Advertisement

Bangalore: ಬಾಗಿಲಿಗೆ ಹೊಡೆದ ಗುಂಡು ಪುತ್ರನ ಹೊಟ್ಟೆಗೆ ತಾಗಿ ಸಾವು

01:53 PM Jan 27, 2024 | Team Udayavani |

ಬೆಂಗಳೂರು: ಹಣಕಾಸಿನ ವಿಚಾರವಾಗಿ ತಂದೆ- ಮಗನ ನಡುವೆ ನಡೆದ ಜಗಳದಲ್ಲಿ ತಂದೆ ಎಸ್‌ ಬಿಬಿಎಲ್‌ ಶಾರ್ಟ್‌ ಗನ್‌ನಿಂದ ಮಗನಿಗೆ ಗುಂಡು ಹಾರಿಸಿ ಕೊಲೆ ಮಾಡಿರುವ ಪ್ರಕರಣ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕೊಡಗು ಮೂಲದ ಕಾಮಾಕ್ಷಿಪಾಳ್ಯದ ಕಾರೇಕಲ್ಲಿನ ನಿವಾಸಿ ನರ್ತನ್‌ ಬೋಪಣ್ಣ (35) ಕೊಲೆಯಾದ ಯುವಕ. ಆತನ ತಂದೆ ಕೆ.ಜಿ.ಸುರೇಶ್‌ (58) ಬಂಧಿತ ಆರೋಪಿ.

ಆರೋಪಿ ಮನೆ ಯಲ್ಲಿದ್ದ 2 ಎಸ್‌ಬಿಬಿಎಲ್‌ ಗನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸುರೇಶ್‌ ಪುತ್ರ ನರ್ತನ್‌ ಡಿಪ್ಲೊಮಾ ವ್ಯಾಸಂಗ ಮಾಡಿ ಉದ್ಯೋಗವಿಲ್ಲದೇ ಮನೆ ಯಲ್ಲೇ ಇದ್ದ. ಸೆಕ್ಯೂರಿಟಿಗಾರ್ಡ್‌ ಕೆಲಸ ಮಾಡುತ್ತಿದ್ದ ಸುರೇಶ್‌ ಇತ್ತೀಚೆಗೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ನರ್ತನ್‌ ಪದೇ ಪದೆ ತಂದೆ ಬಳಿ ದುಡ್ಡು ಕೇಳುತ್ತಿದ್ದ. ಇದರಿಂದ ಬೇಸತ್ತಿದ್ದ ತಂದೆ ಸುರೇಶ್‌ ಮಗನಿಗೆ ದುಡಿದು ಹಣ ಸಂಪಾದಿಸುವಂತೆ ಹೇಳುತ್ತಿದ್ದರು. ಇದೇ ವಿಚಾರವಾಗಿ ಗುರುವಾರ ಮಧ್ಯಾಹ್ನ 3.40ರಲ್ಲಿ ತಂದೆ ಹಾಗೂ ಮಗನ ನಡುವೆ ಜಗಳ ನಡೆದಿತ್ತು. ಆ ವೇಳೆ ತಂದೆಯ ಮೇಲೆ ರೇಗಾಡಿದ ನರ್ತನ್‌ ರೂಮಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದ. ಸುರೇಶ್‌ ಬಾಗಿಲು ತೆಗೆಯುವಂತೆ ಸೂಚಿಸಿದರೂ ಆತ ಪ್ರತಿಕ್ರಿಯಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸುರೇಶ್‌ ಮನೆಯಲ್ಲಿದ್ದ ಪರವಾನಗಿ ಹೊಂದಿದ್ದ ಎಸ್‌ಬಿಬಿಎಲ್‌ ಶಾಟ್‌ಗನ್‌ನಿಂದ ಪುತ್ರನಿದ್ದ ಕೊಠಡಿಯ ಬಾಗಿಲಿಗೆ ಗುಂಡು ಹಾರಿಸಿದ್ದ. ಅದು ರೂಮಿನೊಳಗಿದ್ದ ನರ್ತನ್‌ ಹೊಟ್ಟೆಗೆ ತಾಗಿತ್ತು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ನರ್ತನ್‌ ಕೂಡಲೇ ತಂಗಿಯ ಮೊಬೈಲ್‌ಗೆ ಕರೆ ಮಾಡಿ ತಂದೆ ಗುಂಡು ಹಾರಿಸಿರುವ ವಿಚಾರ ತಿಳಿಸಿದ್ದ.

