Advertisement

3ನೇ ಯೂನಿಟ್‌ಗೆ ಬೆಂಗಳೂರು ಬ್ಲಾಕ್‌ ಮಾದರಿ

12:14 PM Feb 17, 2020 | Suhan S |

ಬಾಗಲಕೋಟೆ: ಚಂಡಿಗಡ ಮಾದರಿಯಲ್ಲಿ ನವನಗರ 1ಮತ್ತು 2ನೇ ಯೂನಿಟ್‌ ನಿರ್ಮಿಸಿದ್ದು 3ನೇ ಯೂನಿಟ್‌ಗೆ ಬೆಂಗಳೂರು ಮಹಾನಗರದ ಬ್ಲಾಕ್‌ ಮಾದರಿಯಲ್ಲಿ ನಿರ್ಮಾಣಕ್ಕೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

Advertisement

ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ನಗರದ 523 ಮೀಟರ್‌ನಿಂದ 525 ಮೀಟರ್‌ ವರೆಗಿನ ಸಂತ್ರಸ್ತ ಕುಟುಂಬಗಳಿಗೆ ಪುನರ್‌ವಸತಿ ಕಲ್ಪಿಸಲು ಮೂರನೇ ಹಂತದಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಭೂಸ್ವಾಧೀನಕ್ಕೆ ಹಿನ್ನಡೆ: 3ನೇ ಯೂನಿಟ್‌ ನಿರ್ಮಾಣಕ್ಕೆ ಒಟ್ಟು 1640 ಎಕರೆ ಭೂಮಿ ಅಗತ್ಯವಿದ್ದು, ಈಗಾಗಲೇ ಮುಚಖಂಡಿ, ಬಾಗಲಕೋಟೆ ಹಾಗೂ ಶಿಗಿಕೇರಿ ವ್ಯಾಪ್ತಿಯ ಒಟ್ಟು 1257 ಎಕರೆ 12 ಗುಂಟೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಸುಮಾರು 200 ಕೋಟಿ ಭೂ ಪರಿಹಾರ ನೀಡಲಾಗಿದೆ. ಒಟ್ಟು 1640 ಎಕರೆ ಭೂಮಿಯಲ್ಲಿ 287 ಎಕರೆ 13ಗುಂಟೆ ಭೂಮಿಯ ಮಾಲಿಕರು, ಸ್ವಾಧೀನಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಪೂರ್ಣ ಪ್ರಮಾಣದ ಭೂ ಸ್ವಾಧೀನಕ್ಕೆ ಕೊಂಚ ಹಿನ್ನಡೆಯಾಗಿದೆ.

ಈಗಾಗಲೇ ಮುಚಖಂಡಿಯ 539 ಎಕರೆ 36 ಗುಂಟೆ ಅಗತ್ಯ ಭೂಮಿಯಲ್ಲಿ 417 ಎಕರೆ 25 ಗುಂಟೆ, ಬಾಗಲಕೋಟೆಯ 736 ಎಕರೆ 36 ಗುಂಟೆಯಲ್ಲಿ 480 ಎಕರೆ 12 ಗುಂಟೆ ಹಾಗೂ ಶಿಗಿಕೇರಿಯ 363 ಎಕರೆ 38ಗುಂಟೆಯಲ್ಲಿ 359 ಎಕರೆ 15 ಗುಂಟೆ ಸೇರಿ ಒಟ್ಟು 1257 ಎಕರೆ 12 ಗುಂಟೆ ಭೂಮಿಯನ್ನು ಬಿಟಿಡಿಎ ಸ್ವಾಧೀನಪಡಿಸಿಕೊಂಡಿದೆ. ಬಾಗಲಕೋಟೆ ನಗರ ವ್ಯಾಪ್ತಿಯಲ್ಲಿ ಬರುವ ಭೂ ಮಾಲೀಕರು, ಎಕರೆ-ಗುಂಟೆವಾರು ಪರಿಹಾರದ ಬದಲು, ಅಡಿ ಸುತ್ತಳತೆ ಲೆಕ್ಕದಲ್ಲಿ ಪರಿಹಾರ ನೀಡುವಂತೆ ಕೋರ್ಟ್‌ ಮೊರೆ ಹೋಗಿದ್ದಾರೆ. ಹೀಗಾಗಿ 3ನೇ ಯೂನಿಟ್‌ ನಿರ್ಮಾಣದ ಕಾರ್ಯ ವಿಳಂಬವಾಗಿದೆ ಎನ್ನಲಾಗಿದೆ.

