Advertisement
ಹೌದು. ಬಾಂಗಡಿಕೋಟಾ ಎಂದೇ ಕರೆಯಲ್ಪಡುತ್ತಿದ್ದ ಈ ನಗರಕ್ಕೆ ದೊಡ್ಡ ಇತಿಹಾಸವಿದೆ. ವಿಜಯಪುರದ ಇಬ್ರಾಹಿಂ ಆದಿಲ್ ಷಾ (1580-1626) ಕಾಲದಲ್ಲಿ ಆಸಫ್‌ಖಾನ್ ಎಂಬ ಸೇನಾಧಿಪತಿ ದಕ್ಷಿಣದ ಸಾಮ್ರಾಜ್ಯದ ಆಡಳಿತ ನೋಡಿಕೊಳ್ಳುತ್ತ, ಬಾಗಲಕೋಟೆಯಲ್ಲೇ ನೆಲೆಸಿದ್ದ. ಆನಂತರ ಬಾಗಲಕೋಟೆಗೆ ವಿಜಯಪುರದ ಮಂತ್ರಿಯಾಗಿದ್ದ ಸವಣೂರಿನ ನವಾಬ್ ಬಹಿಲಾಲ್ ಖಾನ್ ಆಡಳಿತ ನೋಡಿಕೊಳ್ಳಲು ನೇಮಕಗೊಂಡಿದ್ದ. ಇದೇ ಸಮಯದಲ್ಲಿ ವಿಜಯಪುರದ ಸುಲ್ತಾನನು ಬಾಗಲಕೋಟೆ ನಗರವನ್ನು ತನ್ನ ಮಗಳಾದ ಬಲೀಮ್ ಷಾ ಬೀಬಿಗೆ ಉಡುಗೊರೆಯಾಗಿ ನೀಡಿದನೆಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಈ ಉಡುಗೊರೆ ತನ್ನ ಮಗಳಿಗೆ ಬಳೆಯ ವೆಚ್ಚಕ್ಕಾಗಿ ಕೊಟ್ಟನೆಂಬ ಕಾರಣದಿಂದ ಬಾಂಗಡಿಕೋಟಾ ಎಂದು ಕರೆದನೆಂಬ ಪ್ರತೀತಿ ಇದೆ. ಈ ಬಾಂಗಡಿಕೋಟಾ ಕ್ರಮೇಣ ಬಾಗಲಕೋಟೆಯಾಗಿ ಬಳಕೆಗೆ ಬಂದಿತೆಂದು ಹೇಳಲಾಗುತ್ತದೆ.
Related Articles
Advertisement
ಬಣ್ಣದಾಟಕ್ಕೆ ಸಾಂಸ್ಕೃತಿಕ ಗರಿ: ದೇಶದಲ್ಲೇ ವಿಶೇಷ- ವಿಶಿಷ್ಟವಾಗಿರುವ ಬಣ್ಣದಾಟ, ಹಲಗೆ ಮೇಳಕ್ಕೆ ಸರ್ಕಾರದ ಸಾಂಸ್ಕೃತಿಕ ಮಾನ್ಯತೆ ದೊರೆಯಬೇಕೆಂಬ ಒತ್ತಾಯ ಅತ್ಯಂತ ಹಳೆಯದ್ದು. ಆದರೆ, ಈ ಆಶೆ ಈಗ ಮತ್ತಷ್ಟು ಬಲಗೊಂಡಿದ್ದು, ಇದಕ್ಕೆ ಕಾರಣ ಇದೇ ಊರಲ್ಲಿ ಆಡಿ-ಬೆಳೆದ ಅರವಿಂದ ಲಿಂಬಾವಳಿ ಅವರೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾರೆ. ಇಲ್ಲಿನ ಬಣ್ಣದಾಟ, ಹೋಳಿ ಆಚರಣೆಯ ಪ್ರತಿಯೊಂದು ಮಜಲು ಅವರಿಗೆ ಗೊತ್ತು. ಸ್ವತಃ ಲಿಂಬಾವಳಿ ಕೂಡ ಬಾಲ್ಯದ ದಿನಗಳನ್ನು ಇಲ್ಲಿನ ಬಣ್ಣದಾಟದಲ್ಲಿ ಕಳೆದವರು. ಹೀಗಾಗಿ ಅವರೇ ಸಚಿವರಾಗಿದ್ದರಿಂದ ಆ ಇಲಾಖೆಯಿಂದ ಮಾನ್ಯತೆ ಕೊಡಿಸುತ್ತಾರೆಂಬ ವಿಶ್ವಾಸ ನಗರದ ಜನತೆ ಹೊಂದಿದ್ದಾರೆ.
