Advertisement
ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಾಡಿಗಿಟ್ಟ ಬೆಂಕಿಯಿಂದ ತೇಗ, ಬೀಟೆ, ಹೊನ್ನೆ, ಶ್ರೀಗಂಧ ಸೇರಿದಂತೆ ಕೋಟ್ಯಂತರ ಮೌಲ್ಯದ ಅಮೂಲ್ಯವಾದ ಮರುಮುಟ್ಟುಗಳು ಭಸ್ಮವಾಗಿರುವುದು ಮಾತ್ರವಲ್ಲ. ಬೆಲೆಯೇ ಕಟ್ಟಲಾಗದ ಸಾವಿರಾರು ಅಪರೂಪದ ಪ್ರಭೇದದ ಹಕ್ಕಿ, ಪಕ್ಷಿ, ಸಸ್ತನಿ ಸೇರಿದಂತೆ ಸೂಕ್ಷ್ಮಜೀವಿಗಳು ಸುಟ್ಟುಹೋಗಿವೆ ಎಂದು ವನ್ಯಜೀವಿ ಪ್ರಿಯರು ಆತಂಕ ವ್ಯಕ್ತಪಡಿಸುತ್ತಾರೆ.
Related Articles
Advertisement
ಇದಕ್ಕೆ ತಾಜಾ ಉದಾಹರಣೆ 2012ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ವಲಯದಲ್ಲಿ ಕಾಡ್ಗಿಚ್ಚಿನಿಂದ ಈ ಭಾಗದ ಅರಣ್ಯಕ್ಕೆ ಉಂಟಾದ ಗಾಯ ಇನ್ನೂ ಮಾಸಿಲ್ಲ ಎಂಬುದಕ್ಕೆ ತಾಜಾ ಉದಾಹರಣೆಯಾಗಿ ಮೈಸೂರು- ವಿರಾಜಪೇಟೆ ಹೆದ್ದಾರಿ ಬದಿಯಲ್ಲೇ ಗಗನಚುಂಬಿ ಮರಗಳು ಸುಟ್ಟು ಕರಕಲಾಗಿ ಇಂದಿಗೂ ಹಸಿರಾಗದೆ ಇರುವುದು ಕಾಡಿನ ಬೆಂಕಿಯ ನಷ್ಟದ ಅಂದಾಜನ್ನು ಹೇಳುತ್ತದೆ.
ನೆಲಮಟ್ಟದ ಬೆಂಕಿ ಮರ-ಗಿಡಗಳನ್ನೆಲ್ಲ ಭಾಗಶಃ ಸುಟ್ಟು ಅವು ಮತ್ತೆ ಚಿಗುರದಂತೆ ಮಾಡುವುದಲ್ಲದೆ, ಆ ಭಾಗದ ಕಾಡಿನಲ್ಲಿ ತರಗೆಲೆಗಳೇ ಇಲ್ಲದಂತೆ ಮಾಡಿಬಿಡುತ್ತದೆ. ನಿಧಾನಗತಿಯಲ್ಲಿ ನೆಲಮಟ್ಟದ ಅರಣ್ಯವನ್ನು ಆಹುತಿ ತೆಗೆದುಕೊಳ್ಳುವ ಬೆಂಕಿ ಅಪರೂಪದ ಪ್ರಭೇದದ ಹಕ್ಕಿ-ಪಕ್ಷಿಗಳು, ಸಸ್ತನಿಗಳು, ಸರೀಸೃಪಗಳು, ಕ್ರಿಮಿಕೀಟಗಳು ಸೇರಿದಂತೆ ಅಸಂಖ್ಯಾತ ಸೂಕ್ಷ್ಮಜೀವಿಗಳು ಸುಟ್ಟು ಹೋಗಿರುವುದಲ್ಲದೆ,
ನೆಲದಲ್ಲಿ ಗೂಡು ಕಟ್ಟುವ ಹಕ್ಕಿಗಳ ಮರಿ ಹಾಗೂ ಮೊಟ್ಟೆಗಳು, ಪ್ರಾಣಿಗಳ ಮರಿಗಳು, ನಿಧಾನಗತಿಯ ವನ್ಯಜೀವಿಗಳು, ಸರೀಸೃಪಗಳು ತಪ್ಪಿಸಿಕೊಳ್ಳುವ ದಾರಿಕಾಣದೆ ಬೆಂಕಿಗೆ ಆಹುತಿಯಾಗಿವೆ ಮಾತ್ರವಲ್ಲ, ನೆಲದ ಮೇಲೆ ಉದುರಿದ ಬೀಜಗಳನ್ನೆಲ್ಲಾ ಸುಟ್ಟು ಹಾಕಿರುವುದರಿಂದ ಈ ಭಾಗದಲ್ಲಿ ಸಸ್ಯಗಳ ಪುನರುತ್ಪತ್ತಿಯೇ ಸಾಧ್ಯವಿಲ್ಲ ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜತೆಗೆ ಸಸ್ಯಹಾರಿ ಪ್ರಾಣಿಗಳ ಮೇವನ್ನು ಸುಟ್ಟು ಮೇವಿಗೆ ಯೋಗ್ಯವಲ್ಲದ ಲಂಟಾನ- ಯುಪಟೋರಿಯಂ ನಂತಹ ಕಳೆಗಳು ಆವರಿಸಲು ದಾರಿ ಮಾಡಿಕೊಟ್ಟಿದೆ ಕಾಡಿನ ಈ ಬೆಂಕಿ. ಲಂಟಾನಾ- ಯುಪಟೋರಿಯಂ ನಂತಹ ಕಳೆಗಳು ಕಾಡ್ಗಿಚ್ಚಿನಿಂದ ಉಂಟಾದ ಬೂದಿಯನ್ನೇ ಉಪಯೋಗಿಸಿಕೊಂಡು ಚೆನ್ನಾಗಿ ಬೆಳೆಯುವ ಗುಣ ಹೊಂದಿರುವುದರಿಂದ ಬಂಡೀಪುರ ಅರಣ್ಯದ ಬಹುತೇಕ ಭಾಗಗಳಲ್ಲಿ ದಿಂಡಗ, ಬ್ಯಾಟೆ ಮುಂತಾದ ಸಸ್ಯಗಳೇ ಆಕ್ರಮಿಸಿವೆ. ಇದೂ ಕೂಡ ಬಂಡೀಪುರದಲ್ಲಿ ಕಾಡ್ಗಿಚ್ಚು ಅರಣ್ಯ ಇಲಾಖೆ ಸಿಬ್ಬಂದಿಯ ಅಂಕೆಗೆ ಸಿಗದೆ ವ್ಯಾಪಿಸಲು ಕಾರಣವಾಗಿದೆ ಎನ್ನುತ್ತಾರೆ ಪರಿಸರ ತಜ್ಞರು.
ವಿವಿಧ ಉದ್ದೇಶಗಳಿಗೆ…ಸಾಮಾನ್ಯವಾಗಿ ಬೇಸಿಗೆಯ ಪ್ರಖರತೆ ಹೆಚ್ಚಾಗುವ ಫೆಬ್ರವರಿಯಿಂದ ಮೇ ತಿಂಗಳು ಉಷ್ಣ ವಲಯದ ಕಾಡುಗಳಲ್ಲಿ ತರಗೆಲೆಗಳಿಂದ ಮುಚ್ಚಿಕೊಳ್ಳುವುದರಿಂದ ಇಡೀ ಕಾಡನ್ನು ಆಹುತಿ ತೆಗೆದುಕೊಳ್ಳುತ್ತದೆ. ನಿತ್ಯ ಜೀವನಕ್ಕೆ ಅಗತ್ಯವಾದ ಉರುವಲು ಹೊಂದಿಸಲೋ, ಜಾನುವಾರುಗಳ ಮೇವಿಗಾಗಿ ಹೊಸ ಹುಲ್ಲು ಬೆಳೆಯಲಿ ಎಂಬ ಕಾರಣದಿಂದ, ಜೀವನೋಪಾಯಕ್ಕಾಗಿ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವವರು ತರಗೆಲೆ, ಪೊದೆಗಳೆಲ್ಲಾ ನಾಶವಾದರೆ ಬೀಜಗಳು, ಜಿಂಕೆಯ ಕೊಂಬುಗಳು ಸುಲಭವಾಗಿ ಸಿಗುತ್ತವೆ ಎಂಬ ಕಾರಣಕ್ಕೋ, ಜೇನು ಸಂಗ್ರಹಿಸುವವರು ಜೇನ್ನೋಣವನ್ನು ಓಡಿಸಲು, ಧೂಪ ಸಂಗ್ರಹಿಸುವವರು ಉದ್ದೇಶ ಪೂರ್ವಕ ಇಲ್ಲವೇ ಅಜಾಗರೂಕತೆಯಿಂದ ಕಾಡಿಗೆ ಬೆಂಕಿ ಇಡುತ್ತಾರೆ. ಕಳ್ಳ ಬೇಟೆ, ಮರ ಕಳ್ಳ ಸಾಗಣೆಗೆ ಅಡ್ಡಿಪಡಿಸುವ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿಯೇ ಇಡುವ ಬೆಂಕಿ, ಅಜಾಗರೂಕ ಪ್ರವಾಸಿಗರು, ಅರಣ್ಯದಂಚಿನ ಗ್ರಾಮಸ್ಥರು ಬಿಸಾಡುವ ಬೀಡಿ-ಸಿಗರೆಟುಗಳ ಆರಿಸದ ತುಂಡುಗಳ ಸಣ್ಣ ಕಿಡಿಯೂ ಬೆಂಕಿಯಾಗಿ ಕಾಡನ್ನು ಆಹುತಿ ತೆಗೆದುಕೊಳ್ಳಬಲ್ಲವು. ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚು ಹರಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಅಧಿಕಾರಿಗಳೊಡನೆ ಚರ್ಚೆ ನಡೆಸಿ, ತನಿಖೆ ನಡೆಸಲು ಅಧಿಕಾರಿಗಳ ಸಮಿತಿ ರಚಿಸಲಾಗುವುದು.
-ಬಿ.ರಮಾನಾಥ ರೈ, ಅರಣ್ಯ ಸಚಿವ * ಗಿರೀಶ್ ಹುಣಸೂರು