Advertisement
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರೈಸುವ ಹಿನ್ನೆಲೆಯಲ್ಲಿ 75 ವಾರಗಳ ಆಜಾದಿಕ ಅಮೃತ್ ಮಹೋತ್ಸವ್ ಕಾರ್ಯಕ್ರಮದಡಿ ಭಾರತ ಸರಕಾರವು 75 ಗ್ರಾ.ಪಂ.ನ್ನು ವಿಶೇಷವಾಗಿ ಆಯ್ಕೆ ಮಾಡಿರುವುದರಲ್ಲಿ ಬಂದಾರು ಕೂಡಾ ಸ್ಥಾನ ಪಡೆದಿದೆ.
ಬಂದಾರು ಹಾಗೂ ಮೊಗ್ರು ಗ್ರಾ.ಪಂ.ನ್ನು ಒಳಗೊಂಡು 6,163 ಜನಸಂಖ್ಯೆ ಹೊಂದಿರುವ ಗ್ರಾಮವು ಒಂದೊಮ್ಮೆ ಕುಗ್ರಾಮದಂತೆ ಗೋಚರಿಸಿತ್ತು. ಬದಲಾದ ಸನ್ನಿವೇಶದಲ್ಲಿ ಬಂದಾರು ಗ್ರಾ.ಪಂ. ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದೆ. ಉದ್ಯೋಗ ಖಾತರಿ ಹಾಗೂ ವಿವಿಧ ಯೋಜನೆಯಡಿ ಮೂರು ಅಂಗನವಾಡಿಗಳಾದ ಕುಂಟಾಲಪಲ್ಕೆ 12 ಲಕ್ಷ ರೂ., ಪೇರಲ್ದಪಲ್ಕೆ-9 ಲಕ್ಷ ರೂ., ಉಳಿಯ ಅಂಗನವಾಡಿ 3.98 ಲಕ್ಷ ರೂ.ನಲ್ಲಿ ನಿರ್ಮಿಸಲಾಗಿದೆ. ಬಂದಾರು ಗ್ರಾಮ ಪಂಚಾಯತ್, ಬೈಪಾಡಿ, ಪೇರಲ್ದಪಲ್ಕೆ ಒಳಚರಂಡಿ ನಿರ್ಮಾಣ, ಪ್ರತಿ ಶನಿವಾರ ಗ್ರಾಮದ ಶಾಲಾ ವಠಾರ, ಪೇಟೆ, ಪ್ರಮುಖ ಆಯಕಟ್ಟು ಪ್ರದೇಶಗಳಲ್ಲಿ ಶಾಲಾ ಮಕ್ಕಳ ಜತೆಗೂಡಿ ಸ್ವತ್ಛತಾ ಸಪ್ತಾಹ ಹಮ್ಮಿಕೊಳ್ಳುತ್ತಾ ಬಂದಿದೆ. ಇನ್ನುಳಿದಂತೆ ರಕ್ತದಾನ ಶಿಬಿರ, ಆರೋಗ್ಯ ಮೇಳ, ಸರಕಾರಿ ಯೋಜನೆ ಕುರಿತು ಪ್ರತಿ ಮೂರು ತಿಂಗಳಿಗೊಮ್ಮೆ ಮಾಹಿತಿ ಕಾರ್ಯಾಗಾರ ನಡೆಸಿ ಸವಲತ್ತು ಮನೆ ಮನೆಗೆ ತಲುಪಿಸವಲ್ಲಿ ಮಹತ್ತರ ಶ್ರಮ ವಹಿಸಿದೆ.