5 ಲಕ್ಷ ರೂ.ಅನುದಾನ: ಹಲಗೆ ಮೇಳ, ಬಣ್ಣದಾಟ ಸಂಸ್ಕೃತಿ ಉಳಿಸಲು ಜಿಲ್ಲಾಡಳಿತದ ನೆರವೂ ಅಗತ್ಯ. ಹೀಗಾಗಿ ಕನಿಷ್ಠ 5 ಲಕ್ಷ ರೂ.ಅನುದಾನ ಪ್ರತಿವರ್ಷ ನೀಡಬೇಕೆಂಬ ಮನವಿಯನ್ನು ಹೋಳಿ ಆಚರಣೆ ಸಮಿತಿ ಮಾಡುತ್ತಲೇ ಬಂದಿದೆ. ಎರಡು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಸಮಿತಿಯ ಮಹಾಬಲೇಶ್ವರ ಗುಡಗುಂಟಿ, ಸದಾನಂದ ನಾರಾ ಮನವಿ ಸಲ್ಲಿಸಿದ್ದಾರೆ.
ಜತೆಗೆ ಶಾಸಕ ಡಾ|ಚರಂತಿಮಠ, ಮಾಜಿ ಶಾಸಕ ಭಾಂಡಗೆ ಸಹಿತ ಹಲವರು, ಇಲ್ಲಿನ ಪಾರಂಪರಿಕ ಸಂಸ್ಕೃತಿ ಉಳಿಸಲು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವ ಲಿಂಬಾವಳಿ, ಸೂಕ್ತ ಪ್ರಸ್ತಾವನೆ ಸಲ್ಲಿಸಲು ತಮ್ಮ ಇಲಾಖೆಯ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಕೋವಿಡ್ 2ನೇ ಅಲೆಯ ಆತಂಕದಲ್ಲೂ ಹೋಳಿ ಆಚರಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ವರ್ಷವೇ ಸರ್ಕಾರದ ಸಹಯೋಗ ಹೋಳಿ ಹಬ್ಬದಾಚರಣೆಗೆ ದೊರೆಯುತ್ತದೆಯಾ ಎಂಬ ಕುತೂಹಲವಿದೆ.
ಬಾಗಲಕೋಟೆಯ ಹೋಳಿ ಆಚರಣೆ ಒಂದು ವಿಶಿಷ್ಟ ಹಬ್ಬ. ಇದಕ್ಕೆ ಇಲಾಖೆಯಿಂದ ಅನುದಾನ ನೀಡುವ ಜತೆಗೆ ಈ ಸಂಸ್ಕೃತಿ ಉಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯ ಕೇಳಿ ಬಂದಿತ್ತು. ಈ ಕುರಿತು ನಮ್ಮ ಇಲಾಖೆಯ ಸಚಿವರೂ ಸೂಕ್ತ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಹೋಳಿ ಆಚರಣೆ ಕುರಿತ ಪ್ರಸ್ತಾವನೆ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗುವುದು.- ಹೇಮಾವತಿ, ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಶ್ರೀಶೈಲ ಕೆ. ಬಿರಾದಾರ