ಬೆಂಗಳೂರು: ಗಣಪತಿ ಹಬ್ಬದ ವಿಚಾರ ಚರ್ಚಿಸುವ ವೇಳೆ ವೈಯಕ್ತಿಕ ವಿಚಾರಕ್ಕೆ ಯುವಕನೊಬ್ಬ ಆತನ ಸ್ನೇಹಿತನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಹಲಸೂರು ಗೇಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಬ್ಬನ್‌ಪೇಟೆ ನಿವಾಸಿ ಅಜಿತ್ (24) ಚಾಕು ಇರಿತಕ್ಕೊಳಗಾದವ. ಕೃತ್ಯ ಎಸಗಿದ ಆತನ ಸ್ನೇಹಿತ ಸುಮನ್ (24) ಎಂಬಾತನನ್ನು ಬಂಧಿಸಲಾಗಿದೆ.
ಶನಿವಾರ ತಡರಾತ್ರಿ ಕಬ್ಬನ್‌ಪೇಟೆಯ ಮೂರನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಸುಮನ್ ಮತ್ತು ಅಜಿತ್ ಬಾಲ್ಯ ಸ್ನೇಹಿತರಾಗಿದ್ದು, ಅಜಿತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸುಮನ್ ಕಂಠೀರವ ಸ್ಟೇಡಿಯಂನಲ್ಲಿ ಕರಾಟೆ ತರಬೇತಿ ನೀಡುತ್ತಿದ್ದ. ಇಬ್ಬರು ಮಾದಕ ವಸ್ತು ಹಾಗೂ ಮದ್ಯ ವ್ಯಸನಿಯಾಗಿದ್ದಾರೆ. ಗಣಪತಿ ಕೂರಿಸುವ ಸಲುವಾಗಿ ಸುಮನ್, ಧರ್ಮರಾಯ ಸ್ವಾಮಿ ದೇಗುಲದ ಬಳಿ ಇತರೆ ಸ್ನೇಹಿತರ ಬಳಿ ಚರ್ಚಿಸುತ್ತಿದ್ದ. ಅದೇ ವೇಳೆ ಮದ್ಯ ಸೇವಿಸಿ ಬಂದ ಅಜಿತ್, ಸುಮನ್ ಕಡೆ ಗುರಾಯಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೆ, “ಸದ್ಯದಲ್ಲೇ ನಿನಗೆ ಇದೆ ಕಣೋ’ ಎಂದಿದ್ದಾನೆ. ಆಗ ಸುಮನ್, ‘ಈಗ ಬೇಡ, ಬೆಳಗ್ಗೆ ಮಾತಾಡೋಣ ಹೋಗು’ ಎಂದು ಹೇಳಿದ್ದಾನೆ. ಆದರೂ, ಅಜಿತ್ ನಿಂದಿಸುವುದನ್ನು ಮುಂದುವರಿಸಿದ್ದ. ಅದು ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಸುಮನ್, ಚಾಕು ತಂದು ಅಜಿತ್‌ನ ಎದೆ, ಕುತ್ತಿಗೆ, ಬೆನ್ನು ಸೇರಿ ಐದಾರು ಕಡೆಗಳಲ್ಲಿ ಮನ ಬಂದಂತೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಜಿತ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪ್ರಾಣಪಾಯದಿಂದ ಪಾರಾಗಿದ್ದಾನೆ. ಕೃತ್ಯ ಎಸಗಿದ ಸುಮನ್‌ನನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.
ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ, ಹಲಸೂರು ಗೇಟ್ ಉಪವಿಭಾಗದ ಎಸಿಪಿ ಶಿವಾನಂದ ಛಲವಾದಿ ಹಾಗೂ ಹಲಸೂರು ಗೇಟ್ ಠಾಣಾಧಿಕಾರಿ ಹನುಮಂತ ಕೆ.ಭಜಂತ್ರಿ ಹಾಗೂ ತಂಡ ಭೇಟಿ ನೀಡಿ ಪರಿಶೀಲಿಸಿದೆ.