Advertisement

ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚಿಗೆ ಅರಣ್ಯ ರಕ್ಷಕ ಆಹುತಿ

03:45 AM Feb 19, 2017 | Team Udayavani |

ಗುಂಡ್ಲುಪೇಟೆ/ ಎಚ್‌.ಡಿ.ಕೋಟೆ: ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಗೆ ಒಳಪಡುವ ಚಾಮರಾಜನಗರ ಜಿಲ್ಲೆಯ ಕಲ್ಕೆರೆ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅರಣ್ಯ ರಕ್ಷಕನೊಬ್ಬ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದಾನೆ. ಇದೇ ವೇಳೆ, ಇತರ ಮೂವರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಅರಣ್ಯ ಇಲಾಖೆಯ ವಿಶೇಷ ಕಾರ್ಯಾಚರಣೆ ದಳದ ಅರಣ್ಯ ರಕ್ಷಕ, ಧಾರವಾಡ ಮೂಲದ ಮುರುಗೇಶ್‌ (26) ಬೆಂಕಿಗೆ ಆಹುತಿಯಾದವರು. ವಲಯ ಅರಣ್ಯಾಧಿಕಾರಿ ಮೊಳೆಯೂರು ಗಂಗಾಧರ ನಾಯಕ್‌ (31), ವನಪಾಲಕ ಮಧು, ಅರಣ್ಯಾಧಿಕಾರಿ ಹರೀಶ್‌ (32) ಸುಟ್ಟ ಗಾಯಗಳಿಂದ ಅಸ್ವಸ್ಥರಾಗಿದ್ದು, ಎಚ್‌.ಡಿ.ಕೋಟೆ ತಾಲೂಕಿನ ಸರಗೂರು ಸ್ವಾಮಿ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗ್ಗೆ 11ರ ವೇಳೆಗೆ ಕಲ್ಕೆರೆ ಗೆಸ್ಟ್‌ಹೌಸ್‌ ಸಮೀಪ ಬೆಂಕಿ ಕಾಣಿಸಿಕೊಂಡಿತು. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತಲ್ಲೀನರಾದರು. ಈ ವೇಳೆ, ಗಾಳಿಯ ರಭಸಕ್ಕೆ ಬೆಂಕಿಯ ಜ್ವಾಲೆ ಹೆಚ್ಚಾಗಿ, ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಆವರಿಸಿತು. ಈ ವೇಳೆ, ನಾಲ್ವರೂ ಸುಟ್ಟ ಗಾಯಗಳಿಂದ ಅಸ್ವಸ್ಥರಾದರು. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮುರುಗೇಶ್‌, ಮಾರ್ಗಮಧ್ಯೆ ಅಸುನೀಗಿದರು. ಮೂಲತ: ಧಾರವಾಡದವರಾದ ಮುರುಗೇಶ್‌, 2010ರ ಸಾಲಿನಲ್ಲಿ ಅರಣ್ಯ ಇಲಾಖೆಗೆ ನಿಯೋಜನೆಗೊಂಡಿದ್ದರು. ಉಳಿದ ಮೂವರು ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು  ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಎ.ಸಿ.ಎಫ್ ಬೆಳ್ಳಿಯಪ್ಪ ತಿಳಿಸಿದ್ದಾರೆ.

ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಕೆಲ ಕಿಡಿಗೇಡಿಗಳು 5 ಕಡೆ ಬೆಂಕಿ ಇಟ್ಟಿದ್ದು, ಸುಮಾರು 100 ಎಕರೆಗೂ ಹೆಚ್ಚಿನ ಅರಣ್ಯ ಸಂಪತ್ತು ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next