ಸೆಕ್ಟರ್‌ ಬದಲು ಬ್ಲಾಕ್‌: ಮುಳುಗಡೆಗೊಂಡ ಬಾಗಲಕೋಟೆ ನಗರದ 515 ಮೀಟರ್‌ನಿಂದ 523 ಮೀಟರ್‌ ವರೆಗೆ ಒಟ್ಟು ಎರಡು ಹಂತದಲ್ಲಿ ಯೂನಿಟ್‌ 1 ಮತ್ತು 2ನ್ನು ಚಂಡಿಗಡ ಮಾದರಿಯ ಸೆಕ್ಟರ್‌ ನಿರ್ಮಿಸಿ ಪುನರ್‌ವಸತಿ ಕಲ್ಪಿಸಲಾಗಿದೆ. 3ನೇ ಯೂನಿಟ್‌ ಅನ್ನು ಸೆಕ್ಟರ್‌ ಮಾದರಿ ಬದಲು, ಬೆಂಗಳೂರು ಮಹಾನಗರದ ಬ್ಲಾಕ್‌ ಮಾದರಿಯಲ್ಲಿ ಸಿದ್ಧಪಡಿಸಲು ಬಿಟಿಡಿಎ ನೀಲನಕ್ಷೆ ಸಿದ್ಧಪಡಿಸಿದೆ.

Advertisement

ಯೂನಿಟ್‌ 3ರಲ್ಲಿ 300ರಿಂದ 500 ಎಕರೆಗೆ 1 ಬ್ಲಾಕ್‌ದಂತೆ ಆಧುನಿಕ ಮಾದರಿಯ ಒಟ್ಟು 5 ಬ್ಲಾಕ್‌ ಒಳಗೊಂಡ ಲೇಔಟ್‌ ಸಿದ್ಧಪಡಿಸಲು ನೀಲನಕ್ಷೆ ಸಿದ್ಧಪಡಿಸಿದ್ದು, ಬಿಟಿಡಿಎ ಸಭೆಯಲ್ಲಿ ಅನುಮೋದನೆ ಕೂಡ ಸಿಕ್ಕಿದೆ. ಇದರ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದು, ನೀಲನಕ್ಷೆಗೆ ಅನುಮತಿ ಸಿಕ್ಕ ಬಳಿಕ, 3ನೇ ಯೂನಿಟ್‌ನಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಪಡಿಸುವ ಕಾರ್ಯ ಆರಂಭಗೊಳ್ಳಲಿದೆ.

17 ಸಾವಿರ ನಿವೇಶನಕ್ಕೆ ಸಿದ್ಧತೆ: ಯೂನಿಟ್‌-3ರಲ್ಲಿ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲು ವಿವಿಧ ಅಳತೆಯ ಒಟ್ಟು 17,939 ನಿವೇಶನ ಸಿದ್ಧಪಡಿಸಲು ಬಿಟಿಡಿಎ ತಯಾರಿ ಮಾಡಿಕೊಂಡಿದೆ. ಎ ಮಾದರಿ (8/9 ಮೀಟರ್‌)ಯ 8,238, ಬಿ ಮಾದರಿ (9/12 ಮೀಟರ್‌)ಯ 3,866 ನಿವೇಶನ, ಸಿ ಮಾದರಿ (12/18 ಮೀಟರ್‌) 2,236, ಡಿ ಮಾದರಿ (15/25 ಮೀಟರ್‌) 2,262 ಹಾಗೂ ಇ ಮಾದರಿ (18/27 ಮೀಟರ್‌) 1,337 ನಿವೇಶನ ಸೇರಿದಂತೆ ಒಟ್ಟು 17,939 ನಿವೇಶನ ಸಿದ್ಧಪಡಿಸಲಿದೆ.

