ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಸಂಭವಿಸಿರುವ ಭೀಕರ ನೆರೆಗೆ ಸಂತ್ರಸ್ತರಾಗಿರುವವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಪರಿಹಾರ ಒದಗಿಸಬೇಕು. ನೆರೆ ಹಾಗೂ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೋಮವಾರ ಬೆಂಗಳೂರು ಚಲೋ ಹಮ್ಮಿಕೊಂಡಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ನಗರದ ರೈತ ಸಂಘದ ಜಿಲ್ಲಾ ಕಚೇರಿಯಲ್ಲಿ ಈ ಕುರಿತು ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಉತ್ತರ ಕರ್ನಾಟಕದಲ್ಲಿ ನೆರೆ ಸಂಭವಿಸಿ ಎರಡು ತಿಂಗಳಾದರೂ ಇದುವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಕಿಡಿಕಾರಿದರು.
ಕಾಟಾಚಾರಕ್ಕೆ ಅಧಿವೇಶನ: ನೆರೆಗೆ ತುತ್ತಾಗಿರುವ ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕದ 17 ಜಿಲ್ಲೆಗಳಲ್ಲಿ ಲಕ್ಷಾಂತರ ಜನ ಮನೆ, ಬೆಳೆ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಕನಿಷ್ಠ ಸರ್ಕಾರ ಇದುವರೆಗೂ ಅವರಿಗೆ ಸೂಕ್ತ ಸೂರು ಕಲ್ಪಿಸುವ ಕೆಲಸ ಮಾಡಿಲ್ಲ. ರಸ್ತೆಗಳು ಸಂಪೂರ್ಣ ಹಾಳಾಗಿದೆ. ಕಾಳಜಿ ಕೇಂದ್ರಗಳು ಅವ್ಯವಸ್ಥೆಯಿಂದ ಕೂಡಿವೆ. ಪುನರ್ವಸತಿ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ಸರ್ಕಾರ ಕಾಟಾಚಾರಕ್ಕೆ ಮೂರು ದಿನಗಳ ಅಧಿವೇಶನ ಕರೆದಿದೆ ಎಂದು ದೂರಿದರು.
ವೈಜ್ಞಾನಿಕ ನೀತಿ ರೂಪಿಸಿ: ರಾಜ್ಯ ರೈತ ಸಂಘದ ವಿಭಾಗೀಯ ರಾಜ್ಯ ಉಪಾಧ್ಯಕ್ಷ ಯಾಕೂಬ್ ಷರೀಫ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನೀತಿಗಳು ಸಂಪೂರ್ಣ ಅವೈಜ್ಞಾನಿಕವಾಗಿ ಕೂಡಿವೆ. ಈ ಎರಡು ಯೋಜನೆಗಳಲ್ಲಿ ಅಲ್ಪ ಪರಿಹಾರ ಮಾತ್ರ ಸಿಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ನೆರೆ ಹಾಗೂ ಬರಕ್ಕೆ ಸಂಬಂಧಿಸಿದ್ದಂತೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ನೀತಿಗಳನ್ನು ವೈಜ್ಞಾನಿಕವಾಗಿ ರೂಪಿಸಬೇಕೆಂದು ಆಗ್ರಹಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನುಸೂಯಮ್ಮ, ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶಿ ಜಿ.ಎಸ್.ವೆಂಕಟಸ್ವಾಮಿ, ಪದಾಧಿಕಾರಿಗಳಾದ ವೆಂಕಟರೋಣಪ್ಪ, ವೆಂಕಟೇಶ್, ಗಂಗಾಧರ್, ತ್ರಿವೇಣಿ, ಶಿವಕುಮಾರ್, ಚಿನ್ನರೆಡ್ಡಪ್ಪ ಇದ್ದರು.
ರೈತ ಸಂಘದ ಹಕ್ಕೋತ್ತಾಯಗಳು
* ಸಂತ್ರಸ್ತರಿಗೆ ವಸತಿ ಸೌಕರ್ಯಕ್ಕೆ 10 ಲಕ್ಷ ನೀಡಬೇಕು.
* ರೈತರ ಸಾಲ ಮನ್ನಾ ಜೊತೆಗೆ ಹೊಸ ಸಾಲ ವಿತರಿಸಬೇಕು.
* ಕೇಂದ್ರ ಸರ್ಕಾರ ನೆರೆ ಪರಿಹಾರಕ್ಕೆ 30 ಸಾವಿರ ಕೋಟಿ ನೀಡಬೇಕು.
* ಬೆಳೆ ವಿಮಾ ಬಾಕಿ ಹಣ ಕೂಡಲೇ ರೈತರಿಗೆ ನೀಡಬೇಕು.
* ಅರ್ಜಿ ಸಲ್ಲಿಸಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು.