Advertisement

ಆನವಟ್ಟಿಗೆ ಬನವಾಸಿ ಸೇರ್ಪಡೆ: ವಿರೋಧ

11:33 AM Sep 07, 2019 | Suhan S |

ಶಿರಸಿ: ತಾಲೂಕಿನ ಬನವಾಸಿ ವಲಯವನ್ನು ಸೊರಬ ತಾಲೂಕಿನ ಆನವಟ್ಟಿಗೆ ಸೇರಿಸುವ ಸರ್ಕಾರದ ವಿಚಾರವನ್ನು ಇಲ್ಲಿಯ ಜನಪ್ರತಿನಿಧಿಗಳು ತೀವ್ರವಾಗಿ ವಿರೋಧಿಸಿದ್ದು, ಬನವಾಸಿಯನ್ನು ಯಾವುದೇ ರೀತಿಯಿಂದ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

Advertisement

ಈ ಬಗ್ಗೆ ಕನ್ನಡ ಪರ ಸಂಘಟನೆ ಕದಂಬ ಸೈನ್ಯ ಆಯೋಜಿಸಿದ್ದ ಸಭೆಯಲ್ಲಿ ಪ್ರತಿಕ್ರಿಯಿಸಿದರು.

ಬನವಾಸಿ ವಲಯ ವ್ಯಾಪ್ತಿಯ ಎಲ್ಲ ಜನಪ್ರತಿನಿಧಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆನವಟ್ಟಿಗೆ ಬನವಾಸಿ ಸೇರ್ಪಡೆ ಮಾಡುವುದನ್ನು ವಿರೋಧಿಸಿದ್ದಾರೆ.

ಬನವಾಸಿಯನ್ನು ಪ್ರತ್ಯೇಕ ತಾಲೂಕಾಗಿ ಮಾಡಿ, ಶಿರಸಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಮಾಡಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸಭೆಯಲ್ಲಿ ಠರಾವು ಕೂಡಾ ಸ್ವೀಕರಿಸಲಾಯಿತು.

ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ಎಫ್‌. ನಾಯ್ಕ ಮಾತನಾಡಿ, ಯಾವುದೇ ದೃಷ್ಟಿಯಿಂದ ನೋಡಿದರೂ ಆನವಟ್ಟಿ ಸೇರ್ಪಡೆ ಸಾಧ್ಯವಿಲ್ಲ. ಕನ್ನಡಿಗರ ಪ್ರಥಮ ರಾಜಧಾನಿ ಬನವಾಸಿಗೆ ತನ್ನದೇ ಆದ ಸ್ಥಾನಮಾನವಿದೆ ಎಂದರು.

Advertisement

ಕಾರ್ಯಕ್ರಮ ಸಂಯೋಜನೆ ಮಾಡಿದ ಕದಂಬ ಸೈನ್ಯ ಸಂಘಟನೆ ರಾಜ್ಯ ಸಂಚಾಲಕ ಉದಯಕುಮಾರ ಕಾನಳ್ಳಿ ಮಾತನ್ನಾಡಿ ಉತ್ತರ ಕನ್ನಡದಿಂದ ಬನವಾಸಿ ಬೇರೆಡೆ ಒಯ್ಯಲು ಸಾಧ್ಯವೇ ಇಲ್ಲ. ಇದು ಕೇವಲ ಜಿಲ್ಲೆಯ ಆಸ್ತಿಯಷ್ಟೇ ಅಲ್ಲ, ರಾಜ್ಯದ ಆಸ್ತಿ ಕೂಡಾ. ಈಗಾಗಲೇ ಅನೇಕ ಸಾಹಿತಿಗಳು, ಬರಹಗಾರರು, ಚಿಂತಕರು ಕೂಡಾ ಬನವಾಸಿ ಆನವಟ್ಟಿ ಸೇರ್ಪಡೆ ವಿಚಾರ ವಿರೋಧಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸರ್ಕಾರ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದೆಂದು ಹೇಳಿದ ಅವರು, ಬನವಾಸಿ ವಲಯ ವ್ಯಾಪ್ತಿಯಲ್ಲಿ ಈಗಾಗಲೇ ಹೋರಾಟದ ಕಿಚ್ಚು ಹೆಚ್ಚಾಗಿದೆ ಎಂದಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ಬನವಾಸಿ ಗ್ರಾಪಂ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ, ಬನವಾಸಿ ಅಭಿವೃದ್ಧಿಗಾಗಿ, ಬನವಾಸಿ ತಾಲೂಕು ಹೋರಾಟಕ್ಕಾಗಿ ನಾವೆಲ್ಲ ಕಟಿಬದ್ಧರಾಗಬೇಕು ಎಂದರು.