2421 ಮೂಲ ಸಂತ್ರಸ್ತರು: ಹಳೆಯ ಬಾಗಲಕೋಟೆಯಲ್ಲಿ 523 ಮೀಟರ್‌ನಿಂದ 525 ಮೀಟರ್‌ ವ್ಯಾಪ್ತಿಯಲ್ಲಿ ಒಟ್ಟು 2421 ಜನ ಮೂಲ ಸಂತ್ರಸ್ತರು, 1163 ಜನ ಬಾಡಿಗೆದಾರರು ಸೇರಿ ಒಟ್ಟು 3,584 ಜನ ಸಂತ್ರಸ್ತರಾಗಲಿದ್ದಾರೆ. ಅವರಿಗೆ ನಿವೇಶನ ನೀಡಿ, ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಬೇಕಿರುವುದು ಬಿಟಿಡಿಎ ಜವಾಬ್ದಾರಿ. ಹೀಗಾಗಿ ಈಗಾಗಲೇ 3ನೇ ಯೂನಿಟ್‌ ಸಿದ್ಧಪಡಿಸಲು ಬಿಟಿಡಿಎ ಪ್ರಸಕ್ತ ವರ್ಷ 96 ಕೋಟಿ ಮೊತ್ತದ ವಿವಿಧ ಕಾಮಗಾರಿಗೆ ಅನುದಾನ ಮೀಸಲಿಟ್ಟಿದ್ದು, ನಕ್ಷೆಗೆ ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಆರಂಭಗೊಳ್ಳಲಿವೆ.

ಯೂನಿಟ್‌-3 ಸಿದ್ಧಪಡಿಸಲು ಬಿಟಿಡಿಎ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ನಕ್ಷೆ ಅನುಮೋದನೆಗೆ ಕಳುಹಿಸಿದ್ದು, ಈಚೆಗೆ ನಡೆದ ಸಭೆಯಲ್ಲಿ ಡಿಸಿಎಂ ಕಾರಜೋಳ ಹಾಗೂ ಸ್ಥಳೀಯ ಶಾಸಕ ಡಾ|ಚರಂತಿಮಠ ನಕ್ಷೆ ಅನುಮೋದನೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಶೀಘ್ರ ಅನುಮೋದನೆ ದೊರೆಯಲಿದ್ದು, ಯೂನಿಟ್‌-3 ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು.  –ಅಶೋಕ ವಾಸನದ,  ಬಿಟಿಡಿಎ ಮುಖ್ಯ ಎಂಜಿನಿಯರ್‌

 ಯೂನಿಟ್‌-3ರ ನಕ್ಷೆ ಅನುಮೋದನೆಗೆ ಒತ್ತಾಯಿಸಲಾಗಿದೆ. ಅಲ್ಲದೇ ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ಗೆ ನೀರು ನಿಲ್ಲಿಸಿದಾಗ, ಬಾಗಲಕೋಟೆ ನಗರವನ್ನು 527 ಮೀಟರ್‌ ವೆರೆಗೆ ಮುಳುಗಡೆ ಎಂದು ಘೋಷಿಸಿ, ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು ಹಿಂದೆ ನಮ್ಮ ಸರ್ಕಾರ ಇದ್ದಾಗ ಅನುಮೋದನೆ ಕೊಟ್ಟಿದ್ದೇವು. ಬಳಿಕ ಬಂದ ಸರ್ಕಾರ, ಅದನ್ನು 525 ಮೀಟರ್‌ಗೆ ನಿಗದಿಗೊಳಿಸಿದ್ದು, ಇದರಿಂದ ಹಿನ್ನೀರ ಪಕ್ಕದಲ್ಲೇ ಜನರು ವಾಸವಾಗಲು ಸಾಧ್ಯವಿಲ್ಲ. ಪುನಃ 527 ಮೀಟರ್‌ವರೆಗೆ ಮುಳುಗಡೆ ಘೋಷಣೆ ಮಾಡಲು ಸಂಬಂಧಿಸಿದ ಸಚಿವರು ಹಾಗೂ ಸಿಎಂ ಅವರಿಗೆ ಒತ್ತಾಯಿಸಿದ್ದೇನೆ. – ಡಾ|ವೀರಣ್ಣ ಚರಂತಿಮಠ, ಬಾಗಲಕೋಟೆ ಶಾಸಕ

 

-ಎಸ್‌.ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next