ಬೆಂಗಳೂರು: ಅಡುಗೆ ಕ್ಯಾಟರಿಂಗ್ ಕೆಲಸಗಾರ ನನ್ನು ಕೊಲೆ ಮಾಡಿ ಪೀಣ್ಯದ ಚನ್ನನಾಯಕ ನಪಾಳ್ಯದಲ್ಲಿ ಶವ ಸುಟ್ಟು ಹಾಕಿದ್ದ ಪ್ರಕರಣ ಭೇದಿಸಿರುವ ಪೊಲೀಸರು ಮೂವರನ್ನು ಬಂಧಿ ಸಿದ್ದು, ವಿವಾಹ ವಾರ್ಷಿಕೋತ್ಸವ ಆಚರಿಸಬೇಕಿ ದ್ದವ ಹೆಣವಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹೆಗ್ಗನಹಳ್ಳಿ ನಿವಾಸಿ ಸತೀಶ್, ಪುಟ್ಟ ಹಾಗೂ ದಯಾನಂದ್ ಬಂಧಿತರು.
ತಮಿಳುನಾಡು ಮೂಲದ ಆನಂದ್ ಕೊಲೆಯಾದವ. ಕೊಲೆಯಾದ ಆನಂದ್ 8 ವರ್ಷಗಳಿಂದ ಆರೋಪಿ ಸತೀಶ್ ಬಳಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಐದಾರು ತಿಂಗಳ ಹಿಂದೆ ಆನಂದ್ ಸ್ವಂತ ಅಡುಗೆ ಕೇಟರಿಂಗ್ ವ್ಯವಹಾರ ಆರಂಭಿಸಿದ್ದರು. ಇದರಿಂದ ಅರೋಪಿ ಸತೀಶ್ ನಡೆಸುತ್ತಿದ್ದ ಕೇಟರಿಂಗ್ ವ್ಯವಹಾರಕ್ಕೆ ನಷ್ಟ ಉಂಟಾಗಿತ್ತು. ಆನಂದ್ ಬೆಳೆಯುತ್ತಿರುವುದನ್ನು ಸಹಿಸದ ಸತೀಶ್ 3 ತಿಂಗಳಿಂದ ಆತನನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದ. ತನ್ನ ಜತೆ ಕೆಲಸ ಮಾಡುತ್ತಿದ್ದ ಕೆಲಸಗಾರರಾದ ಪುಟ್ಟ ಹಾಗೂ ದಯಾನಂದ್‌ಗೆ ಕೊಲೆ ಮಾಡಲು ಸಹಕರಿಸುವಂತೆ ಕೇಳಿಕೊಂಡಿದ್ದ. ಕೃತ್ಯ ಎಸಗಲು ಇವರು ಕೈ ಜೋಡಿಸಿದ್ದರು. ಜು.1ರಂದು ಪಾರ್ಟಿ ಮಾಡುವ ನೆಪದಲ್ಲಿ ಚನ್ನರಾಯನಪಾಳ್ಯಕ್ಕೆ ಆನಂದ್‌ನನ್ನು ಆರೋಪಿಗಳು ಕರೆಸಿಕೊಂಡಿದ್ದರು. ಪಾರ್ಟಿ ಮಾಡಿದ ಬಳಿಕ ಸಂಚಿನಂತೆ ಆನಂದ್‌ಗೆ ಕಂಠಪೂರ್ತಿ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಬಳಿಕ ಗುರುತು ಸಿಗದಿರಲೆಂದು ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿ ಪರಾರಿಯಾಗಿದ್ದರು.
ಶವ ಪತ್ತೆ: ಚನ್ನನಾಯಕನಪಾಳ್ಯದ ನಿರ್ಜನ ಪ್ರದೇಶದಲ್ಲಿ ಜು.2 ರಂದು ಆನಂದ್ ಶವ ಪತ್ತೆಯಾಗಿತ್ತು. ಆದರೆ, ಆನಂದ್ ಗುರುತು ಪತ್ತೆಯಾಗಿರಲಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಈ ತಂಡವು ಪೊಲೀಸ್ ಪ್ರಕಟಣೆ ಹೊರಡಿಸಿತ್ತು. ಜುಲೈ 2 ರಂದು ಮದುವೆ ವಾರ್ಷಿಕೋತ್ಸವ ಹಿನ್ನೆಲೆ ತಮಿಳುನಾಡಿನಲ್ಲಿ ನೆಲೆಸಿದ್ದ ಪತ್ನಿಯನ್ನು ಆನಂದ್ ಬೆಂಗಳೂರಿಗೆ ಬರಲು ಹೇಳಿದ್ದ. ಅದರಂತೆ ಜು.2ರಂದು ವಿವಾಹ ವಾರ್ಷಿಕೋತ್ಸವ ಆಚರಿಸಲು ತಮಿಳುನಾಡಿನಿಂದ ಬೆಂಗಳೂರಿನ ಸೆಟಲೈಟ್ ಬಸ್ ನಿಲ್ದಾಣಕ್ಕೆ ಆನಂದ್‌ನ ಪತ್ನಿ ಆಗಮಿಸಿದ್ದರು. ಪತಿಗೆ ಹಲವು ಬಾರಿ ಕರೆ ಮಾಡಿ ದರೂ ಕರೆ ಸ್ವೀಕರಿಸದಿದ್ದಾಗ ರಾಜಗೋಪಾಲನಗರ ಪೊಲೀಸ್ ಠಾಣೆಗೆ ತೆರಳಿ ಪತಿ ನಾಪತ್ತೆ ಯಾಗಿರುವುದಾಗಿ ತಿಳಿಸಿದ್ದರು.
ಇತ್ತ ಪೀಣ್ಯ ಪೊಲೀಸರು ಕೃತ್ಯ ನಡೆದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆನಂದ್ ಸುಳಿವು ಸಿಕ್ಕಿತ್ತು. ಕೂಡಲೇ ಆತನ ಪತ್ನಿಗೆ ಶವ ತೋರಿಸಿದಾಗ ಇದು ತನ್ನ ಪತಿಯ ಶವವೆಂದು ದೃಢಪಡಿಸಿದ್ದರು. ಕೃತ್ಯ ನಡೆದ ಸ್ಥಳದ ಆಸು-ಪಾಸಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಹಾಗೂ ಇತರ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆರೋಪಿ ಸತೀಶ್ ಹಾಸನದಲ್ಲಿ ತಲೆಮರೆಸಿಕೊಂಡಿರುವುದು ಪತ್ತೆಯಾಗಿತ್ತು. ಹಾಸನಕ್ಕೆ ತೆರಳಿದ ಪೀಣ್ಯ ಪೊಲೀಸರ ತಂಡ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ನಗರಕ್ಕೆ ಕರೆ ತಂದಿದ್ದರು. ಸಮಾರಂಭಗಳಲ್ಲಿ ಅಡುಗೆ ಮಾಡುವ ಕೆಲಸದ ಗುತ್ತಿಗೆ ಪಡೆಯುವ ವಿಚಾರದಲ್ಲಿ ಆನಂದ್‌ಗೂ ಆರೋಪಿಗಳ ನಡುವೆ ಜಗಳವಾಗಿತ್ತು. ಆತನಿಂದ ತಮ್ಮ ವ್ಯವಹಾರಕ್ಕೆ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.