Advertisement

ಫೆ.24-25 ರಂದು ‘ಬೆಂಗಳೂರು ಚಲೋ’

10:25 AM Jan 23, 2019 | Team Udayavani |

ಹಾವೇರಿ: ಸಂವಿಧಾನಬದ್ಧವಾಗಿರುವ ರಾಜ್ಯದ ವೀರಶೈವ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಫೆ. 24, 25 ರಂದು ‘ಬೆಂಗಳೂರು ಚಲೋ’ ಪ್ರತಿಭಟನೆ ಮಾಡಲಾಗುವುದು ಎಂದು ಅಖೀಲ ಕರ್ನಾಟಕ ಬೇಡಜಂಗಮ ಸಂಘದ ರಾಜ್ಯಾಧ್ಯಕ್ಷ ವಿರೇಂದ್ರ ಪಾಟೀಲ ತಿಳಿಸಿದರು.

Advertisement

ನಗರದ ಶ್ರೀ ರೇಣುಕಾಚಾರ್ಯ ಮಂದಿರದಲ್ಲಿ ಆಯೋಜಿಸಿದ್ದ ‘ಬೆಂಗಳೂರು ಚಲೋ’ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿರುವ ವೀರಶೈವ ಜಂಗಮರಿಗೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಬೇಡ ಜಂಗಮ ಪ್ರಮಾಣ ಪತ್ರ ನೀಡಲಾಗಿದೆ. ನಂತರದಲ್ಲಿ ಸಂವಿಧಾನದಲ್ಲಿಯೂ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲಾಗಿದ್ದರೂ ಪ್ರಸಕ್ತ ಪ್ರಮಾಣಪತ್ರವನ್ನು ಸರ್ಕಾರ ನೀಡಲು ಮುಂದಾಗುತ್ತಿಲ್ಲ ಆದ್ದರಿಂದ ಈ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.

ಸಂವಿಧಾನದ ಅನುಸೂಚಿತ ಜಾತಿ ಆದೇಶ 1950ರಲ್ಲಿ ಜಂಗಮರು ಕಾಯಕ ಜೀವಿಗಳು, ಜೀವನೋಪಾಯಕ್ಕಾಗಿ ಬೇಡುವವರಾಗಿದ್ದರಿಂದ ‘ಜಂಗಮ’ ಪದ ತಗೆದು ‘ಬೇಡ ಜಂಗಮ’ ಪದ ಸೇರಿಸಿದ್ದಾರೆ. ವೀರಶೈವ ಜಂಗಮರೇ ಬೇಡ ಜಂಗಮರೆನ್ನುವುದಕ್ಕೆ ದಾಖಲೆಗಳಿವೆ. ಗೀತಾ ಕುಲಕರ್ಣಿ ಹಾಗೂ ರಾಜ್ಯ ಸರ್ಕಾರದ ಮತ್ತಿತರರ ಪ್ರಕರಣದಲ್ಲಿ ರಾಜ್ಯ ಉಚ್ಛ ನ್ಯಾಯಾಲಯ ವೀರಶೈವ ಲಿಂಗಾಯತ ಪಂಥದ ಅನುಯಾಯಿ ಜಂಗಮರೇ ಬೇಡಜಂಗಮರೆಂದು ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದರು.

ಈ ಕುರಿತು ಸರ್ವೋಚ್ಛ ನ್ಯಾಯಾಲಯ, ರಾಜ್ಯ ಉಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ಗೆಜೆಟಿಯರದಲ್ಲಿಯೂ ಸ್ಪಷ್ಟವಾಗಿ ತಿಳಿಸಲಾಗಿದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ತಿದ್ದುಪಡಿ ಅಧಿನಿಯಮ 1976ರಲ್ಲಿ ಹೈದರಾಬಾದ ಕರ್ನಾಟಕಕ್ಕೆ ಸೀಮಿತವಾಗಿದ್ದ ಈ ಸೌಲಭ್ಯದ ಕ್ಷೇತ್ರ ನಿರ್ಬಂಧ ತಗೆದುಹಾಕಿ ಕರ್ನಾಟಕದ್ಯಂತ ವಿಸ್ತರಿಸಿದೆ. ಪರಿಶಿಷ್ಟ ಜಾತಿ ಪಟ್ಟಿಯ ಕ್ರಮ ಸಂಖ್ಯೆ 19ರ ಲ್ಲಿರುವ ಬೇಡ ಜಂಗಮರೇ ಕರ್ನಾಟಕ ರಾಜ್ಯದಲ್ಲಿರುವ ವೀರಶೈವ ಜಂಗಮರು ಎಂದು ತಿಳಿಸಲಾಗಿದೆ. ಆದರೂ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡುತ್ತಿಲ್ಲ. ಆದ್ದರಿಂದ ಸಂವಿಧಾನಬದ್ಧ ಹಕ್ಕನ್ನು ಪಡೆದುಕೊಳ್ಳುವುದಕ್ಕೆ ನಮ್ಮ ಹೊರಾಟ ಇಂದು ಅನಿವಾರ್ಯವಾಗಿದೆ ಎಂದರು.

ಸಂವಿಧಾನದ ಅನುಸೂಚಿತ ಜಾತಿಗಳ ಆದೇಶ 1950ರಲ್ಲಿ ಜಂಗಮರನ್ನು ಬೇಡಜಂಗಮರೆಂದು ಸೇರಿಸಿದ್ದರಿಂದ ಜಂಗಮ ಪದದ ಅಸ್ತಿತ್ವ ಇಲ್ಲವಾಗಿದೆ. ನಮ್ಮ ಸಮಾಜದ ಅಸ್ತಿತ್ವವಿರುವುದೇ ಬೇಡಜಂಗಮ ಎಂದು. ಜಂಗಮ ಸಮಾಜದ ನಿರ್ಲಕ್ಷ ್ಯ, ನಿದ್ರಾವಸ್ಥೆಯಲ್ಲಿ ಇದ್ದುದರಿಂದ ಸಮಾಜದ ಅಸ್ಥಿತ್ವಕ್ಕೆ ಧಕ್ಕೆ ಬಂದಿದೆ. ಬೇಡಜಂಗಮರು ಇಲ್ಲಿಯವರೆಗೂ ಸಂಘಟಿತರಾಗದೇ, ಈ ಕುರಿತು ಸಮರ್ಪಕವಾದ ಹೊರಾಟ ಮಾಡದೇ ಇರುವುದಕ್ಕೆ ಸರ್ಕಾರದ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿದೆ. ಇಂದಿನ ಹೊರಾಟವನ್ನು ಗುರಿ ಮಟ್ಟುವುವವರೆಗೂ ನಿಲ್ಲಿಸುವುದಿಲ್ಲ ಎಂದರು.

Advertisement

ಬೇಡ ಜಂಗಮ ಸಂಗದ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ಕೆಲ ಗ್ರೇಡ್‌-2 ತಹಶೀಲ್ದಾರರು ಬೇಡಜಂಗಮ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ಆದರೆ, ವೀರಶೈವ ಜಂಗಮ ಎನ್ನುವ ಜಾತಿ ಸಂವಿಧಾನದಲ್ಲೇ ಇಲ್ಲದಿರುವಾಗ ಇವರು ಈ ಜಾತಿಯನ್ನು ಉಲ್ಲೇಖೀಸಿ ಪ್ರಮಾಣಪತ್ರವನ್ನು ನೀಡದಿರುವುದು ನಮ್ಮ ಹಕ್ಕನ್ನು ಕಸಿದುಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ಈ ಹಿಂದೆ ಕೂಡಲ ಸಂಗಮ ಮತ್ತು ಕೊಪ್ಪಳದಲ್ಲಿ ಜರುಗಿದ ಸಮಾವೇಶಗಳಲ್ಲಿ ಕೈಗೊಳ್ಳಲಾದ ನಿರ್ಣಯಗಳನ್ನು ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ ತರುವುದಕ್ಕೆ ಮತ್ತು ನಮ್ಮ ಹಕ್ಕೊತ್ತಾಯವನ್ನು ಮಂಡಿಸುವುದಕ್ಕೆ ಬೆಂಗಳೂರು ಚಲೋ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.

ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕೆಲ ಮುಖಂಡರು, ಕೂಡಲಸಂಗಮದಲ್ಲಿ ಮತ್ತು ಕೊಪ್ಪಳದ ಸಮಾವೇಶ ಸಂದರ್ಭದಲ್ಲಿ ಲಕ್ಷಾಂತರ ಬೇಡಜಂಗಮರು ಸೇರಿದ್ದರೂ ಈ ವಿಷಯ ಅಷ್ಟೊಂದು ಪ್ರಚಾರಕ್ಕೆ ಬಾರದ ಹಿನ್ನಲೆಯಲ್ಲಿ ನಮಗೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿತ್ತು. ಈ ಬಾರಿ ರಾಜ್ಯದ ಮೂಲೆ ಮೂಲೆಯ ಜನತೆಗೂ ಇದು ತಲುಪುವಂತೆ ಮಾಡುವುದಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಬಿ.ಎಸ್‌. ಹಿರೇಮಠ, ಎಸ್‌.ಡಿ. ಹಿರೇಮಠ, ಬಿ.ಎಸ್‌.ಮಠದ, ಹಾಸನ ಜಿಲ್ಲಾಧ್ಯಕ್ಷ ತರುಣ ಹಿರೇಮಠ, ಮೃತ್ಯುಂಜಯ ಪಾಟೀಲ, ಸಿ.ಎಸ್‌.ಪಾಲಪ್ಪನವರಮಠ, ಸಿ.ವಿ. ಹಿರೇಮಠ, ಪಿ.ಎಸ್‌.ಚಪ್ಪರದಹಳ್ಳಿಮಠ ಮಾತನಾಡಿದರು.

ಜಿ.ವಿ. ಹಿರೇಮಠ, ಮುತ್ತಯ್ಯ ಕಿತ್ತೂರಮಠ, ಶಿವಕುಮಾರ ಮಠದ, ನಿರಂಜನ ಮರಡೂರಮಠ, ಶಂಭುಲಿಂಗಯ್ಯ ಮಠದ, ಗುರುಪಾದಯ್ಯ ಮಳ್ಳೂರಮಠ ಸೇರಿದಂತೆ ಇನ್ನು ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next