ಶಿರಸಿ ತಾಪಂ ಅಧ್ಯಕ್ಷೆ ಶ್ರೀಲತಾ ಶಿವಾಜಿ ಕಾಳೇರಮನೆ, ಬನವಾಸಿ ಎಲ್ಲಿಯೂ ಹೋಗಲು ಸಾಧ್ಯವಿಲ್ಲ ಎಂದರು. ಜಿಪಂ ಸದಸ್ಯ ಬಸವರಾಜ ದೊಡ್ಮನಿ, ಇತಿಹಾಸ ಪ್ರಸಿದ್ಧ ಬನವಾಸಿ ಚರಿತ್ರೆ, ಕ್ಷೇತ್ರ ಪರಿಗಣನೆ ಮಾಡಿ ಬನವಾಸಿ ಪ್ರತ್ಯೇಕ ತಾಲೂಕು ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು. ಜಿಪಂ ಸದಸ್ಯೆ ರೂಪಾ ಗಣಪತಿ ನಾಯ್ಕ, ಕದಂಬ ಸೈನ್ಯ ಸಂಘಟನೆ ಕಾರ್ಯ ಶ್ಲಾಘಿಸಿದರು.

ಪಂಚಾಯ್ತಿ ಅಧ್ಯಕ್ಷರಾದ ಶಂಕರ ಗೌಡ (ಭಾಶಿ), ಬೋಜಪ್ಪ ನಾಯ್ಕ (ಗುಡ್ನಾಪುರ), ವಿಜಯಾ ನಾಯ್ಕ (ಹಲಗದ್ದೆ), ಬಸಣ್ಣ ನಾಯ್ಕ (ಅಂಡಗಿ) ಹಾಗೂ ಬನವಾಸಿ ವಿಎಸ್‌ಎಸ್‌ ಅಧ್ಯಕ್ಷ ಮಹಾದೇವ ಗೌಡ, ಕದಂಬ ಸೈನ್ಯದ ಉಪಾಧ್ಯಕ್ಷ ಎಸ್‌.ಬಿ. ಗೌಡ ಸಂತೊಳ್ಳಿ, ಜಿಲ್ಲಾಧ್ಯಕ್ಷ ದೀಪಕ ಬಂಗ್ಲೆ, ಎಪಿಎಂಸಿ ಸದಸ್ಯರಾದ ಪ್ರಶಾಂತ ಗೌಡ ಹಾಗೂ ಶಿವಕುಮಾರ ದೇಸಾಯಿಗೌಡ, ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಬಿ. ಶಿವಾಜಿ, ಪಂಚಾಯ್ತಿ ಸದಸ್ಯರು, ವ್ಯವಸಾಯ ಸೇವಾ ಸಂಘಗಳ ಸದಸ್ಯರು ಚರ್ಚಿಸಿದರು.

ಸೆ.10 ರಂದು ಎಲ್ಲಾ ಪಂಚಾಯತಿಗಳು ಠರಾವು ಸ್ವೀಕರಿಸಿದ ನಕಲನ್ನು ಶಿರಸಿ ಸಹಾಯಕ ಆಯುಕ್ತರ ಮುಖಾಂತರ ಸರಕಾರಕ್ಕೆ ರವಾನಿಸಲಾಗುವುದು. ಹಾಗೂ ತದನಂತರ ಒಂದು ದಿನ ಬೃಹತ್‌ ಪ್ರತಿಭಟನೆ ಕೂಡಾ ನಡೆಸಬೇಕು ಎಂದು ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next