Advertisement

ಅ.15ರಿಂದ ಬೆಂಗಳೂರು ಪುಸ್ತಕೋತ್ಸವ

11:30 AM Aug 11, 2018 | Team Udayavani |

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಅಕ್ಟೋಬರ್‌ 15ರಿಂದ 21ರವರೆಗೆ “ಬೆಂಗಳೂರು ಪುಸ್ತಕೋತ್ಸವ-2018′ ನಡೆಯಲಿದೆ.
ಮೂರು ವರ್ಷಗಳ ನಂತರ ನಡೆಯುತ್ತಿರುವ ಪುಸ್ತಕ ಮೇಳವನ್ನು ಬೃಹತ್‌ ಪ್ರಮಾಣದಲ್ಲಿ ಆಯೋಜಿಸುತ್ತಿದ್ದು, ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಸಿದ್ಧತೆಗಳಿಗೆ ಚಾಲನೆ ನೀಡಲಾಗಿದೆ.

Advertisement

ವಿಕಾಸಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಪುಸ್ತಕೋತ್ಸವದಲ್ಲಿ ವ್ಯಾಪಾರಿಗಳು ಕನಿಷ್ಠ ಶೇ.15ರಷ್ಟು ರಿಯಾಯಿತಿ ನೀಡುವುದು ಕಡ್ಡಾಯ. ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ, ಸಾಹಿತ್ಯ ಪರಿಷತ್‌, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳ ಮೇಲೆ ಶೇ.50ರಷ್ಟು ರಿಯಾಯಿತಿ ಇರಲಿದೆ. ಈ ಬಾರಿಯ ಪುಸ್ತಕೋತ್ಸವದಲ್ಲಿ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಬಂಗಾಳಿ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆ ಪುಸ್ತಕಗಳ ಮಾರಾಟಕ್ಕೆ 350 ಮಳಿಗೆಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘ ಹಾಗೂ ಇಂಡ್ಯಾ ಕಾಮಿಕ್ಸ್‌ ಆಶ್ರಯದಲ್ಲಿ ಪುಸ್ತಕೋತ್ಸವ ನಡೆಯುತ್ತಿದೆ. 2015ರಿಂದ ಪುಸ್ತಕೋತ್ಸವ ಏರ್ಪಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೊಡ್ಡ ಪ್ರಮಾಣದ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ಪುಸ್ತಕೋತ್ಸವದಲ್ಲಿ ಎರಡು ದಿನ “ಕನ್ನಡ ಸಾಹಿತ್ಯೋತ್ಸವ’ ನಡೆಯಲಿದೆ. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ, ವಿಚಾರಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.

ಪುಸ್ತಕೋತ್ಸವದಲ್ಲಿ ಖ್ಯಾತ ಲೇಖಕರು ಸೇರಿ ಹಿರಿ-ಕಿರಿಯ ಸಾಹಿತ್ಯಗಳ ಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಲವು ಲೇಖಕರ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಕೈಬರಹ ಕುರಿತ ಕಾರ್ಯಾಗಾರಗಳು, ವಿಚಾರ ವಿನಿಮಯ, ಸಂವಾದ, ಉಪನ್ಯಾಸಗಳು, ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದರು.

ಪ್ರತಿ ಪುಸ್ತಕ ಮಳಿಗೆಗಳಿಗೂ ಬಿಬಿಎಂಪಿಯಿಂದ ತಲಾ 1 ಲಕ್ಷ ರೂ. ಮೌಲ್ಯದ ಉಚಿತ ವಿಮೆ. ಪುಸ್ತಕ ಮಳಿಗೆಗಳಲ್ಲಿ ಪುಸ್ತಕ ಕಪಾಟುಗಳ ಅನುಕೂಲ. ನಿರಂತರ ವಿದ್ಯುತ್‌ ಪೂರೈಕೆ ಸೇರಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು. ಕನ್ನಡ ಪುಸ್ತಕಗಳ ಮಳಿಗೆಗಳಿಗೆ 12 ಸಾವಿರ ರೂ., ಇತರೆ ಭಾಷೆ ಪುಸ್ತಕ ಮಳಿಗೆಗಳಿಗೆ 18 ಸಾವಿರ ರೂ. ಹಾಗೂ ಆಂಗ್ಲ ಭಾಷೆ ಪುಸ್ತಕ ಮಳಿಗೆಗಳಿಗೆ 30 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಲಾಟರಿ ಎತ್ತುವ ಮೂಲಕ ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು ಎಂದರು.

Advertisement

ಮೊಬೈಲ್‌, ಇಂಟರ್‌ನೆಟ್‌ ಬಳಕೆಯಿಂದ ಓದುವ ಅಭಿರುಚಿ ಕಡಿಮೆಯಾಗುತ್ತಿದೆ ಎಂಬುದು ಸುಳ್ಳು. ಮೊಬೈಲ್‌ ಬಳಕೆ ಶೇ.10ರಷ್ಟು ಮಾತ್ರ. ಅದು ನಗರ ಪ್ರದೇಶದಲ್ಲಿ ಅಷ್ಟೇ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪುಸ್ತಕಗಳನ್ನು ತಲುಪಿಸಬೇಕಿದೆ. ಪುಸ್ತಕ ಓದುವ ಅಭಿರುಚಿ ವ್ಯಕ್ತಿಗೆ ಸಂತೋಷ ನೀಡಲಿದೆ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಇಂಡ್ಯಾ ಕಾಮಿಕ್ಸ್‌ ನಿರ್ದೇಶಕ ಡಿ.ಎಸ್‌.ರಘುರಾಮ…, ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರು ಸಂಘದ ಅಧ್ಯಕ್ಷ ರಾಮಚಂದ್ರ, ಪ್ರಕಾಶ್‌ ಕಂಬತ್ತಹಳ್ಳಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಮಹಾಲಿಂಗೇಶ್ವರ ಭಟ್‌ ಹಾಜರಿದ್ದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳನ್ನು ಶೇ.50ರ ರಿಯಾಯಿತಿ ದರದಲ್ಲಿ ನೀಡುತ್ತಿದ್ದು, ಈಗಾಗಲೇ 2.50ಲಕ್ಷ ರೂ. ವಹಿವಾಟು ನಡೆದಿದೆ. ಪುಸ್ತಕೋತ್ಸವದಲ್ಲಿಯೂ ಪ್ರಾಧಿಕಾರದ ಎಲ್ಲ ಪ್ರಕಟಣೆಗಳ ಮೇಲೆ ಶೇ.50 ರಿಯಾಯಿತಿ ನೀಡಲಾಗುವುದು.
-ಡಾ.ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next