Advertisement

ಫೈನಲ್‌ಗೇರಿದ ಬೆಂಗಳೂರು ಬುಲ್ಸ್‌

01:25 AM Jan 01, 2019 | |

ಕೊಚ್ಚಿ: ಪ್ರೊ ಕಬಡ್ಡಿ ಇತಿಹಾಸದಲ್ಲೇ 2ನೇ ಬಾರಿಗೆ ಬೆಂಗಳೂರು ಬುಲ್ಸ್‌ ತಂಡ ಫೈನಲ್‌ ಪ್ರವೇಶಿಸಿದೆ. ಕೊಚ್ಚಿಯಲ್ಲಿ ನಡೆದ 1ನೇ ಕ್ವಾಲಿಫೈಯರ್‌ನಲ್ಲಿ ಎದುರಾಳಿ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ತಂಡವನ್ನು 41-29ರಿಂದ ಸೋಲಿಸಿ, ಬುಲ್ಸ್‌ ನೇರವಾಗಿ ಫೈನಲ್‌ಗೇರಿದೆ. 

Advertisement

ಜ.5ಕ್ಕೆ ಮುಂಬೈನಲ್ಲಿ ನಡೆಯುವ ಅಂತಿಮ ಪಂದ್ಯಕ್ಕೆ ಸಿದ್ಧವಾಗಿದೆ.

ರೋಹಿತ್‌ ಕುಮಾರ್‌ ನಾಯಕತ್ವದ ಬೆಂಗಳೂರು ತಂಡ ಈ ಹಿಂದಿನ 3 ಆವೃತ್ತಿಗಳಲ್ಲಿ ವಿಫ‌ಲವಾಗಿತ್ತು. 2014ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಸೆಮಿಫೈನಲ್‌ಗೇರಿದ್ದರೆ, 2015ರಲ್ಲಿ ನಡೆದ 2ನೇ ಆವೃತ್ತಿಯಲ್ಲಿ ಫೈನಲ್‌ಗೇರಿತ್ತು. ಅದಾದ ನಡೆದ 3 ಆವೃತ್ತಿಗಳಲ್ಲಿ ಸತತವಾಗಿ ಶ್ರಮಿಸಿದರೂ, ಉತ್ತಮ ಫ‌ಲಿತಾಂಶ ಸಾಧ್ಯವಾಗಿರಲಿಲ್ಲ. ಈ ಬಾರಿ ಪವನ್‌ ಸೆಹ್ರಾವತ್‌ ಹಾಗೂ ಕಾಶಿಲಿಂಗ್‌ ಅಡಕೆಯಂತಹ ದಿಗ್ಗಜರ ಸೇರ್ಪಡೆಯಿಂದಾಗಿ ತಂಡದ ಚಹರೆಯೇ ಬದಲಾಗಿ, ಬಿ ವಲಯದಿಂದ ಅಗ್ರಸ್ಥಾನಿಯಾಗಿ ಮೇಲೇರಿತು. ತನ್ನ ಹೆಗ್ಗಳಿಕೆಗೆ ತಕ್ಕಂತೆ ಕ್ವಾಲಿಫೈಯರ್‌ 1ರಲ್ಲೂ ಉತ್ತಮ ಪ್ರದರ್ಶನ ನೀಡಿ ಫೈನಲ್‌ಗೇರಿತು.