Related Articles
Advertisement
ಉದ್ಯೋಗ ಖಾತರಿ ಯೋಜನೆ ಸಾಧನೆಉದ್ಯೋಗ ಖಾತರಿ ಯೋಜನೆಯಡಿ ಹತ್ತರ ಸಾಧನೆ ತೋರಿದ್ದು, ಬಂದಾರು ಪಾನೆಕಲ್ಲು ಎಂಬಲ್ಲಿ ಪ.ಜಾ.ಯ 2 ಲಕ್ಷ ರೂ. ವೆಚ್ಚದಲ್ಲಿ ರುದ್ರಭೂಮಿ, ಶ್ರೀರಾಮನಗರದಲ್ಲಿ ಹಿಂದೂ ರುದ್ರಭೂಮಿ ನಿರ್ಮಿಸಿದೆ. 5 ಶಾಲೆಗಳಿಗೆ ಶೌಚಾಲಯ ನಿರ್ಮಾಣ, ಮಾತ್ರವಲ್ಲದೆ ಶಾಸಕರ ನೇತೃತ್ವದಲ್ಲಿ ಹಮ್ಮಿಕೊಂಡ ಜಲಮರುಪೂರಣ ಚಿಂತನೆಯಡಿ ಗ್ರಾಮ ಪಂಚಾಯತ್ ಸೇರಿದಂತೆ 7 ಮನೆಗಳಿಗೆ ಜಲಮರುಪೂರಣ ಘಟಕ ಅಳವಡಿಕೆ, ಅನೇಕ ಶಾಲೆ, ಮನೆಗಳಲ್ಲಿ ಖಾಸಗಿ ಜಲಮರುಪೂರಣ ಘಟಕ, 40ಕ್ಕೂ ಅಧಿಕ ಬಾವಿ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದೆ. ಕಜೆಕೋಡಿ ಪ.ಜಾತಿ ಕಾಲನಿ, ಮೊಗ್ರು ಗ್ರಾಮದ ಕೊಲಬೆಗೆ ಸಾರ್ವಜನಿಕ ಕೊಳವೆ ಬಾವಿ, ನೀರಿನ ವ್ಯವಸ್ಥೆ ಕಲ್ಪಿಸಿದೆ. 621 ಮಂದಿಗೆ 94ಸಿ ವಿತರಣೆ
ಸರಕಾರದ ವಿವಿಧ ಯೋಜನೆ ಅನುಷ್ಠಾನದ ಜತೆಗೆ 5 ವರ್ಷಗಳಲ್ಲಿ 94ಸಿ ಯೋಜನೆಯಡಿ 621 ಮಂದಿಗೆ ಹಕ್ಕುಪತ್ರ, 9/11ಎ ಮುಖೇನ 189 ಮಂದಿಗೆ ಹಕ್ಕುಪತ್ರ ವಿತರಿಸಿದ ಹೆಗ್ಗಳಿಕೆ ಗ್ರಾ.ಪಂ.ಗೆ ಸಲ್ಲುತ್ತದೆ. ಬಸವ ವಸತಿ ಯೋಜನೆಯಡಿ 75 ಮನೆಗಳ ನಿರ್ಮಾಣ, ಬಂದಾರು ಗ್ರಾಮದಲ್ಲಿ ನಿವೇಶನ ರಹಿತರಿಗೆ 14 ಸೈಟ್ ಗುರುತಿಸಲಾಗಿದೆ. 30 ಕಿ.ಮೀ. ನಷ್ಟು ಕಾಂಕ್ರೀಟ್ ಸೇರಿದಂತೆ ಒಳರಸ್ತೆಗಳ ಅಭಿವೃದ್ಧಿ, ಉದ್ಯೋಗ ಖಾತರಿ ಯೋಜನೆಯಡಿ ಬಂದಾರು ಗ್ರಾಮದ ಬಂದಾರು, ಬಾಲಂಪಾಡಿ, ಕಜೆ, ಕುಂಬುಡಂಗೆ, ಮೊಗ್ರು ಗ್ರಾಮದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ನೂರಾರು ಎಕ್ರೆ ಕೃಷಿ ಭೂಮಿಗೆ ನೀರಿನ ಆಶ್ರಯ ನೀಡಿದೆ. ಮಾತ್ರವಲ್ಲದೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ವಾರ್ಡ್ ಆಧರಿಸಿದ ಸದಸ್ಯರ ವಾಟ್ಸ್‌ಆ್ಯಪ್ ಬಳಗ ರಚಿಸಿ ಪ್ರತಿ ಮನೆಗೆ ಗ್ರಾ.ಪಂ. ಕಾರ್ಯಕ್ರಮದ, ಸರಕಾರದ ಯೋಜನೆ ಮಾಹಿತಿ ನೀಡುತ್ತಿದ್ದು, ಜತೆಗೆ ಫ್ಲೆಕ್ಸ್, ಕರಪತ್ರ ಹಂಚುವ ಕೆಲಸ ಮಾಡಿದೆ. ಅಭಿನಂದನೆ
ಮಾ. 12ರಂದು ಭಾರತ ಸರಕಾರದ ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಆಯ್ಕೆಯಾದ ರಾಷ್ಟ್ರದ ಎಲ್ಲ ಗ್ರಾ.ಪಂ.ನೊಂದಿಗೆ ವೆಬಿನಾರ್ ಮುಖೇನ ಸಭೆ ನಡೆಸಿ ಅಭಿನಂದಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಆಯ್ಕೆಯಾದ ಬಂದಾರು ಗ್ರಾ.ಪಂ. 2015ರಿಂದ 2020ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಉದಯ ಬಿ.ಕೆ., ಉಪಾಧ್ಯಕ್ಷೆಯಾಗಿದ್ದ ಚಂದ್ರಾವತಿ ಕೆ.ವೈ. ಹಾಗೂ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಸಿಬಂದಿ ಪ್ರಸಕ್ತ ಸಾಲಿನ ಗ್ರಾ.ಪಂ. ಅಧ್ಯಕ್ಷೆ ಪರಮೇಶ್ವರಿ ಕೆ.ಗೌಡ, ಉಪಾಧ್ಯಕ್ಷ ಗಂಗಾಧರ ಪೂಜಾರಿ ಹರ್ಷ ವ್ಯಕ್ತಪಡಿಸಿದ್ದಾರೆ.