ಶೃಂಗೇರಿ: ಮಲೆನಾಡಿನಲ್ಲಿ ಅಡಿಕೆ ತೋಟದ ಮಧ್ಯೆ ಪರ್ಯಾಯ ಬೆಳೆಯಾಗಿ ಬೆಳೆಯಲಾಗಿದ್ದ ಬಾಳೆಯ ಧಾರಣೆ ಇದೀಗ ಕುಸಿತಗೊಂಡಿದ್ದು,ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಉತ್ತಮ ಧಾರಣೆ ಕಂಡಿದ್ದ ಬಾಳೆಗೆ ಇದೀಗ ಇಳಿಮುಖವಾಗುತ್ತಿದೆ. ಮಂಗಗಳ ಹಾವಳಿ ನಡುವೆ ರೈತರು ಬೆಳೆದ ಬಾಳೆ ಮಾರುಕಟ್ಟೆಗೆ ತಂದರೆ ಖರೀದಿಸುವವರಿಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ಹಳದಿ ಎಲೆ ರೋಗ, ಬೇರು ಹುಳದ ಭಾದೆಗೆ ತುತ್ತಾಗಿ ಹಲವಾರು ತೋಟಗಳು ನಾಶವಾಗಿದೆ. ರೈತ ತನ್ನ ಜೀವನ ನಿರ್ವಹಣೆಗಾಗಿ ಅಡಿಕೆ ತೋಟದ ಮಧ್ಯೆ ಪರ್ಯಾಯ ಬೆಳೆ ಬೆಳೆಯಲು ಉತ್ಸಾಹ ತೋರಿದ್ದು, ತೋಟದ ನಡುವೆ ಉಪ ಬೆಳೆಯಾಗಿ ಬಾಳೆ ಬೆಳೆದು ಅದರಿಂದ ಬರುವ ಅಲ್ಪ ಆದಾಯದಲ್ಲಿ ಜೀವನ ನಡೆಸುತ್ತಿದ್ದ ರೈತರು ಬಾಳೆ ಧಾರಣೆ ಕುಸಿತದಿಂದ ಕಂಗಾಲಾಗಿದ್ದಾರೆ.
ಕೆಲವೆಡೆ ರೈತರು ಭತ್ತದ ಬೆಳೆ ಲಾಭದಾಯಕವಲ್ಲವೆಂದು ಅರಿತು ಭತ್ತದ ಗದ್ದೆಗಳಲ್ಲಿ ಪಚ್ಚೆಬಾಳೆ, ನೇಂದ್ರಬಾಳೆ ಬೆಳೆಯುತ್ತಿದ್ದಾರೆ. ಅಡಿಕೆ ತೋಟದ ಮಧ್ಯೆ ಸಾಂಪ್ರದಾಯಿಕವಾಗಿ ಪುಟ್ಟಬಾಳೆಯನ್ನು ಬೆಳೆಯುತ್ತಿದ್ದಾರೆ. ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆದ ಬಾಳೆಯನ್ನು ರಕ್ಷಿಸಲು ಹರ ಸಾಹಸ ಪಡುತ್ತಿರುವುದು ಸಾಮಾನ್ಯವಾಗಿದೆ. ಕಾಡಿನಲ್ಲಿ ಸಿಗುವ ದೂಪ, ರಂಜ, ಹೆಬ್ಬಲಸು ಮುಂತಾದ ಮರಗಳು ಇದೀಗ ಕಣ್ಮರೆಯಾಗುತ್ತಿರುವುದರಿಂದ ಸಹಜವಾಗಿ ಮಂಗಗಳು ಆಹಾರಕ್ಕಾಗಿ ರೈತರ ತೋಟಗಳಿಗೆ ಲಗ್ಗೆ ಇಡುತ್ತಿವೆ. ಬಾಳೆಕಾಯಿ ಸಿಗದೆ ಇದ್ದರೆ ತೋಟದಲ್ಲಿರುವ ಏಲಕ್ಕಿ ಅಡಿಕೆ ಕಾಯಿಗಳನ್ನು ಚೀಪಿ ಎಸೆಯುತ್ತಿವೆ.
ಅಲ್ಪ ಸ್ವಲ್ಪ ತೋಟದಲ್ಲಿ ಬೆಳೆದ ಬಾಳೆಗೆ ಉತ್ತಮ ಧಾರಣೆ ಲಭಿಸಿದಲ್ಲಿ ರೈತರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತಿತ್ತು. ಈಗಾಗಲೇ ಅಡಿಕೆ ಹಳದಿ ಎಲೆ ರೋಗದಿಂದ ತತ್ತರಿಸಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎನ್ನುತ್ತಾರೆ ಪ್ರಗತಿಪರ ಕೃಷಿಕ ಕಲ್ಕುಳಿ ಮಂಜುನಾಥ್. ಸ್ಥಳೀಯ ಮಾರುಕಟ್ಟೆಯಲ್ಲಿ ಪಚ್ಚಬಾಳೆ ಕೆ.ಜಿ ಗೆ 8-11ರೂ., ಮೈಸೂರು ಬಾಳೆ ಹಾಗೂ ಬೂದ ಬಾಳೆ ಕೆ.ಜಿ ಗೆ 7-10 ರೂ., ಕರಿಬಾಳೆ 15-20 ರೂ. ಹಾಗೂ ಪುಟ್ಟಬಾಳೆಗೆ 25-35 ರವರೆಗೆ ಧಾರಣೆ ಇದೆ.
ಶ್ರಾವಣ ಮಾಸದಲ್ಲಿ ಬರುವ ಹಬ್ಬ ಹರಿದಿನಗಳಿಂದಾಗಿ ಬಾಳೆಗೆ ಉತ್ತಮ ಬೇಡಿಕೆ ಇತ್ತು. ಆಗ ಪುಟ್ಟ ಬಾಳೆಗೆ 50-70 ರೂ. ಧಾರಣೆ ಇತ್ತು. ಈಗ ಬೇಡಿಕೆ ಇಲ್ಲದೆ ಇರುವುದರಿಂದ ಸಹಜವಾಗಿ ಧಾರಣೆ ಕಡಿಮೆಯಾಗಿದೆ.
ಪ್ರಸನ್ನ, ಬಾಳೆಕಾಯಿ ಮಂಡಿ ವರ್ತಕ
ರಮೇಶ ಕರುವಾನೆ