ಬೆಂಗಳೂರು: ತವರು ಮನೆಯಿಂದ ವರದಕ್ಷಿಣಿ ತರುವಂತೆ ಕಿರುಕುಳ ನೀಡುತ್ತಿದ್ದ ಪತಿಯೊಬ್ಬ ಆಕೆ ಖಾಸಗಿ ಭಾಗಕ್ಕೆ ಬಾತ್‌ರೂಮ್ ಸ್ವಚ್ಛಗೊಳಿಸುವ ಆ್ಯಸಿಡ್ ಎರಚಿದ್ದಾನೆ.
ಈ ಸಂಬಂಧ 23 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಾಗಲಗುಂಟೆ ಠಾಣೆ ಪೊಲೀಸರು ಆಕೆಯ ಪತಿ ಸಂತೋಷ್, ಅತ್ತೆ ಪುಟ್ಟಮ್ಮ ವಿರುದ್ಧ ವರದಕ್ಷಿಣಿ ಕಿರುಕುಳ, ಆ್ಯಸಿಡ್ ದಾಳಿ ಹಾಗೂ ಪತಿ ಮತ್ತು ಆತನ ಕುಟಂಬದಿಂದ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿದೆ. ಹೀಗಾಗಿ ಪ್ರಾಥಮಿಕವಾಗಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗಾಗಿ ಮೈಸೂರಿಗೆ ವರ್ಗಾಯಿಸಲಾಗಿದೆ.
2023ರ ಮೇ 13ರಂದು ಸಂತ್ರಸ್ತೆ ಪಾಂಡವಪುರ ತಾಲೂಕಿನ ಅಂತನಹಳ್ಳಿಯ ತಮ್ಮಯ್ಯಚಾರಿ ಮತ್ತು ಪುಟ್ಟಮ್ಮ ದಂಪತಿ ಪುತ್ರ ಸಂತೋಷ್ ಜತೆ ಮದುವೆಯಾಗಿದ್ದರು. ಈ ವೇಳೆ 20 ಗ್ರಾಂ ಚಿನ್ನಾಭರಣ ಕೊಡಲಾಗಿತ್ತು. 3 ತಿಂಗಳ ಹಿಂದೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ದಂಪತಿ ವಾಸವಾಗಿದ್ದರು. ಆದರೆ, ಕೆಲಸಕ್ಕೆ ಹೋಗದೆ ನಿತ್ಯ ಮದ್ಯ ಸೇವಿಸುತ್ತಿದ್ದ. ಹೀಗಾಗಿ ಮನೆ ಬಾಡಿಗೆ ಹಣ ಕಟ್ಟಲು ಸಾಧ್ಯವಾಗದೆ ಮೈಸೂರಿಗೆ ಸ್ಥಳಾಂತರಗೊಂಡೆವು. ಅಲ್ಲಿಯೂ ನಿತ್ಯ ವರದಕ್ಷಿಣೆ ತರುವಂತೆ ಹಲ್ಲೆ ನಡೆಸುತ್ತಿದ್ದ. ಆದರಿಂದ ಹಿರಿಯರು ರಾಜಿ-ಸಂಧಾನ ಮಾಡಿದ್ದರು. ಆದರೂ ಆರೋಪಿ ಎರಡು ತಿಂಗಳ ಹಿಂದೆ ರಾತ್ರಿ ಮದ್ಯದ ಅಮಲಿನಲ್ಲಿ ಮನೆಗೆ ಬಂದು ತನ್ನ ಮೇಲೆ ಹಲ್ಲೆ ನಡೆಸಿದಲ್ಲದೆ, ಬಾತ್ ರೂಮ್ ಸ್ವಚ್ಛಗೊಳಿಸಲು ಇಟ್ಟಿದ್ದ ಆ್ಯಸಿಡ್ ಅನ್ನು ತನ್ನ ಬೆನ್ನು ಮತ್ತು ಖಾಸಗಿ ಅಂಗಕ್ಕೆ ಎಸೆದು ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.
ಹೀಗಾಗಿ ಪತಿ ಸಂತೋಷ್ ಹಾಗೂ ಆತನ ತಾಯಿ ಪುಟ್ಟಮ್ಮ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸಂತ್ರಸ್ತೆ ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗಾಗಿ ಮೈಸೂರಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ಹೇಳಿದರು.