ಬೆಂಗಳೂರು: ಗ್ರಾಹಕರಿಗೆ ಬಿಲ್ ನೀಡುವ ವಿಚಾರಕ್ಕೆ ಇಬ್ಬರು ಸಹೋದ್ಯೋಗಿಗಳ ನಡುವೆ ಉಂಟಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರ ಮೂಲದ ಮಲ್ಲಿಕಾರ್ಜುನ(24) ಕೊಲೆಯಾದವ.
ಕೃತ್ಯ ಎಸಗಿದ ಬಳ್ಳಾರಿ ಮೂಲದ ರಾಜರತ್ನ (26 ) ನನ್ನು ಬಂಧಿಸಲಾಗಿದೆ.
ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಮಲ್ಲಿಕಾರ್ಜುನ್ ಮತ್ತು ರಾಜರತ್ನ ಯಲಹಂಕದ ಪಿಜಿಯಲ್ಲಿ ವಾಸವಾಗಿದ್ದರು. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲ್‌ವೊಂದರ ಬಟ್ಟೆ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಬಟ್ಟೆ ಖರೀದಿ ಮಾಡಿದ ಗ್ರಾಹಕರಿಗೆ ಬಿಲ್ ಸರಿಯಾಗಿ ನೀಡುವುದಿಲ್ಲ. ಹಣ ಜಮೆ ಸರಿಯಾಗಿ ಆಗುತ್ತಿಲ್ಲ ಎಂಬ ವಿಚಾರಕ್ಕೆ ಮಲ್ಲಿಕಾರ್ಜುನ ರಾಜರತ್ನಗೆ ಪದೇ ಪದೆ ರೇಗಿಸುತ್ತಿದ್ದ. ಅಲ್ಲದೆ, ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರು.
ಸೆ.26ರಂದು ಸಂಜೆ ಇಬ್ಬರ ನಡುವೆ ಜಗಳ ನಡೆದಿದ್ದು, ಅದು ವಿಕೋಪಕ್ಕೆ ಹೋದಾಗ ರಾಜರತ್ನ ಕತ್ತರಿಂದ ಮಲ್ಲಿಕಾರ್ಜುನ ಎದೆಗೆ ಇರಿದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ಮಲ್ಲಿಕಾರ್ಜುನ ಮೃತಪಟ್ಟಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.