ಬೆಂಗಳೂರು: ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಎಂ.ಎಸ್. ಪದವೀಧರೆ ಡೆತ್‌ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿ ಸಿದಂತೆ ಆಕೆಯ ಪತಿ, ಅತ್ತೆ, ಮಾವ ಸೇರಿ ಐವರು ಕುಟುಂಬಸ್ಥರನ್ನು ಗೋವಿಂದರಾಜನಗರ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ವಿಜಯನಗರ ನಿವಾಸಿ ಐಶ್ವರ್ಯ (26) ಆತ್ಮಹತ್ಯೆ ಮಾಡಿಕೊಂಡವಳು.
ಐಶ್ವರ್ಯ ತಾಯಿ ಶಿಕ್ಷಕಿ ಉಷಾ ಸುಬ್ರಹ್ಮಣ್ಯ ಕೊಟ್ಟ ದೂರಿನ ಮೇಲೆ ಸೀತ ಡೇರಿ ರಿಚ್ ಐಸ್ಕ್ರೀಮ್ ಕಂಪನಿ ಮಾಲೀಕ ಚಂದ್ರಲೇಔಟ್ ನಿವಾಸಿ ಐಶ್ವರ್ಯ ಪತಿ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಮ್ಮ, ಮೈದುನ ವಿಜಯ ಹಾಗೂ ಆತನ ಪತ್ನಿ ತಸ್ಮೈಯ್ ಎಂಬುವರನ್ನು ಬಂಧಿಸಿದ್ದಾರೆ.
ಅಮೆರಿಕದಲ್ಲಿ ಎಂಎಸ್ ಮಾಡಿದ್ದ ಐಶ್ವರ್ಯ 5 ವರ್ಷ ಹಿಂದೆ ಸೀತ ಡೇರಿ ರಿಚ್ ಐಸ್ ಕ್ರೀಮ್ ಕಂಪನಿ ಮಾಲೀಕ ರಾಜೇಶ್‌ನನ್ನು ವಿವಾಹವಾಗಿದ್ದರು. ಈಕೆಯ ಪತಿ ರಾಜೇಶ್, ಮಾವ ಗಿರಿಯಪ್ಪ ಗೌಡ, ಅತ್ತೆ ಸೀತಮ್ಮ, ಮೈದುನ ವಿಜಯ್, ಓರಗಿತ್ತಿ ತಸ್ಮೈಯ್ ಜೊತೆಗೆ ವಾಸಿಸುತ್ತಿದ್ದರು. ಐಶ್ವರ್ಯ ತಂದೆ ಸುಬ್ರಮಣಿಯ ತಂಗಿ ಗಂಡನಾದ ರವೀಂದ್ರ ಇದೇ ಕಂಪನಿಯಲ್ಲಿ ಆಡಿಟರ್ ಆಗಿದ್ದು, ಆತನೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದ. ಕೆಲ ದಿನಗಳ ಬಳಿಕ ಆಸ್ತಿ ವಿಚಾರವಾಗಿ ರವೀಂದ್ರ ಹಾಗೂ ಸುಬ್ರಮಣಿ ಕುಟುಂಬಕ್ಕೆ ಜಗಳ ನಡೆದಿತ್ತು. ರವೀಂದ್ರ ಇದರಿಂದ ಆಕ್ರೋಶಗೊಂಡು ಐಶ್ವರ್ಯ ಕುರಿತು ಅವರ ಕುಟುಂಬಸ್ಥರಿಗೆ ಇಲ್ಲ ಸಲ್ಲದ ಆರೋಪ ಮಾಡಿದ್ದ. ಐಶ್ವರ್ಯಳ ಹಳೆಯ ಪೋಟೋ ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸಿದ್ದ.
