ಬೆಂಗಳೂರು: ಪುಲಕೇಶಿ ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಅಸ್ಗರ್ ಎಂಬಾತನ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ಪುಲಕೇಶಿನಗರ ನಿವಾಸಿಗಳಾಗದ ಅಮ್ರಿನ್, ನಯಾಜ್ ಸೇರಿ ಐವರನ್ನು ಬಂಧಿಸಲಾಗಿದೆ.
ಅ.20ರಂದು ಪಾಟರಿ ವೃತ್ತದಲ್ಲಿ ಕಾರು ಡಿಕ್ಕಿಯಾಗಿ ಅಸ್ಗರ್ ಮೃತಪಟ್ಟಿದ್ದ. ಆರಂಭದಲ್ಲಿ ಇದೊಂದು ಅಪಘಾತ ಪ್ರಕರಣ ಎಂದು ದಾಖಲಿಸಿಕೊಳ್ಳಲಾಗಿತ್ತು. ಆದರೆ, ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಉದ್ದೇಶಪೂರ್ವಕವಾಗಿ ಅಪಘಾತ ಎಸಗಲಾಗಿದೆ ಎಂಬುದು ಗೊತ್ತಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕೊಲೆಯಾದ ಅಸ್ಗರ್ ಹಾಗೂ ಬಂಧಿತ ಆರೋಪಿಗಳು ಪರಿಚಯಸ್ಥರು. ಅಸ್ಗರ್ ಹಳೆ ಕಾರು ಮಾರಾಟ ವ್ಯವಹಾರ ನಡೆಸುತ್ತಿದ್ದ. ಬಂಧಿತರು ಆತನ ಬಳಿ ಕಾರು ಖರೀದಿಸಿದ್ದರು. ಹೀಗಾಗಿ ಇಬ್ಬರ ನಡುವೆ ಹಣದ ವಿಚಾರಕ್ಕೆ ಗಲಾಟೆ ನಡೆದಿತ್ತು. ಆಗ ಆರೋಪಿಗಳು ಹಲ್ಲೆ ನಡೆಸಿದ್ದರು. ಈ ಸಂಬಂಧ ಅಸ್ಗರ್ ಜೆ.ಸಿ.ನಗರ ಠಾಣೆಗೆ ದೂರು ನೀಡಿದ್ದರು. ದೂರು ವಾಪಸ್ ಪಡೆಯುವಂತೆ ಆರೋಪಿಗಳು ಒತ್ತಡ ಹಾಕುತ್ತಿದ್ದರು. ಅ.20ರಂದು ಅಸ್ಗರ್ ಸ್ನೇಹಿತನನ್ನು ಬೈಕ್‌ನಲ್ಲಿ ಡ್ರಾಪ್ ಮಾಡಲು ಪಾಟರಿ ರಸ್ತೆ ಬಳಿಗೆ ರಾತ್ರಿ ಬಂದಿದ್ದರು. ಆಗ ಸ್ಕಾರ್ಪಿಯೊ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು, ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಅದರಿಂದ ತಪ್ಪಿಸಿಕೊಂಡ ಅಸ್ಗರ್, ಪಕ್ಕದಲ್ಲಿ ಸುಧಾರಿಸಿಕೊಳ್ಳುತ್ತಿದ್ದರು. ಆದರೆ, ಕಾರಿನೊಳಗಿದ್ದ ಆರೋಪಿಗಳು ಮತ್ತೂಮ್ಮೆ ಅಸ್ಗರ್‌ಗೆ ಗುದಿಯಲು ಮುಂದಾಗಿದ್ದಾರೆ. ಆಗ ತಪ್ಪಿಸಿಕೊಳ್ಳಲು ಓಡಿದ ಅಸ್ಗರ್ ಮೇಲೆ ಕಾರು ಹರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದರು. ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.