ಮಿಂಚಿದ ಪವನ್‌, ರೋಹಿತ್‌: ಬೆಂಗಳೂರು ಬುಲ್ಸ್‌ ಫೈನಲ್‌ಗೇರಲು ಪ್ರಮುಖ ಕಾರಣವಾಗಿದ್ದು, ಪವನ್‌ ಸೆಹ್ರಾವತ್‌ ಅವರ ಆಕ್ರಮಕ ದಾಳಿ ಹಾಗೂ ನಾಯಕ ರೋಹಿತ್‌ ಕುಮಾರ್‌ ಅವರ ಸರ್ವಾಂಗೀಣ ಆಟ. ದಾಳಿಯ ಜೊತೆಗೆ ರಕ್ಷಣಾ ವಿಭಾಗದಲ್ಲೂ ರೋಹಿತ್‌ ಮಿಂಚಿದರು. ಪವನ್‌ ಸೆಹ್ರಾವತ್‌ 9 ಬಾರಿ ಗುಜರಾತ್‌ ಕೋಟೆ ಮೇಲೆ ದಾಳಿ ಮಾಡಿದರು. ಕಡಿಮೆ ದಾಳಿಯಲ್ಲೇ ಮೆರೆದ ಅವರು ಅಷ್ಟರಲ್ಲೂ ಯಶಸ್ವಿಯಾಗಿ 13 ಅಂಕ ಗಳಿಸಿದರು. ರೋಹಿತ್‌ ದಾಳಿಯಲ್ಲಿ ಅಂತಹ ಯಶಸ್ಸು ಸಾಧಿಸಲಿಲ್ಲ. 17 ಬಾರಿ ಎದುರಾಳಿ ಕೋಟೆಯೊಳಗೆ ಅವರು ನುಗ್ಗಿದರೂ, 6 ಅಂಕ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಕೊರತೆಯನ್ನು ರಕ್ಷಣಾ ವಿಭಾಗದಲ್ಲಿ ನೀಗಿಸಿದರು. 6 ಬಾರಿ ಗುಜರಾತ್‌ ಆಟಗಾರರನ್ನು ಕೆಡವಿಕೊಳ್ಳಲು ಯತ್ನಿಸಿ, 5 ಬಾರಿ ಯಶಸ್ವಿಯಾದರು. ಇದರಲ್ಲಿ 6 ಅಂಕ ಲಭಿಸಿತು. ಬೆಂಗಳೂರು ಪರ ಖ್ಯಾತ ಆಟಗಾರ ಕಾಶಿಲಿಂಗ್‌ ಅಡಕೆ ಗಮನ ಸೆಳೆಯಲಿಲ್ಲ.

ಗುಜರಾತ್‌ ಪರ ಸಚಿನ್‌ ಉತ್ತಮವಾಗಿ ದಾಳಿ ನಡೆಸಿದರು. ಅವರು 12 ಬಾರಿ ಬೆಂಗಳೂರು ಕೋಟೆ ಮೇಲೆ ದಾಳಿಯಿಟ್ಟು 7 ಬಾರಿ ಯಶಸ್ವಿಯಾಗಿ 10 ಅಂಕ ಗಳಿಸಿದರು. ಆದರೆ ರಕ್ಷಣಾ ವಿಭಾಗದಲ್ಲಿ ಗುಜರಾತ್‌ ಸಂಪೂರ್ಣವಾಗಿ ವಿಫ‌ಲವಾಯಿತು. ಪರಿಣಾಮ ಸೋಲಿನಲ್ಲಿ ಮುಕ್ತಾಯವಾಯಿತು.

Advertisement

ಫೈನಲ್‌: ಗುಜರಾತ್‌ಗೆ ಇನ್ನೊಂದು ಅವಕಾಶ
ಬೆಂಗಳೂರು ಬುಲ್ಸ್‌ ವಿರುದ್ಧ 1ನೇ ಕ್ವಾಲಿಫೈಯರ್‌ನಲ್ಲಿ ಸೋತಿದ್ದರೂ, ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ಗೆ ಫೈನಲ್‌ಗೇರಲು ಇನ್ನೊಂದು ಅವಕಾಶವಿದೆ. ಜ.3ಕ್ಕೆ 2ನೇ ಕ್ವಾಲಿಫೈಯರ್‌ ಪಂದ್ಯ ನಡೆಯಲಿದೆ. ಮುಂಬೈನಲ್ಲಿ ನಡೆಯುವ ಆ ಪಂದ್ಯದಲ್ಲಿ ಎಲಿಮಿನೇಟರ್‌ ಸುತ್ತಿನಲ್ಲಿ ಗೆದ್ದುಬಂದ ತಂಡ ಎದುರಾಳಿಯಾಗಿರುತ್ತದೆ. ಅಲ್ಲಿ ಗೆದ್ದರೂ ಫೈನಲ್‌ಗೇರುವುದು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next