ಬೆಂಗಳೂರು: ಎರಡನೇ ಮದುವೆಗೆ ನಿರಾಕರಿಸಿದ ಸ್ನೇಹಿತೆಗೆ ಆಟೋ ಚಾಲಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ಆರ್.ಟಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆರ್.ಟಿ.ನಗರ ನಿವಾಸಿ ಹಬೀಬ್ ತಾಜ್ (30) ಇರಿತಕ್ಕೊಳಗಾದ ಮಹಿಳೆ.
ಕೃತ್ಯ ಎಸಗಿದ ಆರೋಪಿ ಶೇಕ್ ಮೆಹಬೂಬ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಹಬೀಬ್ ತಾಜ್‌ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಈ ಮಧ್ಯೆ ಕೆಲ ವರ್ಷಗಳ ಹಿಂದೆ ಆಕೆಯ ಪತಿ ಮೃತಪಟ್ಟಿದ್ದರು. ಈ ವೇಳೆ ತನ್ನ ಶಾಲಾ ದಿನಗಳ ಸ್ನೇಹಿತ ಶೇಖ್ ಮೆಹಬೂಬ್ ಪರಿಚಯವಾಗಿದ್ದು, ಆತನ ಜತೆ ಆತ್ಮೀಯತೆ ಇತ್ತು. ಅದನ್ನೇ ದುರುಪಯೋಗ ಪಡಿಸಿಕೊಂಡ ಆರೋಪಿ, ಹಬೀಬ್‌ಳನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆಕೆ, ತನಗೆ ಮದುವೆಯಾಗಿದ್ದು, ಈಗಾಗಲೇ ಇಬ್ಬರು ಮಕ್ಕಳು ಇದ್ದಾರೆ ಎಂದು ಹೇಳಿದ್ದರು. ಆದರೂ ಆರೋಪಿ ಮದುವೆಗೆ ಪೀಡಿಸುತ್ತಿದ್ದ. ಮತ್ತೂಂದೆಡೆ ಆತನಿಗೂ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಆದರೂ ಹಬೀಬ್ ಜತೆ ಅಕ್ರಮ ಸಂಬಂಧ ಹೊಂದಲು ಮುಂದಾಗಿದ್ದ. ಅದಕ್ಕೆ ನಿರಾಕರಿಸಿದಾಗ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಬಂದು ಹಬೀಬ್ ಜತೆ ಜಗಳ ತೆಗೆದು, ಆಕೆ ಸೊಂಟ ಹಾಗೂ ಅಂಗೈಗೆ ಇರಿದು ಪರಾರಿಯಾ ಗಿದ್ದ. ಅದನ್ನು ಗಮನಿಸಿದ ಮನೆ ಮಾಲೀಕರು ಕೂಡಲೇ ಆಕೆಯ ಸಹೋದರಿ ರಿಯಾಜ್ ಪಾಷಾಗೆ ಮಾಹಿತಿ ನೀಡಿದ್ದಾರೆ.
ಆತ ಸ್ಥಳೀಯ ನೆರವು ಪಡೆದು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹಬೀಬ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.