Advertisement

ಬಂದರು ಚಟುವಟಿಕೆ ಸಂಪೂರ್ಣ ಸ್ತಬ್ಧ; ಅಪಾರ ನಷ್ಟ

04:48 AM Jan 07, 2019 | Team Udayavani |

ಮಹಾನಗರ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿಯಿದ್ದ ‘ಸುವರ್ಣ ತ್ರಿಭುಜ’ ದೋಣಿ ನಾಪತ್ತೆಯಾಗಿ 22 ದಿನಗಳು ಕಳೆದಿದ್ದು, ನಾಪತ್ತೆಯಾದ ಮೀನುಗಾರರ ಪತ್ತೆಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸಿ ಮಲ್ಪೆ ಮೀನುಗಾರರ ಸಂಘ ಆಯೋಜಿಸಿದ್ದ ‘ರಾಸ್ತ ರೋಕೋ ಚಳವಳಿ’ ಬೆಂಬಲಿಸಿ ರವಿವಾರ ಮಂಗಳೂರು ಬಂದರು ಸಂಪೂರ್ಣ ಸ್ತಬ್ಧವಾಗಿತ್ತು.

Advertisement

ಮಂಗಳೂರು ಮೀನುಗಾರಿಕಾ ಬಂದರಿನಲ್ಲಿನ ಆಳ ಸಮುದ್ರ ಬೋಟ್, ಪರ್ಸಿನ್‌, ಟ್ರಾಲ್‌ ಬೋಟ್ ಹಾಗೂ ಇತರ ಬೋಟುಗಳ ಸಹಿತ 1,200 ಬೋಟುಗಳಿದ್ದು, ಎಲ್ಲ ಬೋಟ್‌ಗಳು ಬಂದರಿನಲ್ಲಿಯೇ ಲಂಗರು ಹಾಕಿದ್ದವು.

7 ಬಸ್‌ಗಳಲ್ಲಿ ಮಲ್ಪೆಗೆ ತೆರಳಿದರು
ಮೀನುಗಾರಿಕಾ ಬಂದ್‌ಗೆ ನಗರದಲ್ಲಿನ ಮೀನುಗಾರರ ಸಂಘ, ಗಿಲ್ಲೆಟ್ ಮೀನು ಗಾರರ ಸಂಘ, ವ್ಯಾಪಾರಸ್ಥರ ಸಂಘ, ಸೀ ಫುಡ್‌ ಬೈಯರ್ ಅಸೋಸಿಯೇಶನ್‌ ಸೇರಿದಂತೆ ಇತರ ಸಂಘಗಳು ಬೆಂಬಲ ಸೂಚಿಸಿದ್ದವು. ಈ ಎಲ್ಲ ಸಂಘಗಳ ಪುರುಷ ಮತ್ತು ಮಹಿಳಾ ಕಾರ್ಮಿಕರು ಸೇರಿದಂತೆ ಸುಮಾರು 1,500ಕ್ಕೂ ಹೆಚ್ಚಿನ ಮಂದಿ ಮಲ್ಪೆಯಲ್ಲಿ ನಡೆದ ರಾಸ್ತ ರೋಕೋ ಚಳವಳಿಯಲ್ಲಿ ಭಾಗವಹಿಸಿದ್ದರು. ಇದಕ್ಕೆಂದು ಮಂಗಳೂರಿನಿಂದ ಏಳು ಖಾಸಗಿ ಬಸ್‌ಗಳಲ್ಲಿ ಕಾರ್ಮಿಕರು ಮಲ್ಪೆಗೆ ತೆರಳಿದ್ದರು.

