ಗುಂಡ್ಲುಪೇಟೆ(ಚಾಮರಾಜನಗರ): ಮೈಸೂರು ರಾಜ ವಂಶಸ್ಥರಾದ ಜಯಚಾಮರಾಜ ಒಡೆಯರ ಮೊಮ್ಮಗಳು ಶ್ರುತಿ ಕೀರ್ತಿದೇವಿ ರಾಜಾ, ಹಾಯ್ ಬೇಬಿ ಬಾ ಎಂದು ಕೂಗಿದ ಕೂಡಲೇ ರೋಹಿತ್ ಎಂಬ ಆನೆ ಘೀಳಿಟ್ಟು ಓಡೋಡಿ ಬಂದ ಘಟನೆ ಬಂಡೀಪುರದಲ್ಲಿ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾಗೆ ಆಯ್ಕೆಯಾಗಿರುವ 17 ವರ್ಷದ ರೋಹಿತ್ ಎಂಬ ಆನೆಗೂ ಜಯಚಾಮರಾಜ ಒಡೆಯರ ಮೊಮ್ಮಗಳು ಶ್ರುತಿ ಕೀರ್ತಿ ದೇವಿಗು ಅವಿನಾಭಾವ ಸಂಬಂಧವಿದೆ.
ಅನಾಥವಾಗಿದ್ದ ಆರು ತಿಂಗಳ ಮರಿಯಾನೆಯನ್ನು ಶ್ರುತಿಕೀರ್ತಿ ದೇವಿ ತಾಯಿ ದಿ. ವಿಶಾಲಾಕ್ಷಿದೇವಿ ಬಂಡಿಪುರದ ತಮ್ಮ ರೆಸಾರ್ಟ್ ನಲ್ಲಿ 14 ವರ್ಷ ಸಾಕಿ ರೋಹಿತ್ ಎಂದು ನಾಮಕರಣ ಮಾಡಿದರು.
ಆನೆಗೆ 14 ವರ್ಷ ತುಂಬಿದ ನಂತರ ರಾಂಪುರ ಆನೆ ಶಿಬಿರಕ್ಕೆ ಹಸ್ತಾಂತರ ಮಾಡಲಾಗಿತ್ತು. ಆದರೆ ಶ್ರುತಿ ಕೀರ್ತಿ ದೇವಿ ಅವರಿಗೆ ಆನೆ ಮರಿ ಮೇಲಿನ ಪ್ರೇಮ ಇನ್ನೂ ಕೂಡ ಕಡಿಮೆಯಾಗಿಲ್ಲ.
ರೋಹಿತ್ ನಮ್ಮ ಹತ್ರ ಬಂದಾಗ ಆರು ತಿಂಗಳ ಕೂಸು. ನಮ್ಮ ತಾಯಿ ಅದನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದರು. ಅದಕ್ಕೆ 14 ವರ್ಷ ತುಂಬಿದ ಬಳಿಕ ಬಂಡಿಪುರ ಆನೆ ಕ್ಯಾಂಪ್ ಗೆ ಹಸ್ತಾಂತರ ಮಾಡಿದ್ದೇವು. ಆದರೆ ಇಂದಿಗೂ ಅದರ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ. ನನ್ನನ್ನು ಕಂಡರೆ ಆನೆ ಈಗಲೂ ಅಷ್ಟೇ ಪ್ರೀತಿ ತೋರುತ್ತದೆ. ಈಗಲೂ ನನ್ನ ಹುಡುಕಿ ಓಡೋಡಿ ಬರುತ್ತದೆ. ಈ ಮಧ್ಯೆ ಮೈಸೂರು ದಸರಾ ಜಂಬೂ ಸವಾರಿಗೆ ರೋಹಿತ್ ಆಯ್ಕೆ ಆಗಿರೋದು ಖುಷಿ ತಂದಿದೆ. ರೋಹಿತ್ ನಮ್ಮ ಮನೆಯ ಮಗನೇ ಆಗಿದ್ದು, ಪ್ರತಿ ತಿಂಗಳು ರಾಂಪುರ ಕ್ಯಾಂಪ್ ಗೆ ಬಂದು ರೋಹಿತ್ ಜೊತೆಗೆ ಕಾಲ ಕಳೆಯುತ್ತೇನೆ ಎಂದು ಶ್ರುತಿ ಕೀರ್ತಿ ದೇವಿ ಆನೆ ಮೇಲಿನ ಪ್ರೀತಿ ತೆರೆದಿಟ್ಟರು.