ಬೆಂಗಳೂರು: ಪ್ರಿಯಕರನೇ ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಲೆಗೈದು, ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿ ಪರಾರಿಯಾಗಿರುವ ಘಟನೆ ಜೀವನ್ ಭೀಮಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಆಕಾಂಕ್ಷಾ (23) ಕೊಲೆಯಾದವರು.
ಕೃತ್ಯ ಎಸಗಿದ ಆಕೆಯ ಪ್ರಿಯಕರ, ದೆಹಲಿ ಮೂಲದ ಅರ್ಪಿತ್ ಗುರಿಜಾಲ (28) ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಆರೋಪಿ ಅರ್ಪಿತ್ ಎಂಬಿಎ ವ್ಯಾಸಂಗ ಮಾಡಿದ್ದು, ಆಕಾಂಕ್ಷಾ ಬಿ.ಕಾಂ ಪದವೀಧರೆ. ಎರಡು ವರ್ಷಗಳ ಹಿಂದೆ ಇಬ್ಬರು ಬೆಂಗಳೂರಿಗೆ ಬಂದಿದ್ದು, ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರು ಪರಸ್ಪರ ಪರಿಚಯವಾಗಿದ್ದು, ಕೆಲ ದಿನಗಳ ಬಳಿಕ ಪ್ರೇಮಾಂಕುರವಾಗಿದೆ. ಆ ಬಳಿಕ ಇಬ್ಬರು ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಅರ್ಪಿತ್‌ಗೆ ಹೈದರಾಬಾದ್‌ನಲ್ಲಿ ಕೆಲಸ ಸಿಕ್ಕಿದ್ದು, ಅಲ್ಲಿಯೇ ವಾಸವಾಗಿದ್ದಾನೆ. ಇನ್ನು ಆಕಾಂಕ್ಷಾ ಕೋಡಿಹಳ್ಳಿಯ 6ನೇ ಕ್ರಾಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತೆ ಜತೆ ವಾಸವಾಗಿದ್ದರು. ಈ ಮಧ್ಯೆಯೂ ಆಕಾಂಕ್ಷ ಮತ್ತು ಅರ್ಪಿತ್ ನಡುವೆ ಫೋನ್‌ನಲ್ಲಿ ಪದೇ ಪದೆ ಜಗಳ ನಡೆಯುತ್ತಿತ್ತು. ಹೀಗಾಗಿ ಇಬ್ಬರು ಪ್ರತ್ಯೇಕವಾಗಲು ನಿರ್ಧರಿಸಿದ್ದರು. ಆ ಬಳಿಕವೂ ಎರಡ್ಮೂರು ದಿನಗಳಿಗೊಮ್ಮೆ ಇಬ್ಬರು ಕರೆ ಮಾಡಿ ಮಾತನಾಡುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಕೊಂದು, ಆತ್ಮಹತ್ಯೆ ಕಥೆ ಕಟ್ಟಲು ಯತ್ನ: ಹೈದರಾಬಾದ್‌ನಲ್ಲಿದ್ದ ಅರ್ಪಿತ್ ಭಾನುವಾರವೇ ಬೆಂಗಳೂರಿಗೆ ಬಂದಿದ್ದು, ಪ್ರೇಯಸಿ ಮನೆಯಲ್ಲಿಯೇ ವಾಸವಾಗಿದ್ದ. ಸೋಮವಾರ ಇಬ್ಬರು ಒಟ್ಟಿಗೆ ಹೊರಗಡೆ ಸುತ್ತಾಡಿ, ಮಧ್ಯಾಹ್ನ ಮನೆಗೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರ ನಡುವೆ ವೈಯಕ್ತಿಕ ವಿಚಾರಗಳಿಗೆ ಜಗಳ ನಡೆದಿರುವ ಸಾಧ್ಯತೆಯಿದೆ. ಅದರಿಂದ ಆಕ್ರೋಶಗೊಂಡ ಆರೋಪಿ ಆಕಾಂಕ್ಷಳ ಉಸಿರುಗಟ್ಟಿಸಿ ಕೊಲೆ ಗೈದಿದ್ದಾನೆ. ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು, ಆಕೆಯ ವೇಲ್‌ನಿಂದಲೇ ಕುತ್ತಿಗೆ ಬಿಗಿದು ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಬಿಂಬಿಸಲು ಯತ್ನಿಸಿದ್ದಾನೆ. ಸಾಧ್ಯವಾಗದೆ, ನೆಲದ ಮೇಲೆಯೇ ಮೃತದೇಹ ಇಟ್ಟು ಪರಾರಿಯಾಗಿದ್ದಾನೆ. ಸಂಜೆ 7ಗಂಟೆ ಸುಮಾರಿಗೆ ಆಕಾಂಕ್ಷಳ ಸ್ನೇಹಿತೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಜೆ.ಬಿ.ನಗರ ಠಾಣೆ ಪೊಲೀಸರಿಗೆ, ಘಟನಾ ಸ್ಥಳ ಪರಿಶೀನೆ ಮತ್ತು ಪ್ರಾಥಮಿಕ ತನಿಖೆಯಿಂದ ಕೊಲೆ ಎಂಬುದು ಗೊತ್ತಾಗಿದೆ.
ಇನ್ನು ಅಪಾರ್ಟ್‌ಮೆಂಟ್ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮತ್ತು ಆಕಾಂಕ್ಷ ಸ್ನೇಹಿತೆ ಹೇಳಿಕೆ ಆಧರಿಸಿ ತನಿಖೆ ನಡೆಸಿದಾಗ ಅರ್ಪಿತ್ ಕೊಲೆಗೈದಿರುವ ಸಾಧ್ಯತೆ ಇದೆ. ಕೃತ್ಯದ ಬಳಿಕ ಆತ ಗಾಬರಿಗೊಂಡು ಅಪಾರ್ಟ್‌ಮೆಂಟ್‌ನಿಂದ ಹೊರಹೋಗುತ್ತಿರುವ ದೃಶ್ಯ ಸೆರೆಯಾಗಿದ್ದು, ಆತನ ಪತ್ತೆಗಾಗಿ ಒಂದು ತಂಡ ದೆಹಲಿಗೆ ತೆರಳಿದೆ ಎಂದು ಪೊಲೀಸರು ಹೇಳಿದರು.
ಜೆ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.