ಇತ್ತ ನರ್ತನ್‌ ತಂಗಿ ತನ್ನ ಸಂಬಂಧಿಗೆ ಕರೆ ಮಾಡಿ ಮನೆಯ ಹತ್ತಿರ ಹೋಗಿ ಸಹೋದರನನ್ನು ಆಸ್ಪತ್ರೆಗೆ ದಾಖಲಿಸುವಂತೆ ಮನವಿ ಮಾಡಿದ್ದಳು. ಇತ್ತ ನರ್ತನ್‌ ಸಂಬಂಧಿಯೊಬ್ಬರು ಇವರ ಮನೆಗೆ ಬಂದು ರೂಂ ಬಾಗಿಲು ತೆಗೆಯುವಂತೆ ಸೂಚಿಸಿ ನೋಡಿದಾಗ ನರ್ತನ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನನ್ನು ಕೂಡಲೇ ಬಸವೇಶ್ವರನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆ ಫ‌ಲಿಸದೇ ನರ್ತನ್‌ ಸಂಜೆ 6.20ಕ್ಕೆ ಮೃತಪಟ್ಟಿದ್ದ. ಪ್ರಕರಣದ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಕ್ತಸ್ರಾವದಲ್ಲೇ ನರಳುತ್ತಿದ್ದ ನರ್ತನ್‌: ಗುಂಡು ನರ್ತನ್‌ ದೇಹಕ್ಕೆ ಹೊಕ್ಕುತ್ತಿದ್ದಂತೆಯೇ ನರ್ತನ್‌ ತನ್ನ ಸಹೋದರಿಗೆ ಕರೆ ಮಾಡಿ ತಂದೆ ನನ್ನ ಮೇಲೆ ಗುಂಡು ಹಾರಿಸಿ¨ªಾರೆ ಎಂದು ಹೇಳಿದ್ದ. ಸಹೋದರಿ ಸಂಬಂಧಿಕರೊಬ್ಬರಿಗೆ ಮಾಹಿತಿ ನೀಡಿ ಅವರು ಮನೆಗೆ ಬರುವಷ್ಟರಲ್ಲಿ ಕೃತ್ಯ ನಡೆದು ಸುಮಾರು ಸಮಯ ಕಳೆದಿತ್ತು. ಅಷ್ಟು ಹೊತ್ತು ರಕ್ತ ಸ್ರಾವವಾಗಿ ನರ್ತನ್‌ ನಿತ್ರಾಣಗೊಂಡು ಅಸ್ವಸ್ಥನಾಗಿದ್ದ. ಆ ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ನರ್ತನ್‌ ತಾಯಿ ಅಸಹಾಯಕರಾಗಿ ಹಾಸಿಗೆ ಹಿಡಿದಿದ್ದರು ಎಂದು ತಿಳಿದು ಬಂದಿದೆ.

Advertisement

ಪ್ರತಿ ಆಯಾಮಗಳಲ್ಲೂ ತನಿಖೆ ಆರಂಭ ಪುತ್ರ ನರ್ತನ್‌ ಯಾವುದೇ ಕೆಲಸಕ್ಕೆ : ಹೋಗುತ್ತಿರಲಿಲ್ಲ. ಮನೆ ಜವಾಬ್ದಾರಿಯನ್ನು ಆತನ ತಂಗಿಯೇ ನಿಭಾಯಿಸುತ್ತಿದ್ದಳು ಎಂದು ಪೊಲೀಸ್‌ ವಿಚಾರಣೆ ವೇಳೆ ತಂದೆ ಸುರೇಶ್‌ ಹೇಳಿದ್ದಾನೆ. ಪುತ್ರನ ಬಳಿ ಸುರೇಶ್‌ ಹಣಕ್ಕಾಗಿ ಪೀಡಿಸುತ್ತಿದ್ದನಾ ಎಂಬ ಬಗ್ಗೆಯೂ ಗುಮಾನಿ ಇದೆ. ಸುರೇಶ್‌ ಸೂಕ್ತ ರೀತಿಯಲ್ಲಿ ಮಾಹಿತಿ ನೀಡದೇ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ. ಇದೀಗ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಇಂತಹ ಪ್ರಕರಣದಲ್ಲಿ ಪತ್ತೆಯಾದ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ತನಿಖೆ ನಡೆಸಲಿದ್ದಾರೆ.

ಆಸ್ಪತ್ರೆಯಲ್ಲಿ ಯುವಕನ ಮೃತದೇಹದ ಹೊಟ್ಟೆಯಲ್ಲಿ ಗುಂಡು ಪತ್ತೆಯಾದಾಗಲೇ ಸತ್ಯ ಬಯಲಿಗೆ : ಪುತ್ರ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಆತಂಕಗೊಂಡ ತಂದೆ ಸುರೇಶ್‌ ಮನೆಯಲ್ಲಿ ಚೆಲ್ಲಿದ್ದ ರಕ್ತವನ್ನು ಸ್ವತ್ಛಗೊಳಿಸಿ ತೊಳೆದು ಸಾಕ್ಷ್ಯ ನಾಶಪಡಿಸಿದ್ದ. ಸ್ವಯಂ ಪ್ರೇರಿತವಾಗಿ ನರ್ತನ್‌ ಗುಂಡು ಹಾರಿಸಿರುವುದಾಗಿ ನರ್ತನ್‌ ಸಹೋದರಿ ಮೊದಲು ಹೇಳಿಕೆ ನೀಡಿದ್ದಳು. ಗುಂಡು ಹಾರಿಸಿ ಬಾಗಿಲು ತೂತಾಗಿರುವ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ, ಆಯ ತಪ್ಪಿ ಗುಂಡು ಆತನಿಗೆ ತಾಗಿ ಬಾಗಿಲಿಗೆ ಹೊಡೆದಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಳು. ಈ ಮಾಹಿತಿ ಆಧರಿಸಿ ಬುಲೆಟ್‌ ಮನೆಯೊಳಗೆ ಬಿದ್ದಿರಬಹುದು ಎಂದು ಪೊಲೀಸರು ಹುಡುಕಾಟ ನಡೆಸಿದಾಗ ಅಲ್ಲಿ ಬುಲೆಟ್‌ ಸಿಕ್ಕಿರಲಿಲ್ಲ. ನಂತರ ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ವಿಚಾರಿಸಿದಾಗ, ನರ್ತನ್‌ ಹೊಟ್ಟೆಯ ಭಾಗ ಎಕ್ಸರೇ ಮಾಡಿದಾಗ ಬುಲೆಟ್‌ ಹೊಕ್ಕಿರುವುದು ಕಂಡು ಬಂದಿದೆ ಎಂದು ತೋರಿಸಿದ್ದರು. ಅನುಮಾನ ಬಂದು ನರ್ತನ್‌ ಸಹೋದರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next