ಮಾಗಡಿ: ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಪ್ರಭಾವ ಹಾಗೂ ಹಾಪ್‌ಕಾಮ್ಸ್‌ನ ಬೇಜವಾಬ್ದಾರಿತನದಿಂದ ಬಾಳೆ ಬೆಳೆದಿರುವ ರೈತರು ಕೈಸುಟ್ಟುಕೊಳ್ಳುವಂತಾಗಿದೆ. ಜತೆಗೆ ಮಾರುಕಟ್ಟೆಯಲ್ಲೂ ಬೆಲೆ ಕುಸಿತವಾಗಿದ್ದು, ಸರ್ಕಾರ ಬಾಳೆ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಬಾಳೆ ಬೆಳೆಗಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ. ತಾಲೂಕಿನಲ್ಲಿ ನೂರಾರು ರೈತರು ಬಾಳೆತೋಟ ನಿರ್ಮಿ ಸಿಕೊಂಡಿದ್ದು, ನಷ್ಟದ ಭೀತಿಯಲ್ಲಿದ್ದಾರೆ.
ಒಂದು ಕೇಜಿಗೆ 15 ರಿಂದ 20 ರೂ.ಗೆ ಮಾರಾಟವಾಗುತ್ತಿದ್ದ ಬಾಳೆ, ಈಗ ಕೇವಲ 6 ರಿಂದ 8 ರೂ.ಗೆ ಮಾರಾಟವಾಗುತ್ತಿದೆ. ಕೆಲವೆಡೆ ದಲ್ಲಾಳಿಗಳ ಪ್ರಭಾವ ಹೆಚ್ಚಿದ್ದು, ಹಾಪ್‌ಕಾಮ್ಸ್ ರಾಜ್ಯದ ರೈತರ ಹಿತ ಕಾಪಾಡುವುದನ್ನು ಮರೆತಿದೆ. ದಲ್ಲಾಳಿಗಳು ಬೇರೆ ರಾಜ್ಯದಿಂದ ಕಡಿಮೆ ಬೆಲೆಗೆ ತರಿಸುವ ಬಾಳೆಯನ್ನು ಖರೀದಿಸಿ, ರಾಜ್ಯದ ರೈತರನ್ನು ಕಡೆಗಣಿಸಿದೆ. ರಾಜ್ಯದ ರೈತರು ಶ್ರಮದಿಂದ ಬೆಳೆದ ಬಾಳೆಗೆ ಬೆಲೆ ಸಿಗುತ್ತಿಲ್ಲ. ಹಾಪ್‌ಕಾಮ್ಸ್ ಸಹ ಖರೀದಿಸುತ್ತಿಲ್ಲ. ಹೀಗಾಗಿ ರೈತರು ಬೆಳೆದ ಬಾಳೆಕಾಯಿ ತೋಟದಲ್ಲೆ ಕೊಳೆಯುತ್ತಿದೆ. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.
ಕನಿಷ್ಠ ಪಕ್ಷ ಅಧಿಕಾರಿಗಳು ರೈತರ ತೋಟ ಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ, ಸರ್ಕಾರದ ಗಮನಕ್ಕೆ ತರುವಂತಹ ಪ್ರಾಮಾಣಿಕ ಕೆಲಸ ಮಾಡಿಲ್ಲ. ಸಚಿವರು ರೈತರ ನೋವಿಗೆ ಸ್ಪಂದಿಸದೆ, ಕೇವಲ ದಲ್ಲಾಳಿಗಳ ದಾಸರಾಗಿದ್ದಾರೆ ಎಂಬ ದೂರು ಕೇಳಿದೆ. ದಲ್ಲಾಳಿಗಳ ಕಮಿಷನ್ ಆಸೆಗೆ ರೈತರಿಗೆ ಅನ್ಯಾಯವಾಗು ತ್ತಿದೆ. ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ, ಸೂಕ್ತ ಮಾರುಕಟ್ಟೆ ಒದಗಿಸಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕ ಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ಸಮಯದಲ್ಲಿ ಟ್ರೇಡರ್ ಬೆಳೆ ಖರೀದಿಗೆ ಪ್ರೋತ್ಸಾಹಿಸುತ್ತೇವೆ. ರೈತರ ಬೆಳೆಗೆ ಬೆಲೆ ಒದಗಿಸಲು ಎಪಿಎಂಸಿ ಇರುತ್ತದೆ. ರೈತರು ಅಲ್ಲಿಯೇ ತಮ್ಮ ಬೆಳೆಗೆ ಉತ್ತಮ ಬೆಲೆ ಪಡೆಯಲು ಸಲಹೆ ಸೂಚನೆ ಪಡೆದುಕೊಳ್ಳಬೇಕು.
-ನಾಗರಾಜ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ
* ತಿರುಮಲೆ ಶ್ರೀನಿವಾಸ್