ಬೆಂಗಳೂರು: ನಟ ದರ್ಶನ್ ರಾಜಾತಿಥ್ಯ ಕೇಸ್ ಬಳಿಕವೂ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮೊಬೈಲ್‌ಗಳು ರಿಂಗಣಿಸಿದ್ದು, ಜೈಲಿನಲ್ಲಿರುವ ಆರೋಪಿಗಳು ಕೊಲೆ ಪ್ರಕರಣದಲ್ಲಿ ಸಾಕ್ಷಿ ನುಡಿಯದಂತೆ ಇನ್‌ಸ್ಟಾಗ್ರಾಂ ಮೂಲಕ ಆಟೋ ಚಾಲಕನಿಗೆ ಬೆದರಿಕೆ ಹಾಕಿರುವ ಬಗ್ಗೆ ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿದೆ. ಜೈಲಿನಲ್ಲಿ ಇನ್ನೂ ಮೊಬೈಲ್ ಹಾವಳಿಗೆ ಕಡಿವಾಣ ಬಿದ್ದಿಲ್ಲ ಎಂಬುದಕ್ಕೆ ಈ ಪ್ರಕರಣ ಪುಷ್ಠಿ ನೀಡುವಂತಿದೆ.
ಆಡುಗೋಡಿ ನಿವಾಸಿ ಆರ್ಮುಗಂ ನೀಡಿರುವ ದೂರಿನ ಆಧಾರದಲ್ಲಿ ಸಿಸಿಬಿ ಪೊಲೀಸರು ಸೋಮ ಶೇಖರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಜೈಲಿನಲ್ಲಿರುವ ಕೈದಿ ಸೋಮಶೇಖರ್ ಅಲಿಯಾಸ್ ಸೋಮ ಎಂಬಾತ 2021ರಲ್ಲಿ ಜೋಸೆಫ್ ಅಲಿಯಾಸ್ ಬಬ್ಲಿ ಕೊಲೆ ಪ್ರಕರಣದಲ್ಲಿ ಸಾಕ್ಷಿ ನುಡಿಯದಂತೆ ಆರ್ಮುಗಂ ಅವರಿಗೆ ಇನ್‌ಸ್ಟಾಗ್ರಾಂ ಮೂಲಕ ವಾಯ್ಸ… ಮೇಸೆಜ್ ಮಾಡಿ ಬೆದರಿಕೆವೊಡ್ಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಎಫ್ಐಆರ್‌ನಲ್ಲಿ ಏನಿದೆ?: ತಾನು ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಕಳೆದ 2-3 ವರ್ಷಗಳ ಹಿಂದೆ ಕೋರಮಂಗಲದಲ್ಲಿ ಕೊಲೆಯಾದ ಜೋಸೆಫ್ ಬಾಬು ಅಲಿಯಾಸ್ ಬಬ್ಲಿ ತನಗೆ ಸುಮಾರು ವರ್ಷಗಳಿಂದ ಪರಿಚಯವಿದ್ದ. ಸೆ.22ರಂದು ಬೆಳಗ್ಗೆ 7ಕ್ಕೆ ನನ್ನ ಇನ್‌ಸ್ಟಾಗ್ರಾಂ ಖಾತೆಗೆ ಸಲಗ ಸೋಮ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ 3 ವಾಯ್ಸ… ಮೆಸೇಜ್ ಬಂದಿತ್ತು. ಅದನ್ನು ತೆರೆದು ನೋಡಿದಾಗ ಅದರಲ್ಲಿ ತಮಿಳು ಮತ್ತು ಕನ್ನಡ ಮಿಶ್ರಿತ ಧ್ವನಿ ಸಂದೇಶವಿತ್ತು. “ನಾದ, ಜಾರ್ಜ್‌ಗೆ, ಬಾಬ್ಲಿ ಹೆಂಡತಿಗೆ, ಸುನೀಲ ಆಲಿಯಾಸ್ ಸುಂಡಿಲಿಗೆ ಹೇಳು, ಬಾಬ್ಲಿ ಕೊಲೆ ಕೇಸಿನಲ್ಲಿ ಯಾರೂ ಸಾಕ್ಷಿ ಹೇಳಬಾರದು. ಇಲ್ಲದಿದ್ದರೆ ನಾವು ಜೈಲಿನಲ್ಲಿ ಕೂತೇ ಮಿಲಿóà ಸತೀಶನಿಗೆ ಹೊಡೆಸಿದ್ದು ಗೊತ್ತಲ್ಲಾ. ನಮ್ಮ ಬಾಸ್ ಯಾರು ಗೊತ್ತಲ್ಲಾ. ಶಿವ, ಅವನು ಹೇಳಿದಾಗೆ ಕೇಳದೇ ಇದ್ದರೆ ಜೈಲಿನಲ್ಲಿ ಕೂತುಕೊಂಡು ಎಲ್ಲರನ್ನು ಹೊಡೆಯುತ್ತೇವೆ’ ಎಂಬಿತ್ಯಾದಿಯಾಗಿ ಬೈದು, ಬಾಬಿ ಹೆಂಡತಿ ಬಗ್ಗೆ ಕೆಟ್ಟದಾಗಿ ಮೆಸೇಜ್ ಮಾಡಿರುತ್ತಾನೆ. ಈ ಮೆಸೇಜ್ ಅನ್ನು ನೀನು ಅವರಿಗೆ ತಲುಪಿಸದಿದ್ದರೆ ನಿನಗೂ ಸಹ ಒಂದು ಗತಿ ಕಾಣಿಸುತ್ತೇವೆ ಎಂದು ಮೆಸೇಜ್‌ನಲ್ಲಿ ಇತ್ತು ಎಂದು ಆರ್ಮುಗಂ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಜೈಲಲ್ಲಿ ಮತ್ತೆ ರೌಡಿಗಳ ಮೊಬೈಲ್ ಸಕ್ರಿಯ?:
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇತ್ತೀಚೆಗೆ ನಟ ದರ್ಶನ್ ರಾಜಾತಿಥ್ಯ ಕೇಸ್‌ನಲ್ಲಿ ಜೈಲಿನ ಕೆಲವು ಅಧಿಕಾರಿಗಳು ಅಮಾನತು ಗೊಂಡಿದ್ದರು. ದರ್ಶನ್ ಹಾಗೂ ರಾಜಾತಿಥ್ಯ ಪಡೆದಿದ್ದಾರೆ ಎನ್ನಲಾದ ಕೆಲವು ಆರೋಪಿಗಳನ್ನು ಬೇರೆ ಜೈಲಿಗೆ ಕಳಿಸಲಾಗಿತ್ತು. ಇಷ್ಟಾದರೂ ಜೈಲಿನಲ್ಲಿರುವ ರೌಡಿಗಳ ಮೊಬೈಲ್‌ಗಳು ಮತ್ತೆ ಸಕ್ರಿಯವಾಗಿರುವುದು ಆತಂಕಕ್ಕೀಡು ಮಾಡಿದೆ. ಜೈಲಿನ ಸುತ್ತಲೂ ಜಾಮರ್ ವ್ಯವಸ್ಥೆ ಅಳವಡಿಸಿದರೂ ಪ್ರಯೋಜನಕ್ಕಿಲ್ಲ ಎಂಬಂತಾಗಿದೆ.
2021ರಲ್ಲಿ ನಡೆದಿದ್ದ ಬಬ್ಲಿ ಕೊಲೆ ಕೇಸ್:
2021ರ ಜುಲೈನಲ್ಲಿ ಕೋರಮಂಗಲದಲ್ಲಿ ಜೋಸೆಫ್ ಅಲಿಯಾಸ್ ಬಬ್ಲಿ ಎಂಬಾತನ ಭೀಕರ ಕೊಲೆ ನಡೆದಿತ್ತು. ಬಬ್ಲಿ ಪತ್ನಿ ಎದುರೇ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಪ್ರಕರಣದಲ್ಲಿ ಸೋಮಶೇ ಖರ್ ಆಲಿಯಾಸ್ ಸೋಮು ಆರೋಪಿಯಾಗಿದ್ದಾನೆ.