ಮಾರುಕಟ್ಟೆ ಕೂಡ ಬಂದ್‌
ಸ್ಟೇಟ್ಬ್ಯಾಂಕ್‌ನಲ್ಲಿರುವ ಮೀನು ಮಾರುಕಟ್ಟೆ ಪ್ರತಿದಿನ ಗ್ರಾಹಕರಿಂದ ಕೂಡಿರುತ್ತದೆ. ಆದರೆ ರವಿವಾರ ಕಾರ್ಮಿಕರು ಮೀನು ಮಾರಾಟವನ್ನು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಇಲ್ಲೇ ಪಕ್ಕದಲ್ಲಿರುವ ಒಣ ಮೀನು ಮಾರುಕಟ್ಟೆ ಕೂಡ ಬಂದ್‌ ಆಗಿತ್ತು. ಇದರಿಂದ ಮೀನು ಖರೀದಿ ಮಾಡಲು ಬರುವ ಗ್ರಾಹಕರಿಗೆ ನಿರಾಸೆ ಉಂಟಾಯಿತು. ಮೀನುಗಾರಿಕಾ ಬಂದ್‌ ಹಿನ್ನೆಲೆಯಲ್ಲಿ ನಗರದ ಕೆಲವೊಂದು ಮಾಂಸಾಹಾರಿ ಹೊಟೇಲ್‌ಗ‌ಳಲ್ಲಿ ತೊಂದರೆ ಉಂಟಾಯಿತು.

ಏಕೆಂದರೆ, ಕೆಲವು ಹೊಟೇಲ್‌ಗ‌ಳಲ್ಲಿ ಮೀನು ಸ್ಟಾಕ್‌ ಮಾಡಿಟ್ಟಿರುವುದದಿಲ್ಲ. ಪ್ರತೀ ದಿನ ಮೀನು ಖರೀದಿ ಮಾಡುತ್ತಾರೆ. ಇಂತಹ ಹೊಟೇಲ್‌ಗ‌ಳಲ್ಲಿ ಊಟಕ್ಕೆ ಮೀನು ಸಿಗಲಿಲ್ಲ. ಮೀನುಗಾರಿಕಾ ಬಂದರಿನಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದು, ರವಿವಾರ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹೊರರಾಜ್ಯದ ಕಾರ್ಮಿಕರು ಬಂದರಿನ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸನ್ನಿವೇಶ ಕಂಡುಬಂದಿತ್ತು. ಅಲ್ಲದೆ, ಮೀನುಗಳನ್ನು ತೆಗೆದುಕೊಂಡು ಹೋಗುವ ವಾಹನಗಳು ಕೂಡ ಬಂದರಿನಲ್ಲಿಯೇ ನಿಲ್ಲಿಸಲಾಗಿತ್ತು.

Advertisement

5 ಕೋ.ರೂ.ಗೂ ಹೆಚ್ಚು ನಷ್ಟ
ಮಂಗಳೂರು ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್‌ ಕುಮಾರ್‌ ಅವರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿ ‘ಉಭಯ ಜಿಲ್ಲೆಗಳ ಮೀನುಗಾರರು ಘೋಷಿಸಿರುವ ಬಂದ್‌ನಿಂದಾಗಿ ಮಂಗಳೂರಿನ ಮೀನುಗಾರಿಕಾ ಕ್ಷೇತ್ರಕ್ಕೆ ಸುಮಾರು 5 ಕೋ. ರೂ. ಗೂ ಹೆಚ್ಚಿನ ನಷ್ಟ ಉಂಟಾಗಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿ ದಿನ ಸುಮಾರು 5-7 ಕೋಟಿ ರೂ. ವ್ಯವಹಾರ ನಡೆಯುತ್ತದೆ. ಬಂದ್‌ ಹಿನ್ನೆಲೆಯಲ್ಲಿ ಯಾವುದೇ ಬೋಟ್‌ಗಳು ಮೀನುಗಾರಿಕೆಗೆ ತೆರಳಲಿಲ್ಲ ಎಂದರು.

ಇಂದಿನಿಂದ ಎಂದಿನಂತೆ ಚಟುವಟಿಕೆ
ನಾಪತ್ತೆಯಾಗಿರುವ ಮೀನುಗಾರರನ್ನು ಹುಡುಕುವ ಪ್ರಯತ್ನವನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೂಡಲೇ ಮಾಡಬೇಕು. ಮಂಗಳೂರಿನಲ್ಲಿ ಮೀನುಗಾರಿಕಾ ಬಂದ್‌ ಯಶಸ್ವಿಯಾಗಿದೆ. ಸೋಮವಾರದಿಂದ ಎಂದಿನಂತೆ ಮೀನುಗಾರಿಕಾ ಚಟುವಟಿಕೆಗಳು ನಡೆಯಲಿವೆ.
ಮೋಹನ್‌ ಬೆಂಗ್ರೆ,
  ಕರ್ನಾಟಕ ಪರ್ಸೀನ್‌ ಮೀನುಗಾರರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next