ಬೆಂಗಳೂರು: ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ನಾಯಿ ಕಚ್ಚಿದ ದ್ವೇಷದಿಂದಲೇ ಕೃತ್ಯ ನಡೆದಿದೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಠಾಣೆ ವ್ಯಾಪ್ತಿಯ ವೇಣುಗೋಪಾಲಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಮನೆ ಮುಂಭಾಗ ಅ.23ರಂದು ನಸುಕಿನಲ್ಲಿ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಸಂಬಂಧ ಪುಷ್ಪಾ ಎಂಬುವರು ದೂರು ನೀಡಿದ್ದು, ನಂಜುಂಡಬಾಬು ಹಾಗೂ ಗೌರಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸ ಲಾಗಿದೆ ಎಂದು ಪೊಲೀಸರು ಹೇಳಿದರು.
ನಂಜುಂಡಬಾಬು ಮತ್ತು ಗೌರಮ್ಮ ನಾಯಿಯೊಂದನ್ನು ಸಾಕಿದ್ದು, ಆ ನಾಯಿ, ಪುಷ್ಪಾ ಎಂಬುವರಿಗೆ ಕೆಲ ದಿನಗಳ ಹಿಂದೆ ಕಚ್ಚಿತ್ತು. ಗಾಯಗೊಂಡಿದ್ದ ದೂರುದಾರರು ಚಿಕಿತ್ಸೆ ಪಡೆಯುತ್ತಿದ್ದರು. ನಾಯಿ ಕಚ್ಚಿದ್ದ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಜತೆಗೆ, ಆರೋಪಿಗಳು ಹಾಗೂ ದೂರುದಾರರ ನಡುವೆ ಚೀಟಿ ವ್ಯವಹಾರವಿತ್ತು. ಈ ಸಂಬಂಧವೂ ವೈಮನಸ್ಸು ಉಂಟಾಗಿತ್ತು ಎಂಬುದು ಗೊತ್ತಾಗಿದೆ. ಅ. 22ರಂದು ಚೀಟಿ ಹಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳು ಹಾಗೂ ದೂರುದಾರರ ನಡುವೆ ವಾಗ್ವಾದ ನಡೆದಿದೆ. ನಾಯಿ ಕಚ್ಚಿದ್ದರಿಂದ ಚೀಟಿ ಹಣ ಚಿಕಿತ್ಸೆಗೆ ಬಳಸಿಕೊಂಡಿರುವುದಾಗಿ ದೂರುದಾರರು ಹೇಳಿದ್ದರು. ಈ ವೇಳೆ ನಾಯಿ ಕಚ್ಚಿದಕ್ಕೆ ತಮ್ಮ ವಿರುದ್ಧ ದೂರು ನೀಡಿದ್ದ ವ್ಯಕ್ತಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದ್ದಾರೆ. ಈ ಬೆನ್ನಲ್ಲೇ ಅ.23ರಂದು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ದೂರುದಾರೆ ಪುಷ್ಪಾ ಹೇಳುತ್ತಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿ ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.
ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.