ಬೆಂಗಳೂರು: ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಜೈಲು ಸೇರುವಂತೆ ಮಾಡಿದ ಪ್ರೇಯಸಿಯ ಸ್ಕೂಟರ್ಗೆ ಬೆಂಕಿ ಹಚ್ಚಿ ಪರಾರಿಯಾದ ಯುವಕನಿಗೆ ಹಲಸೂರು ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹಲಸೂರು ನಿವಾಸಿ ವಿಕ್ರಂ (25) ಆರೋಪಿ.
ವಿಕ್ರಂ ನಗರದ ಬಿಟಿಎಂ ಲೇಔಟ್, ಮಡಿವಾಳ, ಕೊರಮಂಗಲ ಪ್ರದೇಶಗಳಲ್ಲಿ ಡ್ರಗ್ ಪೆಡ್ಲಿಂಗ್ ಮಾಡಿಕೊಂಡಿದ್ದ. ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.
ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದಾಗ ಇತ್ತೀಚೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದ. 8 ತಿಂಗಳುಗಳ ಕಾಲ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಇತ್ತೀಚೆಗೆ ಬಿಡುಗಡೆ ಹೊಂದಿದ್ದ. ಬಿಡುಗಡೆಯಾದ ನಂತರ ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟವರ ಬಗ್ಗೆ ಶೋಧ ನಡೆಸುತ್ತಿದ್ದ. ಆಗ ತಾನು ಪ್ರೀತಿಸುತ್ತಿದ್ದ ಯುವತಿ ಮೇಲೆ ಅನುಮಾನ ಹುಟ್ಟಿತ್ತು. ತಾನು ಪ್ರೀತಿಸುತ್ತಿದ್ದ ಯುವತಿಯೇ ಡ್ರಗ್ ಪೆಡ್ಲಿಂಗ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ಅನುಮಾನಗೊಂಡಿದ್ದ. ಕೆಲ ದಿನಗಳ ಹಿಂದೆ ರಾತ್ರಿ ಹೊತ್ತು ಯುವತಿಯ ಮನೆಯ ಬಳಿ ಬಂದ ಆರೋಪಿ ವಿಕ್ರಂ ಪ್ರೇಯಸಿಯ ಸ್ಕೂಟರ್ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಇತ್ತ ಬೈಕ್ಗೆ ಬೆಂಕಿ ಹಚ್ಚಿ ಪರಾರಿಯಾಗುವ ದೃಶ್ಯ ಗಳು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೃತ್ಯ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.