Advertisement
ಆದರೆ, ನಗರ ಎದುರಿಸುತ್ತಿರುವ ಹತ್ತುಹಲವು ಸಮಸ್ಯೆಗಳಲ್ಲಿ ಯಾವುದು ಆದ್ಯತೆ ಆಗಿರಬೇಕು ಎಂದು ನಿರ್ಧರಿಸುವುದು ಕೂಡ ಸವಾಲಿನ ಕೆಲಸ. ಅದೇನೇ ಇರಲಿ, ಈ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆಯೇ? ಪ್ರತಿ ವರ್ಷ ಅದೇ ರಸ್ತೆಗಳು ಹೆಚ್ಚಿನ ಅನುದಾನ ಬಾಚಿಕೊಳ್ಳುತ್ತವೆ ಯಾಕೆ? ಈ ಸಲದ ಅನುದಾನಗಳ ಬೇಡಿಕೆಯಲ್ಲಿ ಸಾರ್ವಜನಿಕ ಹಿತದೃಷ್ಟಿ ಹೆಚ್ಚಿದೆಯೋ ಅಥವಾ ಗುತ್ತಿಗೆದಾರ ಆಧಾರಿತವಾಗಿದೆಯೋ? ಇಂತಹ ಹಲವು ಪ್ರಶ್ನೆಗಳು ಜನರಲ್ಲಿ ಮೂಡಿವೆ. ಅವುಗಳಿಗೆ ಉತ್ತರ ಹುಡುಕುವ ಪ್ರಯತ್ನ ಈ ಬಾರಿಯ ಸುದ್ದಿ ಸುತ್ತಾಟ….
ಹೌದು, ಮಾರ್ಚ್ ಮೊದಲ ವಾರದಲ್ಲಿ ಮಂಡನೆ ಆಗಲಿರುವ ರಾಜ್ಯ ಬಜೆಟ್‌ನಲ್ಲಿ ನಗರದ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳು ಎಂದಿನಂತೆ ಸಿಂಹಪಾಲು ನೀಡುವಂತೆ ಕೇಳಿವೆ. ಒಟ್ಟಾರೆ ಕೇಳಿರುವ ಅನುದಾನದಲ್ಲಿ ಪಾಲಿಕೆಯಿಂದಲೇ ವಿವಿಧ ಯೋಜನೆಗಳಿಗಾಗಿ ಶೇ. 60ರಷ್ಟು ಅನುದಾನದ ಬೇಡಿಕೆ ಬಂದಿದೆ. ಆದರೆ, ಆ ಪ್ರಸ್ತಾವಿತ ಯೋಜನೆಗಳು ಸಾರ್ವಜನಿಕ ದೃಷ್ಟಿಕೋನಕ್ಕಿಂತ ಹೆಚ್ಚಾಗಿ ಗುತ್ತಿಗೆದಾರ ಆಧಾರಿತ ಕೆಲಸಗಳೇ ಆಗಿವೆ.
Related Articles
Advertisement
ರಸ್ತೆ ವಿಸ್ತರಣೆ, ಪುನಃಶ್ಚೇತನ, ಎತ್ತರಿಸಿದ ಮಾರ್ಗ, ಗ್ರೇಡ್ ಸಪರೇಟರ್‌ಗಳು, ವೈಟ್‌ಟಾಪಿಂಗ್‌ನಂತಹ ಮೇಲ್ನೋಟಕ್ಕೆ ಎದ್ದುಕಾಣುವ ಕಾಮಗಾರಿಗಳ ಪಟ್ಟಿಯೇ ದೊಡ್ಡದಿದೆ. ಆದರೆ, ಶಿಕ್ಷಣ, ಆರೋಗ್ಯ, ಸಂಚಾರದಟ್ಟಣೆ, ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಸಾರ್ವಜನಿಕರಿಗೆ ನೇರವಾಗಿ ಸಂಬಂಧಿಸಿದ ಪ್ರಮುಖ ಸಮಸ್ಯೆಗಳು ನಾಮಕೆವಾಸ್ತೆ ಕಾಣಿಸಿಕೊಂಡಿವೆ ಎನ್ನಲಾಗಿದೆ. ಆದರೆ, ಇದೆಲ್ಲವನ್ನೂ ಅಳೆದು-ತೂಗಿ ಅಂತಿಮಗೊಳಿಸಿ, ಯಾವುದಕ್ಕೆ ಎಷ್ಟು ನೀಡಬೇಕು ಎಂಬುದನ್ನು ನಂತರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಲಿದೆ.
