್ಮಿಸಿರುವ ಸಿನಿಮಾಗಳು ಕನ್ನಡದ ನೆಲದಲ್ಲಿ ಚಿತ್ರೀಕರಣ ಮಾಡಲಾಗಿದೆ. “ಹಮ್‌ ಪಾಂಚ್‌’ ಸೇರಿದಂತೆ ನಾನು ನಿರ್ಮಾಣ ಮಾಡಿದ ಕೆಲವು ಸಿನಿಮಾಗಳು ಮೇಲುಕೋಟೆ, ಮೈಸೂರು ಮತ್ತು ಬೆಂಗಳೂರಿನ ಆಸು-ಪಾಸುಗಳಲ್ಲಿ ಚಿತ್ರೀಕರಣಗೊಂಡದೆ ಎಂದು ಹೇಳಿದರು. ಊಟ ಮಾಡಿದಿರಾ? ಸೇರಿದಂತೆ ನನಗೂ ಕನ್ನಡದ ಕೆಲವು ಪದಗಳು ಬರುತ್ತದೆ ಎಂದು ಹೇಳಿ ಸಭಿಕರ ಚಪ್ಪಾಳೆಗೆ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next