Advertisement

ಬೆಂಗಳೂರಿಂದ ಬಂಡಾಜೆಗೆ Trekking ಬಂದು ದಾರಿ ತಪ್ಪಿದ ಯುವಕ: ಸತತ ಕಾರ್ಯಾಚರಣೆ ಬಳಿಕ ಪತ್ತೆ

10:34 AM May 29, 2023 | Team Udayavani |

ಬೆಳ್ತಂಗಡಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ರಾಣಿಝರಿ ಪ್ರದೇಶದ ಮೂಲಕ ಬಂಡಾಜೆ ಫಾಲ್ಸ್ ಕಡೆ ಟ್ರೆಕ್ಕಿಂಗ್ ಗೆ ಬಂದ ಬೆಂಗಳೂರಿನ ಯುವಕನೊಬ್ಬ ದಾರಿ ತಪ್ಪಿ ನಾಪತ್ತೆಯಾದ ಘಟನೆ (ಮೇ. 28) ರವಿವಾರ ನಡೆದಿದ್ದು, ರಾತ್ರಿ ಕಾರ್ಯಾಚರಣೆ ಬಳಿಕ‌ ಬಂಡಾಜೆ ಹೊಳೆಬದಿ‌ ಪತ್ತೆಯಾಗಿದ್ದಾನೆ.

Advertisement

ಮಹಾರಾಷ್ಟ್ರ ಮೂಲದ, ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಪರೇಶ್ ಕಿಶಾನ್ ಲಾಲ್ ಅಗರ್ವಾಲ್ (25) ಎಂಬ ಯುವಕ ರಾಣಿಝರಿ ಸಮೀಪದವರೆಗೆ ಬೈಕ್ ನಲ್ಲಿ ಬಂದಿದ್ದು, ಇಲ್ಲಿಂದ ಬಂಡಾಜೆ ಫಾಲ್ಸ್ ನ ಬದಿಯಿಂದ ಟ್ರೆಕ್ಕಿಂಗ್ ನಡೆಸಲು ಮುಂದಾಗಿದ್ದಾನೆ.

ಆದರೆ ಸಂಜೆಯಾಗುತ್ತಿದ್ದಂತೆ ದಾರಿ ತಪ್ಪಿದ್ದು ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಕರೆ ಮಾಡಿದ್ದಾನೆ. ಆದರೆ ಆತನಿರುವ ಸ್ಥಳ ಪತ್ತೆ ಹಚ್ಚಲು ಕ್ಲಿಷ್ಟ ಪರಿಸ್ಥಿತಿ ಇತ್ತು. ಇಲ್ಲಿನ ಪರಿಸರದಲ್ಲಿ ಮೊಬೈಲ್ ನೆಟ್ ವರ್ಕ್ ಸಿಗದಿರುವುದು, ಸಂಪೂರ್ಣ ಅರಣ್ಯ ಪ್ರದೇಶವಾದ ಕಾರಣ ಹಾಗೂ ಬಂಡೆಗಳು ಇರುವುದರಿಂದ ಈತ ಇರಬಹುದಾದ ನಿಗದಿತ ಸ್ಥಳ ಹುಡುಕಲು ಹರಸಾಹಸ ನಡೆಸಬೇಕಾಯಿತು.

ಬಾಳೂರು ಪೊಲೀಸರು ಭಂಡಾಜೆ ಫಾಲ್ಸ್ ನ ತಮ್ಮ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದರು. ಬಂಡಾಜೆ ಫಾಲ್ಸ್ ನ ತಳ ಹಾಗೂ ಇತರ ಕೆಲವುಭಾಗಗಳು ದ.ಕ. ಜಿಲ್ಲೆ ವ್ಯಾಪ್ತಿಯಲ್ಲಿದ್ದು ಇಲ್ಲಿಂದ ಬೆಳ್ತಂಗಡಿ ವನ್ಯಜೀವಿ ವಿಭಾಗದ ಸಿಬಂದಿ ಹುಡುಕಾಟ ಮುಂದುವರಿಸಿದ್ದರು.

ಯುವಕನ ಹುಡುಕಾತದಲ್ಲಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸತತ ಪ್ರಯತ್ನ ನಡೆಸಿದ ಬಳಿಕ ಬಂಡಾಜೆ ಹೊಳೆ ಬದಿ‌ ಪತ್ತೆಯಾಗಿದ್ದಾನೆ. ಬಳಿಕ‌ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತಂದು ಬಾಳೂರು ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next