ಕಳೆದ ಬಾರಿಯ ಬಜೆಟ್‌ನಲ್ಲಿ ಕೂಡ ಇದೇ “ರಸ್ತೆ ಅಭಿವೃದ್ಧಿ’ ಅತಿ ಹೆಚ್ಚು ಅನುದಾನ ಗಿಟ್ಟಿಸಿಕೊಂಡಿದ್ದವು. ಪಾಲಿಕೆಗೆ ಹಂಚಿಕೆಯಾದ ಒಟ್ಟಾರೆ 8,015 ಕೋಟಿ ರೂ.ಗಳಲ್ಲಿ 4,172 ಕೋಟಿ ರೂ. ವೈಟ್ ಟಾಪಿಂಗ್, ರಸ್ತೆಗಳ ಅಭಿವೃದ್ಧಿ, ಗ್ರೇಡ್ ಸಪರೇಟರ್ ನಿರ್ಮಾಣ, ಪರ್ಯಾಯ ರಸ್ತೆಗಳ ಅಭಿವೃದ್ಧಿ ಮತ್ತಿತರ ಕಾರ್ಯಗಳಿಗೆ ನೀಡಲಾಗಿತ್ತು. ಈ ಸಲ ಅನುದಾನ ಏರಿಕೆಯಾಗಿದೆ; ಪ್ರಸ್ತಾವಿತ ಕಾಮಗಾರಿಗಳು ಮಾತ್ರ ಹೆಚ್ಚು-ಕಡಿಮೆ ಅದೇ “ಅಭಿವೃದ್ಧಿ’ ಮಂತ್ರ ಪಠಿಸುತ್ತಿವೆ.
“ಒಬ್ಬ ಸಂಸಾರಸ್ಥನ ತಿಂಗಳ ಸಂಬಳ ಕೈಸೇರಿದಾಗ ಆತ ಮಾಡುವ ಮೊದಲ ಕೆಲಸ ಊಟ, ವಸತಿ ಮತ್ತಿತರ ಅಗತ್ಯತೆಗಳಿಗೆ ಆ ಹಣ ಹಂಚಿಕೆ ಮಾಡುತ್ತಾನೆ. ಅದರಲ್ಲಿ ಉಳಿದರೆ, ಸಿನಿಮಾ ಮತ್ತಿತರ ಮನರಂಜನೆಯತ್ತ ಮುಖಮಾಡುತ್ತಾನೆ. ಆದರೆ, ಇಲ್ಲಿ ಮೊದಲೇ ಸಿನಿಮಾಗೆ ಹೋಗುವ ಉತ್ಸುಕತೆ ಕಾಣುತ್ತಿದೆ. ರೈಲ್ವೆ ಮೇಲ್ಸೇತುವೆ ಮತ್ತು ರೈಲ್ವೆ ಕೆಳಸೇತುವೆ, ಕೆಲವು ಗ್ರೇಡ್‌ಸಪರೇಟರ್‌ಗಳು ಅಗತ್ಯ ಇವೆ. ಅವುಗಳಿಗೆ ಒತ್ತು ನೀಡಿರುವುದು ಒಪ್ಪಿತ. ಇನ್ನು ಕೆಲವು ರಸ್ತೆ ಅಭಿವೃದ್ಧಿಯನ್ನು ಅನಗತ್ಯವಾಗಿ ಪ್ರಸ್ತಾಪಿಸಲಾಗಿದೆ. ಅದು ಸರಿ ಅಲ್ಲ’ ಎಂದು ಹೆಸರು ಹೇಳಲಿಚ್ಛಿಸದ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಬಿಡಿಗಾಸೂ ಬಳಸದ ಬಿಡಿಎ: ಇನ್ನು 2019-20ನೇ ಸಾಲಿನ ಪರಿಷ್ಕೃತ ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಡಿದ ಅನುದಾನದಲ್ಲಿ ಶೇ.70ರಷ್ಟು ವೆಚ್ಚವಾಗಿದ್ದು, ಶೇ.30ರಷ್ಟು ಖರ್ಚಾಗಿಲ್ಲ. ಪರಿಷ್ಕೃತ ಆಯವ್ಯಯದಲ್ಲಿ ಬಿಬಿಎಂಪಿಗೆ 1,580.34 ಕೋಟಿ ರೂ. ಹಂಚಿಕೆಯಾಗಿದ್ದು, ಅದರಲ್ಲಿ ಡಿಸೆಂಬರ್ ಅಂತ್ಯಕ್ಕೆ 1,019.97 ಕೋಟಿ ರೂ. ಅಂದರೆ, ಸುಮಾರು ಶೇ.64ರಷ್ಟು ಖರ್ಚಾಗಿದೆ. ಉಳಿದಂತೆ “ನಮ್ಮ ಮೆಟ್ರೋ’ಗೆ 3,612 ಕೋಟಿಯಲ್ಲಿ 2,825 ಕೋಟಿ ರೂ., ಜಲಮಂಡಳಿ 1,059.39 ಕೋಟಿಯಲ್ಲಿ 726.53 ಕೋಟಿ ಹಾಗೂ ಜಿಲ್ಲಾ, ಗ್ರಾಮಾಂತರ ಯೋಜನಾ ಇಲಾಖೆಗೆ ನೀಡಿದ 24.23 ಕೋಟಿಯಲ್ಲಿ 15.67 ಕೋಟಿ ವೆಚ್ಚವಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಂಜೂರಾದ 200 ಕೋಟಿಯನ್ನೂ ಬಳಸಿಲ್ಲ ಎಂದು ಮೂಲಗಳು ತಿಳಿಸಿವೆ.
