Advertisement

ಬಂದ್ರು ಎಂಜಿನಿಯರ್

11:10 AM Mar 31, 2017 | Team Udayavani |

ಗಾಂಧಿನಗರಕ್ಕೆ ಮೆಲ್ಲನೆ ಸಾಫ್ಟ್ವೇರ್‌ ಮಂದಿಯ ಆಗಮನವಾಗುತ್ತಿದೆ. ಈಗಾಗಲೇ ಎಂಜಿನಿಯರ್‌ಗಳೆಲ್ಲ ಸೇರಿಕೊಂಡು ಹೊಸ ಬಗೆಯ ಸಿನಿಮಾ ಕೊಟ್ಟು ತಕ್ಕಮಟ್ಟಿಗೆ ಸುದ್ದಿ ಆಗಿರೋದು ಗೊತ್ತೇ ಇದೆ. ಮೊನ್ನೆ ಮೊನ್ನೆಯಷ್ಟೇ ಎಂಜಿನಿಯರಿಂಗ್‌ ಹುಡುಗರ ಕುರಿತ “ಕಿರಿಕ್‌ ಪಾರ್ಟಿ’ ಚಿತ್ರ ಕೂಡ ಜೋರು ಸದ್ದು ಮಾಡಿದ್ದೂ ಗೊತ್ತು.

Advertisement

ಈಗ ಅಂಥದ್ದೇ ರಿಯಲ್‌ ಎಂಜಿನಿಯರ್ ತಂಡವೊಂದು ಸದ್ದಿಲ್ಲದೆಯೇ “ಎಂಜಿನಿಯರ್’ ಎಂಬ ಸಿನಿಮಾ ಮಾಡಿ ಮುಗಿಸಿದೆ. ಇಷ್ಟರಲ್ಲೇ ಅದನ್ನು ತೆರೆಗೆ ತರಲು ತಯಾರು ಮಾಡಿಕೊಳ್ಳುತ್ತಿದೆ. ಅಂದಹಾಗೆ, ಈ ಶೀರ್ಷಿಕೆಗೆ “ಬೈ ಕಾಮನ್‌ ಮ್ಯಾನ್‌’ ಎಂಬ ಅಡಿಬರಹವಿದೆ. ಟೆಕ್ಕಿಯಾಗಿರುವ ವಿನಯ್‌ ರತ್ನ ಸಿದ್ದಿ ಕಳೆದ ಏಳು ವರ್ಷಗಳಿಂದಲೂ ನೃತ್ಯ ಶಾಲೆ ನಡೆಸುತ್ತಿದ್ದಾರೆ. ಅವರಿಗೆ ಕಥೆ ಬರೆಯುವ ಆಸೆ ಹುಟ್ಟಿದ್ದೇ ತಡ, ಒಂದೇ ರಾತ್ರಿಯಲ್ಲಿ ಕಥೆಯೊಂದನ್ನು ಬರೆದರಂತೆ. ಅದನ್ನೇ ಇಟ್ಟುಕೊಂಡು ಯಾಕೆ ಸಿನಿಮಾ ಮಾಡಬಾರದು 
ಅಂತ ತೀರ್ಮಾನಿಸಿ, ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಜತೆಗೆ ನಿರ್ದೇಶನಕ್ಕೂ ಇಳಿಯುವ ಮೂಲಕ ಹೊಸ ಇನ್ನಿಂಗ್ಸ್‌ ಶುರುಮಾಡಿದ್ದಾರೆ ವಿನಯ್‌ ರತ್ನಸಿದ್ದಿ. ಅಂದಹಾಗೆ, ಈ ಸಿನಿಮಾಗೆ ಕೈ ಜೋಡಿಸಿರೋದು ಬಹುತೇಕ ಎಂಜಿನಿಯರ್ ಗೆಳೆಯರು.

ಯಾರೇ ಸಿನಿಮಾ ನೋಡಿದರೂ, ತಮ್ಮ ಬದುಕಿನಲ್ಲಿ ನಡೆದ ಘಟನೆಗಳಂತೆಯೇ ಭಾಸವಾಗುವಷ್ಟರಮಟ್ಟಿಗೆ ಕಥೆ ಮೂಡಿಬಂದಿದೆ
ಎಂಬುದು ನಿರ್ದೇಶಕರ ಮಾತು. ಇಲ್ಲಿ ಮನರಂಜನೆಯ ಜತೆಯಲ್ಲಿ ಸಂದೇಶವೂ ಇದೆ. ಇನ್ನು, ಒಬ್ಬರಲ್ಲ, ಇಬ್ಬರಲ್ಲ, ಮೂವರೂ ಅಲ್ಲ,
ಬರೋಬ್ಬರಿ ಎಂಟು ಮಂದಿ ನಾಯಕಿಯರು ಇಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ರಾಜ್ಯದ ಎಲ್ಲಾ ಜಿಲ್ಲೆಗಳ ಭಾಷೆಯ ಶೈಲಿಯೂ ಇಲ್ಲಿ ಬಳಕೆ ಮಾಡಲಾಗಿದೆ ಎನ್ನುವ ನಿರ್ದೇಶಕರು, “ಒಬ್ಬ ಕಾಮನ್‌ ಮ್ಯಾನ್‌ ಎಷ್ಟೇ ಕಷ್ಟದಲ್ಲಿದ್ದರೂ
ಸಾಧನೆ ಮಾಡಬೇಕು ಎಂಬ ಹುಮ್ಮಸ್ಸಿನಲ್ಲೇ ಬದುಕು ಕಳೆಯುತ್ತಾನೆ. ಆ ಬದುಕಿನ ಪಯಣದಲ್ಲಿ ತೊಂದರೆಗಳು ಎದುರಾದಾಗ
ಆತ್ಮಹತ್ಯೆಗೆ ಶರಣಾಗುವುದು ಬೇಡ. ಬದುಕನ್ನ ಪ್ರೀತಿಸಿ, ಅನುಭವಿಸಬೇಕು ಎಂಬ ಅಂಶ ಚಿತ್ರದಲ್ಲಿದೆ’ ಎಂದು ವಿವರ ಕೊಡುತ್ತಾರೆ ವಿನಯ್‌ ರತ್ನ ಸಿದ್ದಿ. ನಿರ್ದೇಶಕ ವಿನಯ್‌ ಅವರಿಲ್ಲಿ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರಂತೆ. ಬಳ್ಳಾರಿ ಮೂಲದ ಶಮಾತಾಜ್‌ ತುಂಟ ಹುಡುಗಿಯಾಗಿ ಹುಡುಗರನ್ನು ರೇಗಿಸುವ ಪಾತ್ರ ನಿರ್ವಹಿಸಿದ್ದಾರಂತೆ. ನೃತ್ಯ ಶಾಲೆ ವಿದ್ಯಾರ್ಥಿಗಳಾದ ರಾಜೇಶ್‌, ಸೂರ್ಯ, ಚಂದನ್‌ ಇತರರು ಮೊದಲ ಸಲ ನಟಿಸಿದ್ದಾರೆ. ಎರಡು ಹಾಡುಗಳಿಗೆ ರವಿದೇವ್‌ ಸಂಗೀತ ನೀಡಿದ್ದಾರೆ. ಬಹುತೇಕ ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಲಾಗಿದೆ. ಚಂದನ, ಅಮರೇಂದ್ರವರ್ಮ, ಸುಮ, ಪ್ರಭು ಅವರ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next