ತವರು ಮನೆಯಲ್ಲಿ ಆತ್ಮಹತ್ಯೆ: ಇದಾದ ಬಳಿಕ ರಾಜೇಶ್ ಕುಟುಂಬಸ್ಥರು ಸಣ್ಣಪುಟ್ಟ ವಿಚಾರಕ್ಕೆ ಐಶ್ವರ್ಯ ಜೊತೆಗೆ ಜಗಳ ಮಾಡುತ್ತಿದ್ದರು. ನೀನು ತವರು ಮನೆಗೆ ಹೋಗಬೇಡ, ಅಡುಗೆ ಸರಿಯಾಗಿ ಮಾಡುವುದಿಲ್ಲವೆಂದು ಜಗಳ ತೆಗೆಯುತ್ತಿದ್ದರು. ನಡತೆ ಸರಿಯಿಲ್ಲ, ನೀನು ಹೊರಗಡೆ ಅವರಿವರ ಜೊತೆ ಸುತ್ತುತ್ತೀಯಾ, ನೀನು ಫ್ಯಾಕ್ಟರಿಗೆ ಬಂದರೆ ಎಲ್ಲರೂ ನಿನ್ನನ್ನು ಮೇಡಂ ಅಂತಾ ಕರೀತಾರೆ, ಅದಕ್ಕೆ ನೀನು ಫ್ಯಾಕ್ಟರಿಗೆ ಬರಬೇಡ ಎಂದು ಹೀಯಾಳಿಸುತ್ತಿದ್ದರು. ನನ್ನ ಮಗನಿಗೆ ವಿಚ್ಛೇದನ ಕೊಟ್ಟು ಹೋಗುವಂತೆ ಮಾವ ಹಿಂಸೆ, ಕಿರುಕುಳ ನೀಡುತ್ತಿದ್ದರು. ಇವರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೂ 20 ದಿನಗಳ ಹಿಂದೆ ಐಶ್ವರ್ಯ ತವರು ಮನೆಗೆ ಬಂದು ನೆಲೆಸಿದ್ದಳು. ಅ.26ರಂದು ಬೆಡ್ ರೂಂ ನಲ್ಲಿ ಐಶ್ವರ್ಯ ಚೂಡಿದಾರದ ವೇಲ್‌ನಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ಪತಿಯ ಕುಟುಂಬಸ್ಥರು ನೀಡಿದ್ದ ಕಿರುಕುಳದ ಕುರಿತು ಎಳೆ-ಎಳೆಯಾಗಿ ಐಶ್ವರ್ಯ ಬರೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳ ಬಂಧಿಸಿದ್ದೇ ರೋಚಕ: ಇತ್ತ ತಮ್ಮ ವಿರುದ್ಧ ಎಫ್ಐಆರ್ ದಾಖಲಾಗಿರುವ ಸಂಗತಿ ತಿಳಿಯುತ್ತಿದ್ದಂತೆ ರಾಜೇಶ್ ಹಾಗೂ ಆತನ ಕುಟುಂಬಸ್ಥರು ತುಮಕೂರಿಗೆ ತೆರಳಿದ್ದರು. ಅಲ್ಲಿಂದ ಗೋವಾಕ್ಕೆ ಹೋಗಿ ರೆಸಾರ್ಟ್‌ವೊಂದರಲ್ಲಿ ತಂಗಿದ್ದರು. ಗೋವಾದ ಕ್ಯಾಸಿನೋದಲ್ಲಿ ಪಾರ್ಟಿ ಮಾಡಿದ್ದರು. ಪೊಲೀಸರಿಗೆ ಸುಳಿವು ಸಿಗದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಇತ್ತ ಕಾರ್ಯಾಚರಣೆಗೆ ಇಳಿದಿದ್ದ ಖಾಕಿ ಸಿಡಿಆರ್ ಮೂಲಕ ಆರೋಪಿಗಳ ಮೊಬೈಲ್‌ನ ಜಾಡು ಹಿಡಿದಾಗ ಗೋವಾದಲ್ಲಿರುವ ಸುಳಿವು ಸಿಕ್ಕಿತ್ತು.
ಬೆಂಗಳೂರಿನಿಂದ ಪೊಲೀಸರ ತಂಡ ಗೋವಾಕ್ಕೆ ತೆರಳಿ ಹುಡುಕಾಟ ನಡೆಸಿತ್ತು. ಈ ವಿಚಾರ ತಿಳಿದ ಕೂಡಲೇ ಆರೋಪಿಗಳು ಗೋವಾದಿಂದ ಮುಂಬೈಗೆ ತೆರಳಿದ್ದರು. ಈ ಸಂಗತಿ ಪೊಲೀಸರಿಗೆ ಗೊತ್ತಾಗಿ ವಿಮಾನದಲ್ಲಿ ಮುಂಬೈಗೆ ತೆರಳಿ ಆರೋಪಿಗಳನ್ನು ಗುರುವಾರ ಪತ್ತೆಹಚ್ಚಿದೆ. ಅದೇ ದಿನ ಬೆಂಗಳೂರಿಗೆ ಕರೆ ತಂದಿದ್ದಾರೆ. ಇನ್ನೂ ಐವರು ತಲೆಮರೆಸಿಕೊಂಡಿದ್ದಾರೆ. ಯುಎಸ್‌ನಲ್ಲಿರುವ ಶಾಲಿನಿ, ಓಂಪ್ರಕಾಶ್ ಎಂಬುವವರಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಡಿಜಿ-ಐಜಿಪಿ ಗಮನಕ್ಕೆ ತಂದು ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಚಿಂತಿಸಲಾಗಿದೆ.