ನವ ಬೆಂಗಳೂರು: ಬದಲು ನವ ನಗರೋತ್ಥಾನ 2019-20ನೇ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ “ಮುಖ್ಯಮಂತ್ರಿಗಳ ನವ ಬೆಂಗಳೂರು’ ಯೋಜನೆ ಅಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ನಂತರದಲ್ಲಿ ಅದನ್ನು “ಮುಖ್ಯಮಂತ್ರಿಗಳ ನವ ನಗರೋತ್ಥಾನ’ ಎಂದು ಬದಲಿಸಿ, ಕಾಮಗಾರಿಗಳಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಯಿತು.
ಯೋಜನೆಗೆ 500; ಉಪಯೋಜನೆಗೆ 2,500!: “ಮೂಗಿಗಿಂತ ಮೂಗುತಿ ಭಾರ’ ಎಂಬಂತಿದೆ ಬಿಬಿಎಂಪಿ ಮತ್ತು ಜಲಮಂಡಳಿ ಯೋಜನೆಯ ಲೆಕ್ಕಾಚಾರ. ಜಲಮಂಡಳಿಯು ಮುಂದುವರಿದ ಯೋಜನೆಗಳ ಪಟ್ಟಿಯಲ್ಲಿ 2020-21ನೇ ಸಾಲಿನ ಬಜೆಟ್‌ನಲ್ಲಿ ಬಿಬಿಎಂಪಿಗೆ ಸೇರಿದ 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ, ಒಳಚರಂಡಿ ಸಂಪರ್ಕ ವ್ಯವಸ್ಥೆಗಾಗಿ ಸಾಲ ಒದಗಿಸುವುದು ಸೇರಿ ಸುಮಾರು 500 ಕೋಟಿ ರೂ.ಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಸಂಪರ್ಕಕ್ಕಾಗಿ ಕತ್ತರಿಸಲಾಗುವ ರಸ್ತೆ ಪುನಃಶ್ಚೇತನಕ್ಕಾಗಿ ಬಿಬಿಎಂಪಿ 2,500 ಕೋಟಿ ರೂ. ಕೇಳಿದೆ. ಇದು ಇಲಾಖೆ ಅಧಿಕಾರಿಗಳ ಹುಬ್ಬೇರಿಸುವಂತೆ ಮಾಡಿದೆ.
ಯಾವ್ಯಾವುದು ಎಷ್ಟು ಬೇಡಿಕೆ? (ಕೋಟಿ ರೂ.ಗಳಲ್ಲಿ)-ಬಿಬಿಎಂಪಿ- 16,542.62
-ಬಿಎಂಆರ್‌ಸಿಎಲ್- 3,436
-ಜಲಮಂಡಳಿ- 1,300
-ಬಿಡಿಎ- 4,392 ಪ್ರಸ್ತಾವಿತ ಹೊಸ ಯೋಜನೆಗಳು?
-ಶುಭ್ರ ಬೆಂಗಳೂರು
-ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ ಇತರೆ ಯೋಜನೆಗಳು
-ಹೆಸರಘಟ್ಟಕ್ಕೆ ಒಳಚರಂಡಿ ವ್ಯವಸ್ಥೆ, ತ್ಯಾಜ್ಯನೀರು ಶುದ್ಧೀಕರಣ ಘಟಕ
-ಟಿ.ಜಿ. ಹಳ್ಳಿ ಜಲಾಶಯ ಪುನಃಶ್ಚೇತನ
-ಹೆಬ್ಬಾಳದಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕ ಪಾಲಿಕೆ ಪ್ರದರ್ಶನ ನೀರಸ: ನಗರಾಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ 2014-15ರಿಂದ 2017-18ರವರೆಗೆ ಬಿಬಿಎಂಪಿ, ಜಲಮಂಡಳಿ ಮತ್ತು ಬಿಎಂಆರ್‌ಸಿ ಸೇರಿ ಪ್ರಮುಖ ಮೂರು ಸಂಸ್ಥೆಗಳಿಗೆ ವಿವಿಧ ಯೋಜನೆಗಳಿಗಾಗಿ ರಾಜ್ಯ ಬಜೆಟ್‌ನಲ್ಲಿ 16,392 ಕೋಟಿ ರೂ. ಮೀಸಲಿಟ್ಟಿದ್ದು, ಸುಮಾರು 14 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಖರ್ಚಾಗಿದ್ದು 13 ಸಾವಿರ ಕೋಟಿ ರೂ. ಅದರ ವಿವರ ಹೀಗಿದೆ. ಇಲ್ಲಿ ಪಾಲಿಕೆ ಪ್ರದರ್ಶನ ನೀರಸವಾಗಿದೆ. ಸಂಸ್ಥೆ ಹಂಚಿಕೆ ಬಿಡುಗಡೆ ಖರ್ಚು (ಈ ಹಿಂದೆ ಖರ್ಚಾಗದೆ ಉಳಿದದ್ದೂ ಸೇರಿ. ಕೋಟಿ ರೂ.ಗಳಲ್ಲಿ)
ಬಿಬಿಎಂಪಿ 8,869 7,648 5,078
ಜಲಮಂಡಳಿ 1,576 730.14 2,140.47
ಬಿಎಂಆರ್‌ಸಿ 5,947.33 5,656.48 6,537.45
ಒಟ್ಟಾರೆ 16,392.33 14,034.62 13,755.92 ತಜ್ಞರು ಹೇಳುವುದೇನು?
ಮೂಲಸೌಕರ್ಯಗಳೆಂದರೆ ಬರೀ ರಸ್ತೆ ಅಭಿವೃದ್ಧಿ, ಗ್ರೇಡ್ ಸಪರೇಟರ್‌ಗಳಲ್ಲ. ಸಮಗ್ರ ದೃಷ್ಟಿಕೋನ ಗಳನ್ನು ಒಳಗೊಂಡ ಸಾರ್ವಜನಿಕ ಸ್ನೇಹಿ ವ್ಯವಸ್ಥೆಯನ್ನು ಯೋಜನೆಗಳು ಒಳಗೊಂಡಿರಬೇಕು. ಬಿಎಂಆರ್‌ಸಿಎಲ್, ಬಿಎಂಟಿಸಿ, ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಇವೆಲ್ಲವೂ ಸೇರಿ ನಗರಕ್ಕೆ ಒಂದು ವೇದಿಕೆ ಅಡಿ ಬಂದು ಸಮರ್ಪಕ ಯೋಜನೆ ರೂಪಿಸಬೇಕು. ಆದರೆ, ಈಗ ಒಬ್ಬರಿಗೊಬ್ಬರು ಸಂಬಂಧ ಇಲ್ಲದಂತೆ ಪ್ರಸ್ತಾವನೆ ಸಲ್ಲಿಸುತ್ತಾರೆ. ಅದಕ್ಕೆ ಅನುದಾನ ಹಂಚಿಕೆಯೂ ಆಗುತ್ತದೆ. ಆಗ, ಸಮಸ್ಯೆಗಳೂ ಹಾಗೇ ಮುಂದುವರಿಯುತ್ತವೆ.
-ನರೇಶ್ ನರಸಿಂಹನ್, ವಾಸ್ತುಶಿಲ್ಪಿ ರಾಜ್ಯ ಬಜೆಟ್‌ನಲ್ಲಿ ರಾಜಧಾನಿಗೆ ಹೆಚ್ಚು ಅನುದಾನ ಮೀಸಲಿಡಲಾಗುತ್ತದೆ. ಇದಕ್ಕೆ ಪೂರಕವಾಗಿ ಪಾಲಿಕೆ ಯೋಜನೆ ರೂಪಿಸಿಕೊಳ್ಳಬೇಕು. ಜಲಮಂಡಳಿ, ಬಿಡಿಎ, ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಗಳಲ್ಲಿ ಮುಖ್ಯವಾಗಿ ತಜ್ಞರನ್ನು ನೇಮಿಸಬೇಕು. ಆಗ ಮಾತ್ರ ಯೋಜನಾಬದ್ಧವಾದ ಅಭಿವೃದ್ಧಿಯಾಗಲಿದೆ.ಅಲ್ಲದೆ, ಈ ಇಲಾಖೆಗಳಲ್ಲಿ ಆಗುತ್ತಿರುವ ಸೋರಿಕೆಯನ್ನು ಕಡಿಮೆ ಮಾಡಬೇಕು. ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುವುದು ಮುಖ್ಯ.
-ರವೀಂದ್ರ, ನಗರಾಭಿವೃದ್ಧಿ ತಜ್ಞ ಕೇಂದ್ರ ಸರ್ಕಾರದಿಂದ ಅನುದಾನ ಕಡಿತವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ.ಹೀಗಾಗಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕನಿಷ್ಠ ಸೌಲಭ್ಯ ಯೋಜನೆಗಳಿಗೆ ಒತ್ತು ನೀಡಬೇಕು. ಈ ಬಾರಿ ಜನಪ್ರಿಯ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಕಡಿಮೆ.
-ರವಿಚಂದ್ರನ್, ನಗರಾಭಿವೃದ್ಧಿ ತಜ್ಞ ಜನ ನಿರೀಕ್ಷೆ ಏನು?
ರಸ್ತೆ ಗುಂಡಿ ಹಾಗೂ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಬೇಕು. ಹಾಗಂತ, ರಸ್ತೆಗೆ ದುಡ್ಡು ಸುರಿಯುವುದು ಆಗಬಾರದು. ರಸ್ತೆಗಳ ಮಾಹಿತಿ ಪಾಲಿಕೆ ಬಳಿ ಇದೆ. ಅದರ ವೈಜ್ಞಾನಿಕ ಸಮೀಕ್ಷೆ ನಡೆಸಿ, ಎಲ್ಲೆಲ್ಲಿ ಏನೇನು ಆಗಬೇಕಾಗಿದೆ ಎಂಬುದರ ಸ್ಪಷ್ಟ ಚಿತ್ರಣ ಪಡೆಯಬೇಕು. ಅದನ್ನು ಆಧರಿಸಿ ಅನುದಾನ ಕೇಳಬೇಕು.
-ನಟರಾಜ್, ಹೋಟೆಲ್ ಉದ್ಯಮಿ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾರಿಗೆ ಸೌಲಭ್ಯ ಮತ್ತಷ್ಟು ಸುಧಾರಿಸಬೇಕು. ಸಂಚಾರದಟ್ಟಣೆ ನಿಯಂತ್ರಣಕ್ಕೆ ಪೂರಕವಾದ ಯೋಜನೆಗಳಿಗೆ ಹೆಚ್ಚು ಒತ್ತುನೀಡಬೇಕು.
-ಇಂದಿರಾ, ಅಕೌಂಟೆಂಟ್ ಹಲವು ವರ್ಷಗಳ ಹಿಂದೆ ಪಾಲಿಕೆಗೆ ಸೇರ್ಪಡೆಯಾಗಿ ರುವ 110 ಹಳ್ಳಿಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಿಲ್ಲ. ಇಲ್ಲಿ ಕನಿಷ್ಠ ಮಟ್ಟದ ಸೌಕರ್ಯ ವನ್ನಾದರೂ ನೀಡಬೇಕು.
-ಸುಭಾಷ್, ಇಸ್ರೋ ನಿವೃತ್ತ ನೌಕರ ಸೋಲಾರ್ ಶಕ್ತಿ ಬಳಸಿ ಕೊಳ್ಳುವುದು ಹಾಗೂ ಮಾರಾಟ ಮಾಡುವುದಕ್ಕೆ ಸರಳೀ ಕೃತ ಯೋಜನೆ ರೂಪಿಸಬೇಕು. ನವೀಕರಿಸಬಹುದಾದ ಇಂಧನಗಳ ಬಳಕೆಗೆ ಸಬ್ಸಿಡಿ ಅಥವಾ ಸಾಲದ ಸೌಲಭ್ಯ ನೀಡಬೇಕು.
-ಮುಕುಂದ್, ಸಾಫ್ಟ್ವೇರ್ ಉದ್ಯೋಗಿ * ವಿಜಯಕುಮಾರ್ ಚಂದರಗಿ/ಹಿತೇಶ್ ವೈ